Advertisement
ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವಂತೆ ರಾಜ್ಯ ಸರಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅಗತ್ಯಬಿದ್ದಲ್ಲಿ ತುಳುವರ ನಿಯೋಗದೊಂದಿಗೆ ಕೇಂದ್ರ ಸಂಸ್ಕೃತಿ ಸಚಿವರನ್ನು ಭೇಟಿ ಮಾಡಲಾಗುವುದು ಎಂದು ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವಿನ ಮಾನ-ಸ್ಥಾನಗಳ ಬಗೆಗೆ ಗಹನವಾದ ಚರ್ಚೆ ಹಾಗೂ ಬದ್ಧತೆಯ ಕಾರ್ಯಸೂಚಿಗೆ ಇದು ಸಕಾಲ. ತುಳುಭಾಷೆಗೆ ಭಾರತ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಮಾನ್ಯತೆ ಒದಗಿ ಬರಲಿ ಎಂಬ ಆಶಯ ವಾಸ್ತವಿಕತೆಯ ಗಟ್ಟಿನೆಲದಲ್ಲಿ ತಾರ್ಕಿಕ ಅಂತ್ಯ ಕಾಣಬೇಕಾಗಿದೆ.
Related Articles
Advertisement
2011ರ ಜನಗಣತಿಯ ಪ್ರಕಾರ 18 ಲಕ್ಷ ತುಳು ಭಾಷಿಗರಿದ್ದು, 15 ಲಕ್ಷ ಮಣಿಪುರಿ ಭಾಷಿಗರಿಂದ ಸಂಖ್ಯಾತ್ಮಕವಾಗಿ ಬಾಹುಳ್ಯವಿದ್ದರೂ ಏಕೆ ಇದಕ್ಕೆ ಮಣೆ ಹಾಕಿಲ್ಲ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಇಲ್ಲಿ ಬ್ರಿಟಿಷ್ ಆಳ್ವಿಕೆಯ ದಿನಗಳ ಸೌತ್ ಕೆನರಾ ಜಿಲ್ಲೆಯ ನಾಮಕರಣದೊಂದಿಗೆ ಬೈಂದೂರಿನಿಂದ ಕಾಸರಗೋಡುವರೆಗೆ ಹಾಯಾಗಿ ಮಲಗಿದ್ದ ದಿನಗಳ ತುಳುನಾಡಿನ ಕಿರು ಇತಿಹಾಸವನ್ನೇ ನೆನಪಿಸಬೇಕಾ ಗುತ್ತದೆ. ಮುಂದೆ 1956ರ ಭಾಷಾವಾರು ಪ್ರಾಂತ್ಯ ವಿಭಜನೆಯೊಂದಿಗಿನ ದಕ್ಷಿಣಕನ್ನಡ ಜಿಲ್ಲೆಗೆ ತುಳು ಭಾಷೆ, ತೌಳವ ಸಂಸ್ಕೃತಿ ಅನುಸಂಧಾನಗೊಂಡ ಬಗೆ ನಮ್ಮ ಅರಿವಿಗೆ ಬರುವಂತಹದು. ಇಲ್ಲಿನ ಮೂಲ ಚಿಂತನೆ- ಭಾಷಾದುರಭಿಮಾನವೂ ಅಲ್ಲ; ಅಂಧಾನು ಕರಣೆಯೂ ಅಲ್ಲ. ಬದಲಾಗಿ ಕನಿಷ್ಠ 2 ರಿಂದ 3 ಸಾವಿರ ವರ್ಷಗಳ ಸಾಂಸ್ಕೃತಿಕ ಪರಂಪರೆ, ಮೌಖೀಕ ಭಾಷಾ ಜೀವಂತಿಕೆ, ತುಳು ಲಿಪಿ, ಶಾಸನ, ಲಿಖೀತ ಓಲೆ, ಸಾಹಿತ್ಯ, ಕಟ್ಟು ಕಟ್ಟಳೆಗಳ ಪರಿಚಯ-ಒಟ್ಟಿನ ತುಳುಭಾಷಾ ತೇರಿಗೆ ಸಾರ್ವಕಾಲಿಕ ಮನ್ನಣೆ.
ಇಲ್ಲೊಂದು ಭಾರತೀಯ ಭಾಷಾ ಸಮಗ್ರ ಚಿತ್ರಣ ನೀಡಿ ವಿಷಯವನ್ನು ಇನ್ನಷ್ಟು ವಿಶದೀಕರಿಸಬಹು ದಾಗಿದೆ. ನಮ್ಮ ರಾಷ್ಟ್ರ ಬಹು ಭಾಷಾ ಸಮೃದ್ಧ ನೆಲ. 2001ರ ಜನಗಣತಿಯ ಪ್ರಕಾರ 30 ಭಾಷೆಗಳನ್ನು ಆಡುವವರ ಸಂಖ್ಯೆ ತಲಾ 1 ಮಿಲಿಯ ದಾಟಿದೆ. ಅದೇ ರೀತಿ ಮಾತೃಭಾಷೆಯಾಗಿ 10 ಸಾವಿರ ಸಂಖ್ಯೆ ದಾಟಿದ 122 ಭಾಷೆಗಳು ನಮ್ಮಲ್ಲಿವೆ! ತಾಯ್ನುಡಿಯಾಗಿ, ಆಡು ಭಾಷೆಯ ಪ್ರಬೇಧಗಳು ಸಮಗ್ರ ದೇಶದಲ್ಲಿ 1,599 ಲೆಕ್ಕಕ್ಕೆ ಸಿಕ್ಕಿವೆ. ಉದಾಹರಣೆಗೆ ದೂರದ ನಾಗಾಲ್ಯಾಂಡಿನ ಗುಡ್ಡಗಾಡು ಜನಾಂಗಗಳಲ್ಲಿ 16 ಆಡು ಭಾಷೆಗಳು, ಅರುಣಾಚಲ ಪ್ರದೇಶದಲ್ಲಿ 50 ಆಡುಭಾಷೆಗಳು, ಅದೇ ರೀತಿ ಮೇಘಾಲಯದ 11ಜಿಲ್ಲೆಗಳಲ್ಲಿ ಖಾಸಿ, ಗ್ಯಾರೋ, ಪ್ನಾರ್ ಹೀಗೆ 15 ಆಡು ಭಾಷೆಗಳಿವೆ! ಆದರೆ ಈ ಈಶಾನ್ಯ ಭಾರತದ ಈ ಎಲ್ಲ ರಾಜ್ಯಗಳು ಇಂಗ್ಲೀಷ್ ಭಾಷೆಯನ್ನೇ ರಾಜ್ಯ ಭಾಷೆಯಾಗಿ ಸ್ವೀಕರಿಸಿಬಿಟ್ಟಿವೆ!
