Advertisement
ಭಾಷೆಗಳ ಸ್ವಸಾಮರ್ಥ್ಯ ಮತ್ತು ಜಾಗತಿಕ ರಾಜ ವ್ಯವಸ್ಥೆಗಳಲ್ಲಿ ಅವುಗಳ ಸ್ಥಾನ ನಿರ್ಣಯಗಳ ಹೊರತಾಗಿಯೂ ಪ್ರಭುತ್ವದ ಬೆಂಬಲದಿಂದಷ್ಟೇ ಒಂದು ಭಾಷೆ ಪೈಪೋಟಿ ಮಧ್ಯೆ ಬದುಕುಳಿಯಲು ಸಾಧ್ಯ. ದುರದೃಷ್ಟವಶಾತ್ ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರದಿರುವುದರಿಂದ ಪ್ರಭುತ್ವದ ಬೆಂಬಲದಿಂದ ವಂಚಿತವಾಗಿದೆ.
Related Articles
Advertisement
ಲಭ್ಯವಿರುವ ತುಳು ಪ್ರಾಚೀನ ಕೃತಿ ತುಳು ಮಹಾಭಾರತ 15ನೇ ಶತಮಾನಕ್ಕೆ ಸೇರಿದ ತುಳು ಲಿಪಿಯಲ್ಲಿ ಬರೆಯಲ್ಪಟ್ಟದ್ದು. ಅದರಂತೆಯೇ 15ನೇ ಶತಮಾನದಲ್ಲಿ ರಚಿತವಾಗಿ ಈಚೆಗೆ ಪತ್ತೆಯಾಗಿರುವ ತುಳು ಲಿಪಿಯಲ್ಲಿ ಬರೆದ ಇನ್ನೊಂದು ಕೃತಿ ತುಳು ದೇವಿ ಮಹಾತ್ಮೆ. 17ನೇ ಶತಮಾನದಲ್ಲಿ ರಚನೆಗೊಂಡ ಮತ್ತೆರಡು ತುಳು ಮಹಾಕಾವ್ಯಗಳಾದ ತುಳು ಭಾಗವತೋ ಮತ್ತು ಕಾವೇರಿ ಕೃತಿಗಳೂ ಬೆಳಕಿಗೆ ಬಂದಿವೆ. ಶ್ರೀ ಮಧ್ವಾಚಾರ್ಯರು ತುಳು ಲಿಪಿಯಲ್ಲಿಯೇ ತಮ್ಮ ಸಾಹಿತ್ಯವನ್ನು ರಚಿಸಿದ್ದರು. ಸಂಶೋಧಿಸಲ್ಪಟ್ಟ ಇತರ ತಾಳೆಯೋಲೆ ಬರಹಗಳು ತುಳು ಲಿಪಿಗೆ ರೂಪಾಂತರಗೊಂಡ ಅನೇಕ ಸಂಸ್ಕೃತ ಮಂತ್ರಗಳೇ ಆಗಿವೆ. ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಎಷ್ಟು ಭಾಷೆಗಳಿಗೆ ತುಳುವಿನಲ್ಲಿ ಇರುವಷ್ಟು ಸಾಹಿತ್ಯವಿದೆ?
