Advertisement
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನರು ಹಿಂದೆ ಹೊಟ್ಟೆಪಾಡಿಗಾಗಿ ವಿವಿಧ ರಾಜ್ಯಕ್ಕೆ ಉದ್ಯೋಗ ಅರಸಿಕೊಂಡು ಹೋಗಿ ಅಲ್ಲಿ ಹಲವು ತುಳು ಸಂಘಗಳನ್ನು ಕಟ್ಟಿ ಬೆಳೆಸಿದ್ದಾರೆ. ಅದೇ ರೀತಿ ಬೆಂಗಳೂರಿನಲ್ಲಿ 1972ರಲ್ಲಿ ಪ್ರಾರಂಭವಾದ “ತುಳುಕೂಟ, ಬೆಂಗಳೂರು’ ಸಂಘವು ಸಮಾಜ ಮುಖೀ ಕಾರ್ಯ ಮಾಡುತ್ತಾ ಜನರ ಮನ್ನಣೆಗೆ ಪಾತ್ರವಾಗಿದೆ.
Related Articles
Advertisement
ಇಂದು ಸುವರ್ಣ ಮಹೋತ್ಸವ: ತುಳುಕೂಟ ಬೆಂಗಳೂರು 50 ವರ್ಷ ತುಂಬಿದ ಈ ಶುಭ ಸಂದರ್ಭದಲ್ಲಿ ಸುವರ್ಣ ಮಹೋತ್ಸವ (ಬಂಗಾರª ಪರ್ಬ) ಇಂದು (ನ.24) ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆಯ ವರೆಗೆ ಅರಮನೆ ಮೈದಾನದಲ್ಲಿ ಆಚರಿಸಲಾಗುತ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕಾರ್ಯ ಕ್ರಮ ಉದ್ಘಾಟಿಸಲಿದ್ದಾರೆ.
ವಿಶ್ವ ತುಳುಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ ಮತ್ತು ಜಾನಪದ ನೃತ್ಯ, ಕಲೆ, ಸಂಗೀತ, ಯಕ್ಷಗಾನ, ತುಳು ವಿದ್ವಾಂಸರಿಂದ ವಿಚಾರ ಗೋಷ್ಠಿ, ನಗೆಹಬ್ಬ (ಖ್ಯಾತ ಕಲಾವಿದರಿಂದ) ‘ಸ್ಮರಣ ಸಂಚಿಕೆ’ ಬಿಡುಗಡೆ ಹಮ್ಮಿಕೊಳ್ಳಲಾಗಿದೆ. ತುಳು ಭಾಷೆಗೆ ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸಿರುವ /ಸಾಧನೆ ಮಾಡಿರುವ ಗಣ್ಯರಿಗೆ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತಿದೆ.
ತುಳುನಾಡಿನ ಆಚರಣೆಗಳು: ಪ್ರತಿ ವರ್ಷ ತುಳುನಾಡಿನ ಐದಾರು ಆಚರಣೆಗಳನ್ನು ಬೆಂಗಳೂರಿನಲ್ಲಿ ನಡೆಸುವ ಮೂಲಕ ಕರಾವಳಿ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರತಿ ವರ್ಷ ಹೊಸ ಅಕ್ಕಿ ಊಟ (ಪುದ್ದಾರ್) ಎಂಬ ಕಾರ್ಯಕ್ರಮ ನಡೆಸುತ್ತಿದೆ. ಇನ್ನು ಆಟಿ ತಿಂಗಳಲ್ಲಿ ಊರಿನಿಂದ ಕೆಲ ಉತ್ಪನ್ನ ತರಿಸಿಕೊಂಡು ಕೆತ್ತೆ ಕಷಾಯ ಮಾಡಲಾಗುತ್ತಿದೆ. ಆಟಿ ತಿಂಗಳಲ್ಲಿ ಈ ಕಷಾಯ ಕುಡಿದರೆ ಆರೋಗ್ಯಕ್ಕೆ ಬಹಳ ಉತ್ತಮ ಎಂಬ ಪ್ರತೀತಿ ಇದೆ. ಜತೆಗೆ ಭೂಮಿ ಪೂಜೆ (ಕೆದ್ದಸ ) ಯಂತಹ ದಕ್ಷಿಣ ಕನ್ನಡ ಭಾಗದ ಹಲವಾರು ಧಾರ್ಮಿಕ ಆಚರಣೆಗಳನ್ನು ಈ ಸಂಘಟನೆ ನಡೆಸುತ್ತಿದೆ. ಪ್ರತಿ ವರ್ಷ ತುಳುನಾಡಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿದ್ಯಾಭ್ಯಾಸಕ್ಕೆ ನೆರವಾಗಲು 10 ಸಾವಿರ ರೂ. ಸ್ಕಾಲರ್‌ಶಿಪ್ ಕೊಡಲಾಗುತ್ತಿದೆ.