ರಾಷ್ಟ್ರೀಯ ಮಟ್ಟದ ಸಿಂಹಾವಲೋಕನದಿಂದ ಮರಳಿ ತುಳು ವರ್ತುಲಕ್ಕೆ ದೃಷ್ಟಿ ಹೊರಳಿಸಿದಾಗ ತುಳು ಭಾಷೆಯ ಜತೆಗೆ 8ನೇ ಪರಿಚ್ಛೇದ ಹಸೆಮಣೆ ಏರಲು ಬಂಜಾರಾ, ಭೋಜು³ರಿ, ಲಢಾಕೀ, ಸಿಕ್ಕಿಮೀಸ್, ಬುಂಧೇಲಿ, ಛತ್ತೀಸ್ ಘರೀ – ಹೀಗೆ ಸಾಲು ಸಾಲು ಭಾಷೆಗಳು ಕಾದು ಕುಳಿತಿವೆ! ಅದರಲ್ಲಿಯೂ ಸಿಕ್ಕಿಂ, ಛತ್ತೀಸ್‌ಗಢ, ಲಡಾಖ್ ಇವೆಲ್ಲ ರಾಜ್ಯ-ಕೇಂದ್ರಾಡಳಿತ ಸ್ಥಾನಮಾನಗಳ ಗಟ್ಟಿ ನೆಲದಲ್ಲಿ ನಿಂತೇ ತಮ್ಮ ಬೇಡಿಕೆಯನ್ನು ಮುಂದೊಡ್ಡುತ್ತಿವೆ. 8ನೇ ಶೆಡ್ನೂಲಿಗೆ ತುಳು ಭಾಷೆ ಪ್ರವೇಶಿಸಿದರೆ, ಕಾನೂನು ಭಾಷಾಂತರ, ಸಂಸತ್, ಶಾಸನ ಸಭೆಗಳಲ್ಲಿಯೂ ತುಳು ಭಾಷೆಯಲ್ಲಿಯೇ ವಿಚಾರ ಮಂಡನೆಗೆ ಅವಕಾಶ, ಸ್ಪರ್ಧಾತ್ಮಕ ಪರೀಕ್ಷೆಯ ಸಾಧ್ಯತೆ, ಅಧಿಕೃತ ಭಾಷಾಂತರ, ಸಾಹಿತ್ಯ ಪರಿಷತ್ ಮನ್ನಣೆ- ಹೀಗೆ ಪ್ರಧಾನ ಭೂಮಿಕೆ ಹೊಂದಬಹುದಾಗಿದೆ. ಆದರೂ ಈಗಲೂ ಸಂವಿಧಾನದತ್ತವಾದ 345ನೇ ವಿಧಿ ಅನ್ವಯ ರಾಜ್ಯ ಸರಕಾರದ ಭೂಮಿಕೆಯಲ್ಲಿ ತುಳು ಭಾಷಾ ಕಲಿಕೆಗೆ, ಪಠ್ಯ ಪುಸ್ತಕಕ್ಕೆ, ತುಳು ಅಕಾಡೆಮಿ, ಜಾನಪದ ಸಾಹಿತ್ಯಕ್ಕೆ ಪ್ರೋತ್ಸಾಹ ಸ್ವಾಗತಾರ್ಹ. ಕೊನೆಯದಾಗಿ ಇಲ್ಲೊಂದು ತೊಡಕಿನ ಅಂಶವೆಂದರೆ, 2004ರಲ್ಲಿನ ಸೀತಾಕಾಂತ ಮಹಾಪಾತ್ರ ವರದಿಯನ್ವಯ 8ನೇ ಪರಿಚ್ಛೇದದೊಳಗೆ ಭಾಷೆ ಯೊಂದನ್ನು ಸೇರಿಸುವ ಮಾನದಂಡವನ್ನೇ ಕೇಂದ್ರ ಸರಕಾರ ಈ ತನಕವೂ ನಿಖರವಾಗಿ ಗುರುತಿ ಸಲೇ ಇಲ್ಲ! ಈ ಎಲ್ಲ ಏರುಪೇರುಗಳ ಮಧ್ಯೆ, ಅತ್ಯಂತ ಪ್ರಾಚೀನ ಎನಿಸಿದ ತೌಳವ ಸೀಮೆಯ ಆಡು ಭಾಷೆ, ಸಾಂವಿಧಾನಿಕ ನೆಲಗಟ್ಟಿನಲ್ಲಿ ಭವಿಷ್ಯದ ಬೆಳಕು ಕಾಣುವಂತಾಗಲಿ ಎಂಬ ಶುಭ ಹಾರೈಕೆ ನಮ್ಮದು.
ಡಾ| ಪಿ. ಅನಂತಕೃಷ್ಣ ಭಟ್