Advertisement

ತುಳು ಭಾಷೆಗೆ ಶೀಘ್ರವೇ ಅಧಿಕೃತ ರಾಜ್ಯ ಭಾಷೆ ಸ್ಥಾನಮಾನ

12:40 PM Aug 13, 2018 | Team Udayavani |

ಬೆಂಗಳೂರು: ಪಂಚ ದ್ರಾವಿಡ ಭಾಷೆಯಲ್ಲಿ ಒಂದಾಗಿರುವ ತುಳು ಭಾಷೆಗೆ ಶೀಘ್ರದಲ್ಲೇ ಅಧಿಕೃತ ರಾಜ್ಯ ಭಾಷೆಯ ಸ್ಥಾನಮಾನ ಸಿಗಲಿದೆ ಎಂದು ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

ತುಳುವೆರೆಂಕುಲು ಬೆಂಗಳೂರು ಇವರ ವತಿಯಿಂದ ಎಂಎಸ್‌ಆರ್‌ಎಸ್‌ ನಗರದ ಮೂಲ್ಕಿ ಸುಂದರ್‌ರಾಮಶೆಟ್ಟಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಆಟಿಡೊಂಜಿ ಕೂಟ-2018 ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತುಳು ಭಾಷೆಗೆ ಅಧಿಕೃತ ರಾಜ್ಯ ಭಾಷೆ ಸ್ಥಾನಮಾನ ಕೊಡಿಸುವ ನಿಟ್ಟಿನಲ್ಲಿ ಅಕಾಡೆಮಿಯು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಸರ್ಕಾರದ ಮಟ್ಟಿನಲ್ಲಿ ಈ ಬಗ್ಗೆ ಅಂತಿಮ ಹಂತದ ಚರ್ಚೆ ನಡೆದಿದ್ದು, ಶೀಘ್ರದಲ್ಲೇ ನ್ಯಾಯ ಸಿಗಲಿದೆ ಎಂದು ಹೇಳಿದರು.

ತುಳು ಭಾಷೆ ಬಗ್ಗೆ ಇದ್ದ ಕೀಳರಿಮೆ ಹಿಂಜರಿಕೆ ಈಗ ಕಡಿಮೆ ಆಗಿದೆ. ತುಳು ಸ್ನಾತಕೋತ್ತರ ಪದವಿ (ಎಂ.ಎ) ಕೋರ್ಸ್‌ ಆರಂಭವಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಪದವಿ (ಬಿ.ಎ)ಮಟ್ಟದಲ್ಲೂ ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಳ್ಳಬಹುದು. ಪಿಯು ಶಿಕ್ಷಣದಲ್ಲೂ ತುಳು ಭಾಷೆಯನ್ನು ತರಲಾಗುವುದು.

ಈಗಾಗಲೇ ಉಡುಪಿ, ಮಂಗಳೂರು ಸೇರಿ ರಾಜ್ಯ ವಿವಿಧ ಭಾಗಗಳಲ್ಲಿ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ತುಳುವನ್ನು ಒಂದು ಭಾಷೆಯಾಗಿ ಕಲಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತುಳು ಲಿಪಿ ಕಲಿಸುವ ಕಾರ್ಯಕ್ರಮವನ್ನು ಅಕಾಡೆಮಿಯಿಂದಲೇ ಆರಂಭಿಸಲಾಗುವುದು ಎಂದು ತಿಳಿಸಿದರು.

ಜಾಗತಿಕ ಮಟ್ಟದಲ್ಲಿ ತುಳು ಭಾಷೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಮುಂಬರುವ ನವೆಂಬರ್‌ ತಿಂಗಳಲ್ಲಿ ವಿಶ್ವ ತುಳು ಸಮ್ಮೇಳನ ನಡೆಸುತ್ತಿದ್ದೇವೆ. ಅದೇ ರೀತಿ ರಾಜಧಾನಿ ಬೆಂಗಳೂರಿನಲ್ಲಿ ಎಲ್ಲಾ ತುಳು ಸಂಘಟಣೆಗಳು ಸೇರಿ ರಾಜ್ಯಮಟ್ಟದ ಸಮ್ಮೇಳನ ಮಾಡಬೇಕಿದೆ.

Advertisement

ಇನ್ನು ಮಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ತುಳು ಭವನಕ್ಕೆ ಈಗಾಗಲೇ 4 ಕೋಟಿ ರೂ. ವೆಚ್ಚ ಮಾಡಲಾಗಿದ್ದು, 3 ಕೋಟಿ ರೂ. ಅಷ್ಟು ಕಾಮಗಾರಿ ಇನ್ನು ಬಾಕಿಯಿದೆ, ಉಳಿದ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದರು. 

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಮತ್ತು ಕೂಟದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸನ್ಮಾನ ಮಾಡಲಾಯಿತು. ಎಂಎಸ್‌ಆರ್‌ಎಸ್‌ ನಗರ ರೆಸಿಡೆನ್ಸಿ ವೆಲ್‌ಫೇರ್‌ ಅಸೋಸಿಯೇಷನ್‌ ಅಧ್ಯಕ್ಷ ಕರ್ನಲ್‌ ಎ.ಜೆ.ಭಂಡಾರಿ, ಎಂಎಸ್‌ಆರ್‌ಎಸ್‌ ಆಡಿಟೋರಿಯಂ ಟ್ರಸ್ಟ್‌ ಅಧ್ಯಕ್ಷ ರಮಾಕಾಂತ್‌ ಶೆಟ್ಟಿ. ತುಳುವೆರೆಂಕುಲು ಬೆಂಗಳೂರು ಮುಖ್ಯಸ್ಥ ವಿಜಯ್‌ಕುಮಾರ್‌ ಕುಲಶೇಖರ್‌ ಮತ್ತಿತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next