“ತುಳುಕೂಟ, ಬೆಂಗಳೂರು’ಗೆ ಇನ್ನೂ ಸಿಕ್ಕಿಲ್ಲ ಜಾಗ: “ತುಳೂಕೂಟ, ಬೆಂಗಳೂರು’ ಸಂಘಟನೆಗೆ 50 ವರ್ಷವಾದರೂ ಸೂಕ್ತ ಜಾಗವಿಲ್ಲ. ರಾಜ್ಯದ ಹಲವಾರು ಹಳೇ ಸಂಘಟನೆಗಳಿಗೆ ಸರ್ಕಾರವು ಜಾಗ ನೀಡಿ ಅದರ ಏಳಿಗೆಗೆ ಸಹಕರಿಸಿದೆ. ಆದರೆ, ನಮಗೆ ಕನಿಷ್ಠ 5 ಸೆಂಟ್ಸ್ ಜಾಗ ಕೊಟ್ಟಿಲ್ಲ ಎಂಬ ಬೇಸರ ಇದೆ. ಬಿಡಿಎನಲ್ಲಿ ಜಾಗಕ್ಕೆ ಅರ್ಜಿ ಸಲ್ಲಿಸಿದ್ದರೂ 12 ವರ್ಷಗಳಿಂದ ಬಾಕಿ ಉಳಿದಿದೆ. ಕಂಬಳ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಕೊಟ್ಟಾಗ ಅವರಿಗೆ ನಮ್ಮ ಸಮಸ್ಯೆಗಳನ್ನು ವಿವರಿಸಿ ಸಂಘಕ್ಕೆ ಜಾಗ ಕೊಡಿಸುವಂತೆ ಮನವಿ ಮಾಡುತ್ತೇವೆ. ಬೆಂಗಳೂರಿನ ಯಾವುದೇ ಭಾಗದಲ್ಲೂ ಜಾಗ ಕೊಟ್ಟರೆ ಸಾಕು ಎಂದು ಸಂಘದ ಅಧ್ಯಕ್ಷ ಸುಂದರ್ ರಾಜ್ ರೈ ಉದಯವಾಣಿಗೆ ತಿಳಿಸಿದ್ದಾರೆ.
1972ರಲ್ಲಿ “ತುಳೂಕೂಟ, ಬೆಂಗಳೂರು’ ಸಂಘಟನೆ ಪ್ರಾರಂಭವಾದಗ ಶಿವಾನಂದ ವೃತ್ತದ ಬಳಿ ಇದರ ಬಾಡಿಗೆ ಕಚೇರಿಯಿತ್ತು. ಈಗಲೂ ಅಲ್ಲೇ ಇದ್ದೇವೆ. ಸಂಘವು ಯಶಸ್ವಿಯಾಗಿ 50 ವರ್ಷ ಪೂರೈಸಿರುವುದು ಸಂತಸ ಉಂಟಾಗಿದೆ. -ಸುಂದರ್ ರಾಜ್ ರೈ, ಅಧ್ಯಕ್ಷರು, “ತುಳುಕೂಟ, ಬೆಂಗಳೂರು’
-ಅವಿನಾಶ ಮೂಡಂಬಿಕಾನ