Advertisement

ಜ.5ರಿಂದ ತುಳು ಫಿಲ್ಮ್ ಫೆಸ್ಟಿವಲ್ ಶುರು; 7 ದಿನಗಳು, 47 ಸಿನಿಮಾ!

06:20 AM Dec 08, 2017 | Harsha Rao |

ಜನವರಿಯಲ್ಲಿ ಬೆಂಗಳೂರಿನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುವುದಕ್ಕೆ ಸದ್ದಿಲ್ಲದೆ ಸಿದ್ಧತೆಗಳು ನಡೆಯುತ್ತಿವೆ. ಈ ಮಧ್ಯೆ ಮಂಗಳೂರಿನಲ್ಲೂ ಒಂದು ಚಿತ್ರೋತ್ಸವ ನಡೆಸುವುದಕ್ಕೆ ಒಂದು ವೇದಿಕೆ ಸಜ್ಜಾಗಿದೆ. ತುಳು ಚಿತ್ರ ನಿರ್ಮಾಪಕರ ಸಂಘವು, ತುಳು ಚಿತ್ರೋತ್ಸವವನ್ನು ಆಯೋಜಿಸಲು ಉದ್ದೇಶಿಸಿದ್ದು, ಈ ಚಿತ್ರೋತ್ಸವವು ಜನವರಿ 5ರಿಂದ 11ರವರೆಗೂ ಏಳು ದಿನಗಳ ಕಾಲ ನಡೆಯಲಿದೆ. ಈ ಚಿತ್ರೋತ್ಸವವು ಮಂಗಳೂರಿನ ಸಿನಿಪೊಲೀಸ್‌ ಮಲ್ಟಿಪ್ಲೆಕ್ಸ್‌ನಲ್ಲಿ ಆಯೋಜಿತವಾಗಿದೆ.

Advertisement

ಕಳೆದ ಕೆಲವು ವರ್ಷಗಳಿಂದಿತ್ತೀಚೆಗೆ ತುಳು ಚಿತ್ರಗಳ ಬಿಡುಗಡೆ ಗಣನೀಯವಾಗಿ ಹೆಚ್ಚಿದ್ದು, ತುಳು ಚಿತ್ರಗಳನ್ನು ಜನಪ್ರಿಯಗೊಳಿಸುವುದಕ್ಕೆ ಈ ಚಿತ್ರೋತ್ಸವವನ್ನು ಆಯೋಜಿಸಲಾಗಿದೆ. ದಿನಕ್ಕೊಂದರಂತೆ ಏಳು ದಿನಗಳ ಕಾಲ ಒಟ್ಟು 47 ಚಿತ್ರಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಲಿದ್ದು, ಇದರಲ್ಲಿ “ಒರಿಯರ್ದೊರಿ ಅಸಲ್‌’, “ಚಾಲಿ ಪೋಲಿಲು’, “ಎಕ್ಕ ಸಕ್ಕ’, “ಚಂಡಿಕೋರಿ’ ಸೇರಿದಂತೆ ಹಲವು ಚಿತ್ರಗಳು ಪ್ರದರ್ಶನವಾಗಲಿದೆ. ಈ ಚಿತ್ರೋತ್ಸವದಲ್ಲಿ ಬರೀ ಹೊಸ ತುಳು ಚಿತ್ರಗಳು ಮಾತ್ರ ಪ್ರದರ್ಶನವಾಗಲಿದ್ದು, ಹಳೆಯ ತುಳು ಚಿತ್ರಗಳನ್ನು ನೋಡಬೇಕೆಂದರೆ ಸಿಗುವುದಿಲ್ಲ. ಅದಕ್ಕೆ ಕಾರಣಗಳೂ ಇವೆ. ತುಳು ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್‌ ಬ್ರಹ್ಮಾವರ್‌ ಹೇಳುವಂತೆ, ಸ್ಯಾಟಿಲೈಟ್‌ ಮೂಲಕ ಪ್ರದರ್ಶನವಾಗುವ ಚಿತ್ರಗಳು ಮಾತ್ರ ಈ ಚಿತ್ರದಲ್ಲಿರುತ್ತವಂತೆ.