ತುಳುವಲ್ಲಿ ಪ್ರಪ್ರಥಮವಾಗಿ ಸಂಶೋಧನೆ ನಡೆಸಿದವರು ಜರ್ಮನ್ ಮಿಷನರಿಗಳಾದ ರೆ| ಕೆಮರರ್ ಮತ್ತು ರೆ| ಮೇನರ್ ಎಂಬವರು. ರೆ| ಕೆಮರರ್ ತಮ್ಮ ಜೀವಿತಾವಧಿಯಲ್ಲಿ ಸುಮಾರು 3000 ತುಳು ಶಬ್ದಗಳನ್ನು ಸಂಗ್ರಹಿಸಿದರು ಮತ್ತು ಅವುಗಳ ಅರ್ಥವನ್ನು ದಾಖಲೆಗೊಳಿಸಿದರು. ಅವರ ಬಳಿಕ ಆ ಕೆಲಸವನ್ನು ರೆ| ಮೇನರ್ ಮುಂದುವರಿಸಿದರು. ಮೇನರ್ ಆಗಿನ ಮದ್ರಾಸ್ ಸರಕಾರದ ನೆರವಿನಿಂದ 1886ರಲ್ಲಿ ತುಳು ಭಾಷೆಯ ಪ್ರಥಮ ಶಬ್ದಕೋಶವನ್ನು ಪ್ರಕಟಿಸಿದರು. ಉಡುಪಿಯ ಎಂಜಿಎಂ ಕಾಲೇಜಿನ ಗೋವಿಂದ ಪೈ ಸಂಶೋಧನ ಕೇಂದ್ರವು 18 ವರ್ಷಗಳ ತನ್ನ ತುಳು ಪದಕೋಶ (ಲೆಕ್ಸಿಕನ್) ಯೋಜನೆಯನ್ನು 1979ರಲ್ಲಿ ಪ್ರಾರಂಭಿಸಿತ್ತು. ಇದರಲ್ಲಿ ತುಳುವಿನ ಬೇರೆ ಬೇರೆ ಉಪಭಾಷೆಗಳಲ್ಲಿ ಬೇರೆ ಬೇರೆ ವ್ಯಕ್ತಿಗಳಲ್ಲಿ ಸಾಂಪ್ರದಾಯಿಕ ವಿಧಿ ವಿಧಾನಗಳಲ್ಲಿ, ಜನಪದ ಸಾಹಿತ್ಯವಾದ ಪಾಡªನಗಳಲ್ಲಿ ಬಳಸಲಾಗುವ ಪದಗಳನ್ನು ಸೇರಿಸಲಾಗಿದೆ. ಈ ತುಳು ಪದಕೋಶ 1996ರಲ್ಲಿ ದೇಶದಲ್ಲೇ ಅತ್ಯುತ್ತಮ ನಿಘಂಟಿಗೆ ನೀಡಲಾಗುವ ಗುಂಡರ್ಟ್ ಪ್ರಶಸ್ತಿಗೆ ಭಾಜನವಾಯಿತು.
ಅಮೆರಿಕ ಮತ್ತು ಯೂರೋಪು ದೇಶಗಳ ವಿಶ್ವವಿದ್ಯಾನಿಲಯ ಗಳು ತುಳುವನ್ನು ಒಂದು ಪ್ರಮುಖ ಭಾಷೆಯಾಗಿ ಮಾನ್ಯ ಮಾಡಿವೆ. ಗ್ರಾಜುವೇಟ್ ರೆಕಾರ್ಡ್, ಎಕ್ಸಾಮಿನೇಶನ್ (ಜಿ.ಆರ್.ಇ.) ಮತ್ತು ದ ಬೆಸ್ಟ್ ಆಫ್ ಇಂಗ್ಲಿಷ್ ಆ್ಯಸ್ ಎ ಫಾರಿನ್ ಲಾಂಗ್ವೇಜ್‌ನ ಮಾಹಿತಿ ಪತ್ರಿಕೆಯಲ್ಲಿ ತುಳು ಭಾರತದ 17 ಭಾಷೆಗಳಲ್ಲಿ ಒಂದು ಎಂದು ನಮೂದಿಸಲ್ಪಟ್ಟಿದೆ. ಈ ಸಂಸ್ಥೆ ಜಗತ್ತಿನ 133 ಭಾಷೆಗಳಲ್ಲಿ ಪ್ರತಿಯೊಂದಕ್ಕೂ ಕೋಡ್ ಸಂಖ್ಯೆ ನೀಡಿದೆ. ತುಳುನಾಡು ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯ ತೊಟ್ಟಿಲು ಎಂದು ಗುರುತಿಸಿಕೊಂಡಿದೆ. ಎಸ್.