ಮಹಾನಗರ: ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆ ಸ್ಥಾನ ಮತ್ತು 8ನೇ ಪರಿಚ್ಛೇದಕ್ಕೆ ಸೇರ್ಪಡೆ ಕುರಿತಂತೆ ಇರುವ ಕಾನೂನು ತೊಡಕು ನಿವಾರಿಸಿ ತುಳು ಭಾಷೆಗೆ ಮಾನ್ಯತೆ ನೀಡುವ ಕೆಲಸ ಮಾಡಲಾಗುವುದು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದರು.
ಬಿಲ್ಲವ ಬ್ರಿಗೇಡ್ ಕೇಂದ್ರೀಯ ಮಂಡಳಿ ಮಂಗಳೂರು, ಬಿಲ್ಲವ ಸಮಾಜದ ಹಿರಿಯರ, ಸಮಾಜ ಬಾಂಧವರ ಸಹಯೋಗದಲ್ಲಿ ನಗರದ ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಶನಿವಾರ ನಡೆದ ಬಿಲ್ಲವ ಸಮಾಜ ಸಾಧಕರಿಗೆ ಸಮ್ಮಾನ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾವೆಲ್ಲರೂ ತುಳುವರು. ತುಳು ಭಾಷೆಗೆ ಅಧಿಕೃತ ಸ್ಥಾನಮಾನದ ಕುರಿತು ಈಗಾಗಲೇ ಚರ್ಚೆಗಳು ಆರಂಭವಾಗಿದೆ. ಸದನದಲ್ಲಿಯೂ ಆ ಕುರಿತು ಪ್ರಶ್ನೆ ಕೇಳಲಾಗಿತ್ತು. ತುಳು ಭಾಷೆಗೆ ಅನ್ಯಾಯವಾಗಲು ಬಿಡುವುದಿಲ್ಲ. ತುಳು ಭಾಷೆಗೆ ಅಧಿಕೃತ ಸ್ಥಾನಮಾನ ತಂದುಕೊಡಲು ಪ್ರಯತ್ನಿಸುತ್ತೇನೆ ಎಂದರು.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಅಕ್ಷತಾ ಪೂಜಾರಿ, ನಿತಿನ್ ಪೂಜಾರಿ ಅವರನ್ನು ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಯಿತು. ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬಿಲ್ಲವ ಮಹಾ ಮಂಡಲ ಉಪಾಧ್ಯಕ್ಷ ಪೀತಾಂಬರ ಹೆರಾಜೆ, ಅಖೀಲ ಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷನವೀನ್ ಚಂದ್ರ ಡಿ. ಸುವರ್ಣ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ನಿರ್ದೇಶಕ ಶರಶ್ಚಂದ್ರ ಸನಿಲ್, ಕರ್ನಾಟಕ ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಮುಂಬಯಿ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಜಿ. ಅಮೀನ್, ಬಿಲ್ಲವರ ಮಹಾಮಂಡಲದ ಮಾಜಿ ಉಪಾಧ್ಯಕ್ಷ ಗಂಗಾಧರ್ ಪೂಜಾರಿ, ಬಿಲ್ಲವ ಬ್ರಿಗೇಡ್ ಕೇಂದ್ರೀಯ ಮಂಡಳಿ ಗೌರವಾಧ್ಯಕ್ಷಸೂರಜ್ ಕುಮಾರ್, ಹಿನ್ನಲೆ ಗಾಯಕಿ ರೇಣುಕಾ ಕಾಣಿಯೂರು ಉಪಸ್ಥಿತರಿದ್ದರು. ಕಲಾವಿದ ದೇವಿಕಿರಣ್ ಗಣೇಶಪುರ ಅವರು ಕ್ಯಾನ್ವಾಸ್‌ನಲ್ಲಿ ಸಚಿವ ಸುನಿಲ್ ಕುಮಾರ್ ಅವರ ಚಿತ್ರ ರಚಿಸಿದರು. ಉಪನ್ಯಾಸ ಕೇಶವ ಬಂಗೇರ ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ದೀಪಕ್ ಕೋಟ್ಯಾನ್ ನಿರೂಪಿಸಿದರು.
ಇದನ್ನೂ ಓದಿ:ದಲಿತ ಬಾಲಕ ದೇವಸ್ಥಾನ ಪ್ರವೇಶ ಪ್ರಕರಣ |ಅಸ್ಪೃಶ್ಯತೆ ಮುಕ್ತ ಗ್ರಾಮಕ್ಕಾಗಿ ಜನತೆ ಪ್ರತಿಜ್ಞೆ
ಬ್ರಹ್ಮಶ್ರೀ ನಾರಾಯಣ ಗುರುಗಳ ಅಧ್ಯಯನ ಗ್ರಂಥ ಮುದ್ರಣ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಈಗಾಗಲೇ ನೂರಾರು ಪುಸ್ತಕಗಳು ಮುದ್ರಣಗೊಳ್ಳುತ್ತಿದೆ. ದಾರ್ಶನಿಕ, ಮಾನವತಾವಾದಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಗ್ರ ಚಿತ್ರಣ, ಜೀವನ ಚರಿತ್ರೆಯ ಬಗ್ಗೆ ಸಮಗ್ರ ಅಧ್ಯಯನ ಒಳಗೊಂಡ ಗ್ರಂಥವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಖೇನ ಹೊರತರಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ವರ್ಷದ ಡಿಸೆಂಬರ್‌ನೊಳಗೆ ಮುದ್ರಣವಾಗಲಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.