Advertisement

ಪ್ರತಿ ತಾಲೂಕಿನಲ್ಲಿ ತುಳು ಸಾಹಿತ್ಯ ಸಮ್ಮೇಳನ: ಎ.ಸಿ. ಭಂಡಾರಿ

07:05 AM Sep 11, 2017 | Team Udayavani |

ಉಡುಪಿ: ತುಳು ಸಂಸ್ಕೃತಿ ಆಚರಣೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತೀ ತಾಲೂಕಿನಲ್ಲಿ ತುಳು ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ ಎಂದು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ ತಿಳಿಸಿದರು. 
ತುಳುಕೂಟ ಉಡುಪಿ, ಬಾಲಕಿಯರ ಸ.ಪ.ಪೂ. ಕಾಲೇಜು ತುಳು ಸಂಘ, ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತಾಶ್ರಯದಲ್ಲಿ ಸೆ. 8ರಂದು ಕಾಲೇಜಿನ ಸಭಾಂಗಣದಲ್ಲಿ ನಡೆದ ಸೋನದ ಸೇಸೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ತುಳುನಾಡಿನ ದೈವಾರಾಧನೆ, ಆಚರಣೆಗಳು ಗ್ರಾಮಾಂತರ ಪ್ರದೇಶದಲ್ಲೇ ಹೆಚ್ಚಿರುವುದರಿಂದ ತಾಲೂಕು ಮಟ್ಟದ ಸಮ್ಮೇಳನ ಪ್ರಾಮುಖ್ಯತೆ ಪಡೆಯುತ್ತದೆ. ಸಮ್ಮೇಳನದಲ್ಲಿ ಆಯಾ ತಾಲೂಕಿನ ಜನಪದ ವಿದ್ವಾಂಸರು ತುಳು ಸಂಸ್ಕೃತಿ, ಆಚರಣೆಗಳ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲೂ ಸಮ್ಮೇಳನ ನಡೆಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದರು. 

ತುಳು ಕಲಿಕೆಗೆ ಪ್ರೋತ್ಸಾಹ
ತುಳು ಭಾಷೆ, ಸಂಸ್ಕೃತಿಯ ಬೆಳವಣಿಗೆಗಾಗಿ 1970ರಲ್ಲಿ ತುಳುಕೂಟ ರಚಿಸಲಾಯಿತು. ಅಂದಿನ ಕಾಲದಲ್ಲಿ ತುಳು ಭಾಷೆಯ ಬಗ್ಗೆ ತುಳುವರಲ್ಲೇ ತಾತ್ಸಾರ ಮನೋಭಾವವಿತ್ತು. ಒಂದೂವರೆ ಕೋಟಿ ಜನ ತುಳು ಮಾತನಾಡುವವರಿದ್ದಾರೆ. ಅವಿಭಜಿತ ದ.ಕ.ಜಿಲ್ಲೆ¿ 36 ಶಾಲೆಗಳಲ್ಲಿ 5ರಿಂದ 10ನೆಯ ತರಗತಿಯ ವಿದ್ಯಾರ್ಥಿಗಳಿಗೆ ತುಳು ಭಾಷೆ ಕಲಿಸಲಾಗುತ್ತಿದೆ. ಸರಕಾರ ತುಳು ಕಲಿಕೆಗೆ ಪ್ರೋತ್ಸಾಹ ನೀಡಿರುವುದು ಸಂತಸ ತಂದಿದೆ ಎಂದರು. 

ತುಳು ವಿದ್ವಾಂಸ ಡಾ| ವೈ.ಎನ್‌. ಶೆಟ್ಟಿ ಮಾತನಾಡಿ, ತುಳುನಾಡಿನಲ್ಲಿ ಕೃಷಿ ಚಟುವಟಿಕೆ ಕಡಿಮೆಯಾದಂತೆ ಆಚರಣೆಗಳೂ ನಶಿಸುತ್ತಿವೆ. ಯುವಜನತೆ ತುಳು ನಾಡಿನ ಆಚರಣೆಗಳ ಬಗ್ಗೆ ಅರಿತುಕೊಳ್ಳಬೇಕು ಎಂದರು. 

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ವಿದ್ವಾಂಸ ಡಾ| ವೈ.ಎನ್‌.ಶೆಟ್ಟಿ ಹಾಗೂ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಇತಿಹಾಸ ಉಪನ್ಯಾಸಕ ಬಿಲ್ಲಾಡಿ ಸುರೇಂದ್ರ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. 
ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ವಿದ್ಯಾರ್ಥಿಗಳಿಂದ ಹೊಸ್ತಿಲು ಪೂಜೆ ನಡೆಯಿತು. ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ತುಳು ವಿದ್ವಾಂಸ ಬನ್ನಂಜೆ ಬಾಬು ಅಮೀನ್‌, ಉದ್ಯಮಿ ಉದಯ ಶೆಟ್ಟಿ ಮುನಿಯಾಲ್‌, ಗಂಗಾಧರ ಕಿದಿಯೂರು, ಚೈತನ್ಯ ಎಂ.ಜಿ. ಉಪಸ್ಥಿತರಿದ್ದರು. 

Advertisement

ಕಾಲೇಜಿನ ಪ್ರಾಂಶುಪಾಲ ಜಗದೀಶ್‌ ಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ರತ್ನಾಕರ ಇಂದ್ರಾಳಿ ಸ್ವಾಗತಿಸಿ, ನಾಗರಾಜ್‌ ಜಿ.ಎಸ್‌. ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next