Advertisement
ನನ್ನ ಮೊದಲ ಸಿನೆಮಾ ಗುಬ್ಬಚ್ಚಿಗಳು (2008). ಅಲ್ಲಿಂದ ಆರಂಭವಾದ ಸಿನೆಮಾ ಯಾನ ಇಂದು ಪಡ್ಡಾಯಿ (2017) ಮೂಲಕ ಸುಮಾರು ಹತ್ತು ವರ್ಷ ಸಾಗಿಬಂದಿದೆ. ಪಡ್ಡಾಯಿ ಚಿತ್ರಕ್ಕೆ ಅತ್ಯುತ್ತಮ ತುಳು ಚಿತ್ರ ರಾಷ್ಟ್ರಪ್ರಶಸ್ತಿ ದೊರೆತಿರುವ ಹಿನ್ನೆಲೆಯಲ್ಲಿ, ಈ ಚಿತ್ರದ ಯಾನ ಮತ್ತೆ ನೆನಪಾಗುತ್ತಿದೆ. ಶೇಕ್ಸ್‌ಪಿಯರ್ ನಾಟಕಗಳನ್ನು ಓದಿ, ಅದರ ರೂಪಾಂತರಗಳನ್ನು ರಂಗದ ಮೇಲೆ, ಸಿನೆಮಾ ತೆರೆಯ ಮೇಲೆ ನೋಡಿ ಬೆಳೆದವನು ನಾನು. ಹೀಗೆ ನಾನೂ ಒಂದು ಸಿನೆಮಾ ಯಾಕೆ ಮಾಡಬಾರದು ಎಂದು ಚಿತ್ರಕಥೆ ಬರೆಯಲು ಹೊರಟೆ. ದೇಶದಲ್ಲಿ ನಡೆಯುತ್ತಿದ್ದ ಅನೇಕ ವಿದ್ಯಮಾನಗಳಿಂದ ತೊಡಗಿ ಮಂಗಳೂರಿನ ಪರಿಸರದ ಸುತ್ತಲಿನ ತಲ್ಲಣಗಳು ಸದಾ ನನ್ನನ್ನು ಕಾಡುತ್ತಲೇ ಇದ್ದವು. ಮ್ಯಾಕ್‌ಬೆತ್ ನಾಟಕದ ಮಹತ್ವಾಕಾಂಕ್ಷೆ, ದುರಾಸೆ, ಸಾಮುದಾಯಿಕ ಜೀವನದ ನಾಶ, ಯುದ್ಧ ಇತ್ಯಾದಿ ವಿಚಾರಗಳು ತಲೆಯೊಳಗೆ ಬೆಳೆಯುತ್ತಲೇ ಇದ್ದವು. ಸಾಕಷ್ಟು ದಿನಗಳ ನಂತರ, ಯಾವುದೋ ಸಂದರ್ಭ ದಲ್ಲಿ, ನನಗೆ ಕಾರ್ಕಳದ ಉದ್ಯಮಿ, ನಿತ್ಯಾನಂದ ಪೈ ಪರಿಚಯವಾದರು. ಅವರೊಂದಿಗೆ ಮಾತನಾಡುತ್ತ, ಮ್ಯಾಕ್‌ಬೆತ್ ಕಥೆಯನ್ನು ನಾನು ನಮ್ಮ ಊರಿನ ಸಂದರ್ಭಕ್ಕೆ ಅಳವಡಿಸಿಕೊಂಡಿ ರುವುದು, ಮೀನುಗಾರಿಕೆಯ ಹಿನ್ನೆಲೆಯಲ್ಲಿ, ತುಳು ಭಾಷೆಯಲ್ಲಿ ಸಿನೆಮಾ ಮಾಡಬೇಕೆಂದಿ ರುವುದನ್ನು ವಿವರಿಸಿದೆ. ಅವರಿಗೆ ಈ ಯೋಜನೆಯ ಬಗ್ಗೆ ಆಸಕ್ತಿ ಮೂಡಿ, ತಾನೇ ಇದನ್ನು ನಿರ್ಮಿಸುತ್ತೇನೆ ಎಂದು ಬಿಟ್ಟರು! ತುಳು ಚಿತ್ರರಂಗಕ್ಕೆ ಸಾಕಷ್ಟು ಪ್ರೇಕ್ಷಕರು ಇದ್ದರೂ, ಇದೊಂದು ಸೀಮಿತ ಮಾರುಕಟ್ಟೆ. ಹೀಗಾಗಿ ಸಿನೆಮಾದ ಬಜೆಟ್ ಕೂಡ ನಿಯಂತ್ರಣದಲ್ಲಿರಬೇಕಾದದ್ದು ವ್ಯಾವಹಾರಿಕವಾಗಿ ಅಗತ್ಯವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಒಂದಷ್ಟು ಮಾತುಕತೆ ನಡೆಸಿ ರಚನಾತ್ಮಕ ಸಿದ್ಧತೆ ಮಾಡಿಕೊಂಡೆವು.