ಯು. ಪಣಿಯಾಡಿ, ಎಲ್. ವಿ. ರಾಮಸ್ವಾಮಿ ಅಯ್ಯರ್ ಮತ್ತು ಪಿ.ಎಸ್. ಸುಬ್ರಹ್ಮಣ್ಯ ಮೊದಲಾದ ಭಾಷಾ ಶಾಸ್ತ್ರಜ್ಞರು ತುಳು ದ್ರಾವಿಡ ಭಾಷಾ ಕುಟಂಬದ ಮೂಲ ಬೇರುಗಳಿಂದ ಸ್ವತಂತ್ರವಾಗಿ ಕವಲೊಡೆದ ಪುರಾತನ ಭಾಷೆಗಳಲ್ಲೊಂದು ಎಂದು ಅಭಿಪ್ರಾಯಪಟ್ಟಿದ್ದಾರೆ. ಕ್ರಿ.ಶ. 200ರ ಕಾಲದಲ್ಲೇ ತಮಿಳು ಕವಿ ಮಾಮುಲಾರ್ ಅವರು ತನ್ನ ಒಂದು ಕವಿತೆಯಲ್ಲಿ ತುಳುನಾಡು ಮತ್ತು ತುಳುನಾಡಿನ ಚೆಲುವೆ ನರ್ತಕಿಯರ ಬಗ್ಗೆ ಬಣ್ಣಿಸಿದ್ದಾರೆ. ಹಲ್ಮಿಡಿ ಶಾಸನದಲ್ಲಿ ತುಳುನಾಡು ಆಲುಪರ ರಾಜ್ಯ ಎಂದು ಪ್ರಸ್ತಾಪಿಸಿದ್ದನ್ನು ಕಾಣಬಹುದು. ತುಳು ಪ್ರದೇಶವು 2ನೇ ಶತಮಾನದಲ್ಲಿ ಗ್ರೀಕರ ನಡುವೆ ತೊಲೊಕೊರ ಎಂದು ಪ್ರಚಲಿತದಲ್ಲಿತ್ತು. ಈಗಲೂ ತುಳುನಾಡಿನ ನಾಟಕ ತಂಡಗಳು, ಯಕ್ಷಗಾನ ವಿಶ್ವಮಾನ್ಯವಾಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಶಸ್ತಿಗಳ ಮೂಲಕ ಗಮನ ಸೆಳೆದ ತುಳು ಸಿನೆಮಾಗಳ ಸಂಖ್ಯೆಯೂ ಸಣ್ಣದೇನಲ್ಲ. ತುಳುವಿನಲ್ಲಿ ಕೆಲವು ಪತ್ರಿಕೆಗಳು ಹಾಗೂ ಕೇರಳ ಮತ್ತು ಕರ್ನಾಟಕ ಸರಕಾರದ ಅಧೀನದಲ್ಲಿ ಎರಡು ತುಳು ಅಕಾಡೆಮಿಗಳು ಕಾರ್ಯನಿರ್ವಹಿಸುತ್ತವೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಮದಿಪು ಹೆಸರಿನ ತ್ತೈಮಾಸಿಕವೂ ಪ್ರಕಟವಾಗುತ್ತಿವೆ. ಹಲವಾರು ಕೃತಿಗಳು ತುಳುವಿನಲ್ಲಿ ಮತ್ತು ತುಳು ಕೇಂದ್ರಿತವಾಗಿ ಪ್ರಕಟಗೊಂಡಿವೆ. ತುಳುವಿನ ಮಹತ್ವವನ್ನು ವಿವರಿಸಲು ಇಂಥ ಕೆಲವು ಪ್ರಮುಖ ಪೂರಕ ಅಂಶಗಳಿದ್ದರೂ ಸಂವಿಧಾನದ ಮಾನ್ಯತೆ ಪಡೆಯುವ ವಾದದಲ್ಲಿ ನಮ್ಮ ನಾಯಕರು ಯಾಕೆ ಸೋಲುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ.