“ತುಳು ಭಾಷೆಯ “ಎನ್ನ ತಂಗಡಿ’, “ಬಂಗಾರ್‌ ಪಟ್ಲೆರ್‌’ನಂತಹ ಹಳೆಯ ಮತ್ತು ಜನಪ್ರಿಯ ಚಿತ್ರಗಳನ್ನು ತೋರಿಸುವ ಆಸೆ ಇದೆ. ಆದರೆ, ಅವೆಲ್ಲಾ ನೆಗೆಟಿವ್‌ನಲ್ಲಿದ್ದು, ಅದನ್ನು ಡಿಜಿಟಲ್‌ಗೆ ವರ್ಗಾವಣೆ ಮಾಡುವುದಕ್ಕೆ ಒಂದಿಷ್ಟು ಖರ್ಚಾಗುತ್ತದೆ. ನಿರ್ಮಾಪಕರು ತಾವೇ ಮುಂದೆ ಬಂದು ವರ್ಗಾವಣೆ ಮಾಡಿಸಿಕೊಟ್ಟರೆ ಅಂತಹ ಚಿತ್ರಗಳನ್ನು ಪ್ರದರ್ಶಿಸಬಹುದು. ಇಲ್ಲವಾದರೆ ಡಿಜಿಟಲ್‌ ಚಿತ್ರಗಳನ್ನು ಮಾತ್ರ ಪ್ರದರ್ಶಿಸಲಾಗುತ್ತದೆ. ಪ್ರಶಸ್ತಿ ವಿಜೇತ ಚಿತ್ರಗಳಷ್ಟೇ ಅಲ್ಲ, ಯಶಸ್ವಿಯಾದ ಹಲವು ಚಿತ್ರಗಳೂ ಈ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಲಿದೆ’ ಎನ್ನುತ್ತಾರೆ.

Advertisement

ತುಳು ಚಿತ್ರಗಳನ್ನು ಜನಪ್ರಿಯಗೊಳಿಸುವುದಕ್ಕೆ ಈ ಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎನ್ನುವ ಅವರು, “ಈ ಚಿತ್ರೋತ್ಸವವನ್ನು ಕನ್ನಡ ಚಿತ್ರರಂಗದ ಭಾಗವಾಗಿ ಆಯೋಜಿಸಲಿದ್ದು, ಚಿತ್ರೋತ್ಸವದ ಜೊತೆಗೆ ಹಲವು ಸಂವಾದಗಳನ್ನು ಸಹ ಹಮ್ಮಿಕೊಳ್ಳಲಾಗಿದೆ. ಅದೇ ಕಾರಣಕ್ಕೆ ಕನ್ನಡ ಸೇರಿದಂತೆ ಇತರೆ ಭಾಷೆಗಳ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಮತ್ತು ಸರಕಾರದ ಪ್ರತಿನಿಧಿಗಳನ್ನು ಈ ಚಿತ್ರೋತ್ಸವಕ್ಕೆ ಆಹ್ವಾನಿಸಿ, ಸಂವಾದವನ್ನು ಆಯೋಜಿಸಲಾಗುತ್ತಿದೆ. ಅಷ್ಟೇ ಅಲ್ಲದೆ ತುಳು ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಗುತ್ತದೆ. ಸದ್ಯ ತುಳು ಚಿತ್ರರಂಗವು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಪ್ರಮುಖವಾಗಿ ಚಿತ್ರಮಂದಿರದ ಸಮಸ್ಯೆ ಹೆಚ್ಚಾಗಿದೆ. ಇದೆಲ್ಲದಕ್ಕೂ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ’ ಎನ್ನುತ್ತಾರೆ ರಾಜೇಶ್‌ ಬ್ರಹ್ಮಾವರ್‌. 

ಈ ತುಳು ಚಿತ್ರೋತ್ಸವ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಬೆಂಗಳೂರು, ಹುಬ್ಬಳ್ಳಿ, ಹೈದರಾಬಾದ್‌, ಚೆನ್ನೈ, ಮುಂಬೈ ಮುಂತಾದ ನಗರಗಳಲ್ಲೂ ಆಯೋಜಿಸುವ ಯೋಜನೆಯನ್ನು ತುಳು ಚಿತ್ರ ನಿರ್ಮಾಪಕರ ಸಂಘ ಹಮ್ಮಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next