Related Articles
Advertisement
ಮುಂಜಾವ ಮೂರು ಗಂಟೆ. ಮೀನುಗಾರರು ನಮಗಾಗಿ ಕಾಯುತ್ತಿದ್ದರು. ಮಲ್ಪೆಯ ಬಂದರಿನಲ್ಲಿ ದೋಣಿಗಳನ್ನು ಒಂದಕ್ಕೊಂದು ತಾಗಿಸಿ ನಿಲ್ಲಿಸಿರುತ್ತಾರೆ. ಆಯಾ ದೋಣಿಯ ಮೇಲಿನ ವಿವಿಧ ಬಣ್ಣದ ಧ್ವಜಗಳ ಮೂಲಕ ದೋಣಿಯನ್ನು ಗುರುತಿಸಲಾಗುತ್ತದೆ. ನಾವು ಪ್ರಯಾಣಿಸಬೇಕಿದ್ದ ದೋಣಿಯನ್ನು ತಲುಪಲು ಹಲವು ದೋಣಿಗಳನ್ನು ದಾಟುತ್ತ ಸಾಗಬೇಕಿತ್ತು. ಕೊನೆಗೆ ನಮ್ಮ ನಟರು ಒಂದು ದೋಣಿಯಲ್ಲಿ ಹೋಗುವುದೆಂದೂ, ಕೆಮರಾ ಮತ್ತು ನಾನು ಇನ್ನೊಂದು ದೋಣಿಯಲ್ಲಿ ಹಿಂಬಾಲಿಸುತ್ತ, ನಟರ ಆರಂಭಿಕ ಶಾಟ್ಸ್ ತೆಗೆಯುವುದೆಂದೂ ನಿರ್ಧರಿಸಿಕೊಂಡು ಹೊರಟೆವು.
ಯಾವುದೋ ಗೊಂದಲಮಯ ಬಸ್‌ನಿಲ್ದಾಣದಿಂದ ಹೊರಡುವ ಬಸ್ಸುಗಳಂತೆ ಪರಸ್ಪರರಿಗೆ ಜಾಗ ಮಾಡಿಕೊಡುತ್ತ, ಜೋರಾಗಿ ಮಾತನಾಡುತ್ತ ಮಲ್ಪೆಯ ಬಂದರನ್ನು ತೊರೆದು ಹೊರಟೆವು. ಪಡ್ಡಾಯಿ ಚಿತ್ರದ ಆರಂಭದಲ್ಲಿ ಕಾಣುವ ಟೈಟಲ್ಸ್‌ನಲ್ಲಿರುವ ದೃಶ್ಯದ ಶಾಟ್ಸ್ ತೆಗೆದದ್ದು ಇದೇ ಸಮಯಕ್ಕೆ ! ನಸುಕಿನಲ್ಲಿ ಯುದ್ಧಕ್ಕೆ ಹೊರಡುವ ಸೈನ್ಯದಂತೆ ನೂರಾರು ದೋಣಿಗಳು ಏಕಕಾಲಕ್ಕೆ ಸಮುದ್ರಮುಖೀಯಾಗಿ ಹೊರಟಿದ್ದವು. ಉಪ್ಪಿನ ತೇವವನ್ನು ಹೆೊತ್ತು ತರುವ ನರುಗಾಳಿ ಮುಖಕ್ಕೆ ಸೋಕುತ್ತಿದ್ದಂತೆ, ಉತ್ಸಾಹದಲ್ಲಿ ಅತ್ತಿತ್ತ ಕಣ್ಣು ಹಾಯಿಸುತ್ತ, ಸಾಧ್ಯವಾದ ಶಾಟ್ಸ್ ತೆಗೆದುಕೊಳ್ಳುತ್ತ ಸಾಗಿದೆವು. ದೋಣಿಯ ಒಂದು ಮೂಲೆಯಲ್ಲಿ ಒಲೆಯ ಮೇಲೆ ದೊಡ್ಡದೊಂದು ಹಂಡೆಯಲ್ಲಿ ಅಕ್ಕಿ, ಅನ್ನವಾಗಲು ಧ್ಯಾನಿಸುತ್ತಿತ್ತು.