ತುಳು ಒಂದು ಸುವ್ಯವಸ್ಥಿತ, ವೈಜ್ಞಾನಿಕ, ಸಾಂಸ್ಕೃತಿಕ ಮತ್ತು ಬೌದ್ಧಿಕವಾಗಿ ಸಮೃದ್ಧ ಶ್ರೀಮಂತ ಭಾಷೆ. ದೇಶದಲ್ಲಿ ಭಾಷೆಯ ಸಮೃದ್ಧಿ ಮತ್ತು ಶ್ರೀಮಂತಿಕೆಗೆ ಅಷ್ಟೇನೂ ಮಹತ್ವವಿಲ್ಲ. ಏಕೆಂದರೆ ಭಾಷೆಯ ಪಾವಿತ್ರ್ಯದ ರಕ್ಷಣೆ ಮತ್ತು ಪೋಷಣೆ ಹೆಚ್ಚಿನ ಮಟ್ಟಿಗೆ ಮನಸ್ಸಿಗೆ ತೋಚಿದಂತೆ ಮಾಡುವುದು ಅಥವಾ ಕೇವಲ ಸಂಖ್ಯೆಗಳ ಆಟವಷ್ಟೆ. ಸರಕಾರದ ಧೋರಣೆಗಳಲ್ಲಿ ಸುಧಾರಣೆಗಳನ್ನು ತರುವಲ್ಲಿ ಬಲವಾದ ಒತ್ತಡ ಹೇರುವುದಕ್ಕೆ ದೇಶದ ಸಂಸತ್ತಿನಲ್ಲಿ ತುಳುನಾಡಿಗೆ ಕಡಿಮೆ ಪ್ರಾತಿನಿಧ್ಯವಿರುವುದೂ ಒಂದು ಪ್ರಬಲ ಅಡಚಣೆಯಾಗಿದೆ.
ತುಳುನಾಡು ಭೌಗೋಳಿಕವಾಗಿ ಮಾತ್ರವಲ್ಲ, ರಾಜಕೀಯ ವಾಗಿಯೂ ಅಸಂಘಟಿತವಾಗಿದೆ. ಭಾರತದ ಸ್ವಾತಂತ್ರ್ಯದ ಮೊದಲ್ಗೊಂಡು ಮತ್ತು ಪ್ರಾಂತ್ಯಗಳ ಪುನಾರಚನೆಯ ಅನಂತರವೂ ತುಳುವರು ತಮ್ಮ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಒತ್ತಾಯಿಸುತ್ತಲೇ ಇದ್ದಾರೆ. ಈ ಮಧ್ಯೆ ಅವರ ಬೇಡಿಕೆ ಮೆಲುದನಿಯಲ್ಲಿದ್ದರೂ ಇತ್ತೀಚೆಗೆ ಅದು ಬಲವಾಗುತ್ತಿದೆ. ಆದರೆ ಸರಕಾರ ಪೂರಕವಾಗಿ ಸ್ಪಂದಿಸುವ ಲಕ್ಷಣ ಇದುವರೆಗೆ ಕಂಡು ಬರುತ್ತಿಲ್ಲ. ತುಳುವರ ಬೇಡಿಕೆಯನ್ನು ಇದೇ ರೀತಿ ನಿರ್ಲಕ್ಷಿಸುತ್ತಾ ಬಂದರೆ ಮುಂದಿನ ದಿನಗಳಲ್ಲಿ ಪ್ರತ್ಯೇಕತೆಯ ಕೂಗು ಇಲ್ಲಿಂದ ಗಟ್ಟಿಯಾಗಿ ಕೇಳಿ ಬರುವ ಅಪಾಯ ಇಲ್ಲದಿರದು.
ನಮ್ಮ ಭಾಷೆಗೆ ಸಂವಿಧಾನದಲ್ಲಿ ನಮ್ಮದೇ ಸರಕಾರದಿಂದ ಮಾನ್ಯತೆ ದೊರೆತಿಲ್ಲ ಎಂದ ಮೇಲೆ ನಾವು ಯಾವ ಪ್ರಜಾಪ್ರಭುತ್ವದ ಕುರಿತು ಮಾತನಾಡುತ್ತಿದ್ದೇವೆ? ತುಳು ಭಾಷೆಗೆ ಮಾನ್ಯತೆ ನೀಡುವಷ್ಟು ಸಮಾಜವಾದಿ ಭಾವನೆ ಸರಕಾರಕ್ಕಿಲ್ಲ ಎಂದ ಮೇಲೆ ಯಾವ ಸಮಾಜವಾದದ ಬಗ್ಗೆ ಮಾತನಾಡಬೇಕು? ತುಳು ಭಾಷೆ ಮಾತನಾಡುವವರು ವಿವಿಧ ಮತಗಳ ಅನುಯಾಯಿಗಳಾಗಿದ್ದಾರೆ. ಒಂದು ಮತಾತೀತ ಭಾಷೆಯ ಮೇಲೆ ಯಾಕೆ ಈ ರೀತಿಯ ನಿರ್ಲಕ್ಷ್ಯ ಎಂಬ ಪ್ರಶ್ನೆಗೆ ಸರಕಾರವೇ ಸೂಕ್ತ ಉತ್ತರ ನೀಡಬೇಕಾಗಿದೆ.
ನಮ್ಮ ಸರಕಾರವು ಇಡೀ ದೇಶವನ್ನು ಸಬಲಗೊಳಿಸಲು ಬಯಸುತ್ತಿರುವುದು ಹೌದಾಗಿದ್ದರೆ, ತುಳುವಿಗೆ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸ್ಥಾನ ನೀಡಲು ಹಿಂಜರಿಯಬಾರದು. ಸಂವಿಧಾನದ ಮಾನ್ಯತೆ ಸಿಕ್ಕಿದರೆ ತುಳುವಿನ ಬೆಳವಣಿಗೆಗೆ ಹೊಸ ಶಕ್ತಿ ಸಿಗಲಿದೆ.
ಸ್ವಾಭಾವಿಕವಾಗಿ ಭಾರತವು ಭಾಷೆಯನ್ನು ನಾಶಗೊಳಿಸುತ್ತಿಲ್ಲ ವಾದರೂ, ಪರೋಕ್ಷವಾಗಿ ದುರ್ಬಲಗೊಳಿಸುತ್ತಿಲ್ಲ ಎಂದು ಹೇಳಲಾಗದು. ಜಾಗತೀಕರಣವು ದೇಶವನ್ನು ಆರ್ಥಿಕತೆಯ ಮಟ್ಟದಲ್ಲಿ ದುರ್ಬಲಗೊಳಿಸಬಹುದು. ಆದರೆ ಅಂತಹ ದುರ್ಬಲಗೊಳಿಸುವಿಕೆ ಹೆಚ್ಚಾದಲ್ಲಿ ಒಂದು ಭಾಷಿಕ ಗುಂಪಿನಲ್ಲಿ ಅಭದ್ರತೆಯ ಭಾವನೆಯನ್ನು ಹೆಚ್ಚಿಸುವುದು. ಹಾಗಾಗಿ ಜಾಗತೀಕರಣವು ಭಾಷೆ ಮತ್ತು ಸಂಸ್ಕೃತಿಗಳ ರಕ್ಷಕನ ಪಾತ್ರವನ್ನು ಸದೃಢಗೊಳಿಸುವುದು ಹೆಚ್ಚು ಸಂಭವನೀಯ. ಕೇಂದ್ರ ಸರಕಾರವು ಈಗ ತುಳುವಿಗೆ ಸಾಂವಿಧಾನಿಕ ಮಾನ್ಯತೆಯನ್ನು ಕೊಡುವ ಮೂಲಕ ಅಸಂಖ್ಯ ತುಳುವರ ಪ್ರೀತಿ, ವಿಶ್ವಾಸವನ್ನು ಗಳಿಸಲು ಮುಂದಾಗಬೇಕು ಮತ್ತು ತುಳುವರ ನ್ಯಾಯೋಚಿತವಾದ ಒಂದು ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಿಕೊಟ್ಟು ಬದ್ಧತೆಯನ್ನು ಮೆರೆಯಬೇಕಾಗಿದೆ.
ಅಲೋಕ್ ರೈ