ಸಮುದ್ರದಲ್ಲಿ ಸಾಕಷ್ಟು ದೂರ ಸಾಗಿದ ಮೇಲೆ ಪರಸ್ಪರ ವಾಕಿ ಟಾಕಿ ಮೂಲಕ ಮಾತನಾಡಿ, ಜಿಪಿಎಸ್ ಮೂಲಕ ನಿಖರ ಸ್ಥಳವನ್ನು ತಿಳಿದುಕೊಂಡು ನಮ್ಮೆರಡೂ ದೋಣಿಗಳು ಸೇರಿದವು. ಇಡೀ ತಂಡ ಮೀನು ಹಿಡಿಯುವ ಮುಖ್ಯ ದೋಣಿಯನ್ನೇರಿದೆವು. ಅಷ್ಟರಲ್ಲಾಗಲೇ ಮೀನುಗಾರರ ತಂಡ ಕಣ್ಣುಗಳನ್ನು ಸಮುದ್ರದ ಮೈಗೆ ನೆಟ್ಟು, ಮೀನಿಗಾಗಿ ಹುಡುಕಾಟ ನಡೆಸಿದ್ದವು. ಸಮುದ್ರದೊಳಗಣ ಮೀನು, ಮೇಲಿಂದ ಕಾಣುವುದೇ ಎನ್ನುವ ಸಂಶಯ ನಮಗೆ ಬಾರದಿರಲಿಲ್ಲ. ಆದರೆ, ಅಷ್ಟರಲ್ಲೇ ತಾಂಡೇಲ ಒಂದು ದಿಕ್ಕಿಗೆ ಕೈ ತೋರಿದರು. ಚಲಿಸುತ್ತಿರುವ ನಮ್ಮ ದೋಣಿಗೆ ಎಡಕ್ಕೆ ಸ್ವಲ್ಪದೂರದಲ್ಲಿ, ಸಮುದ್ರದ ಮೈಯಲ್ಲಿ ನಡೆದೇ ಹೋಗುತ್ತಿವೆಯೇ ಎನ್ನುವಂತೆ ಒಂದು ದೊಡ್ಡ ಗುಂಪು ಮೀನುಗಳ ಕಲರವ ಕಾಣುತ್ತಿತ್ತು. “ಮೀನಿನ ಹೆಜ್ಜೆ’ ಎನ್ನುವ ಅಲಂಕಾರ ಇದರಿಂದಲೇ ಹುಟ್ಟಿತೇನೋ ಎಂದು ಅನ್ನಿಸಿತು ನನಗೆ. ಆದರೆ ನಮ್ಮ ತಾಂಡೇಲರಿಗೆ ಈ ಮೀನಿನ ತಂಡ ಸಣ್ಣದೆಂದೂ, ನಮ್ಮ ದೋಣಿಯ ವೇಗಕ್ಕೆ ಅದನ್ನು ಹಿಡಿಯುವುದು ಕಷ್ಟ ಎಂದೂ ಅನ್ನಿಸಿ ಅದನ್ನು ಕೈಬಿಟ್ಟು ಬಿಟ್ಟರು. ಆದರೆ, ಇನ್ನು ಸ್ವಲ್ಪ ಹೊತ್ತಿನಲ್ಲಿ ಮತ್ತೂಂದು, ಮೊದಲಿನದ್ದಕ್ಕಿಂತ ದೊಡ್ಡ ಮೀನಿನ ತಂಡ ಕಾಣಿಸಿತು. ನಮ್ಮ ಕೆಮರಾ ಚುರುಕಾಯಿತು.
ತಾಂಡೇಲ, “ಆರ್ಯಾ’ ಎಂದು ಪಾಸಿಟಿವ್ ಸೂಚನೆ ಕೊಟ್ಟರು. ನಮ್ಮ ದೊಡ್ಡ ದೋಣಿಯ ಹಿಂದಿದ್ದ ಪುಟಾಣಿ ದೋಣಿಗೆ ಜಿಗಿದ ಇಬ್ಬರು ಬಲೆಯ ಒಂದು ತುದಿಯನ್ನು ಹಿಡಿದುಕೊಂಡು ಮೀನಿನ ತಂಡದ ಅರಿವಿಗೆ ಬಾರದಂತೆ ನಿಧಾನಕ್ಕೆ ಅದನ್ನು ಸುತ್ತುವರೆದರು. ಹೀಗೆ ಸುತ್ತುವಾಗ ದೋಣಿಯ ಒಂದು ಮಗ್ಗುಲಲ್ಲಿ ಇದ್ದ ಬಲೆ ಸರಾಗವಾಗಿ ಸಾಗರಕ್ಕಿಳಿದು ಮೀನುಗಳನ್ನು ಬಂಧಿಸುತ್ತಿತ್ತು. ಸಮುದ್ರಕ್ಕೆ ಇಳಿದ ಬಲೆಯನ್ನು ವೃತ್ತಾಕಾರದಲ್ಲಿ ಜೋಡಿಸಿಕೊಂಡು, ಬುಟ್ಟಿಯಂತೆ ಮಾಡಿಕೊಳ್ಳಲಾಯಿತು. ಈ ಪ್ರಕ್ರಿಯೆ ಸುಮಾರು ಹದಿನೈದು ನಿಮಿಷದಲ್ಲೇ ಪೂರ್ಣವಾಯಿತು. ಆಮೇಲೆ ಆರಂಭವಾದದ್ದು, ಈ ಬಲೆಯನ್ನು ಎಳೆಯುವ ಪ್ರಕ್ರಿಯೆ! ದೋಣಿಯಲ್ಲಿದ್ದ ಇಪ್ಪತ್ತು ಜನರು ಅಪಾರ ಶ್ರಮವಹಿಸಿ ಈ ಬಲೆಯನ್ನು ಎಳೆಯಲು ಆರಂಭಿಸಿದರು. ತಾವು ಬಲೆಯಲ್ಲಿ ಇದ್ದೇವೆಂದು ತಿಳಿದು ಹಾರಿ ತಪ್ಪಿಸಿಕೊಳ್ಳಲು ಕೆಲವು ಮೀನುಗಳು ಯತ್ನಿಸುತ್ತಿದ್ದವು. ಇನ್ನು ಕೆಲವು ನಿಜಕ್ಕೂ ಜಿಗಿದು ಹೊರಕ್ಕೆ ಹೋಗುತ್ತಿದ್ದವು. ಸಮುದ್ರದಲ್ಲಿ ದೊಡ್ಡ ಯುದ್ಧವೇ ನಡೆಯುತ್ತಿದೆಯೋ ಏನೊ ಎಂದು ಅನ್ನಿಸುತ್ತಿತ್ತು. ಇದು ಶೇಕ್ಸ್ ಪಿಯರ್‌ನ ವಿವರಣೆಗಳಲ್ಲಿ ಕಾಣುವ ಯಾವುದೇ ಯುದ್ಧಕ್ಕೂ ಕಡಿಮೆಯಿಲ್ಲದಂತೆ ನಡೆಯುತ್ತಿತ್ತು.
ಸುಮಾರು ಮೂರು ಗಂಟೆಯ ಮೊದಲ ಬೇಟೆ ಮುಗಿಯುವಷ್ಟರಲ್ಲಿ ನಮ್ಮ ಪ್ರಮುಖ ದೃಶ್ಯಗಳ ಚಿತ್ರೀಕರಣವೂ ಮುಗಿಯಿತು. ಹಿಡಿದ ಮೀನುಗಳನ್ನೆಲ್ಲ ಇನ್ನೊಂದು ದೋಣಿಗೆ ದಾಟಿಸಲಾಯಿತು. ನಮ್ಮ ಚಿತ್ರೀಕರಣವೂ ಮುಗಿದದ್ದರಿಂದ, ನಾವೂ ಮರಳಿ ಹೋಗಲಿರುವ ದೋಣಿಗೆ ದಾಟಿಕೊಂಡೆವು. ಹೇಳಹೊರಟರೆ ಇನ್ನೂ ಸಾಕಷ್ಟಿದೆ.
– ಅಭಯ ಸಿಂಹ