ಬಿಗ್‌ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ತುಳು ಚಿತ್ರ “ಸರ್ಕಸ್’ ಜೂ. 23 ರಂದು ಬಿಡುಗಡೆಯಾಗಿತ್ತು. ಇದೀಗ ಮೊದಲ ವಾರ ಯಶಸ್ವಿಯಾಗಿ ಪ್ರದರ್ಶನ ಪೂರೈಸಿರುವ “ಸರ್ಕಸ್’ ಸಿನಿಮಾ ಎರಡನೇ ವಾರದ ಬಳಿಕ ಇನ್ನಷ್ಟು ಕೇಂದ್ರಗಳಲ್ಲಿ ಪ್ರದರ್ಶನ ಹೆಚ್ಚಿಸಿಕೊಂಡಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, “ಸರ್ಕಸ್’ ಸಕ್ಸಸ್ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿತು.
ಮೊದಲಿಗೆ ಮಾತನಾಡಿದ ನಟ ಕಂ ನಿರ್ದೇಶಕ ರೂಪೇಶ್ ಶೆಟ್ಟಿ, “ಮೊದಲ ವಾರ ಸಿನಿಮಾ 37 ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ಇದು ಮೊದಲ ಪ್ಯಾನ್ ಇಂಡಿಯಾ ತುಳು ಸಿನಿಮಾ. ಅದಾದ ಬಳಿಕ ಸುಮಾರು 13 ದೇಶಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಮೊದಲ ವಾರ ವಿಶ್ವದಾದ್ಯಂತ ಒಂದೂವರೆ ಲಕ್ಷ ಜನ ಸಿನಿಮಾ “ಸರ್ಕಸ್’ ಸಿನಿಮಾ ನೋಡಿದ್ದಾರೆ. ಸದ್ಯ ಸಿನಿಮಾ ಸುಮಾರು ನೂರಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಹೌಸ್ ಫುಲ್ ಪ್ರದರ್ಶನವಾಗುತ್ತಿದೆ’ ಎಂದರು.
“ಸುಮಾರು ಒಂದೂವರೆ ಕೋಟಿ ಬಜೆಟ್‌ನಲ್ಲಿ ತಯಾರಾದ “ಸರ್ಕಸ್’ ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಸಿನಿಮಾ. ಸಿನಿಮಾದ ಹೆಸರು “ಸರ್ಕಸ್’ ಅಂತಿದ್ದರೂ ಇದಕ್ಕೂ ಯಾವುದೇ ಸರ್ಕಸ್‌ಗೂ ಸಂಬಂಧವಿಲ್ಲ. ಇದೊಂದು ಕಾಮಿಡಿ ಸಬ್ಜೆಕ್ಟ್ ಸಿನಿಮಾ. ಜೀವನದಲ್ಲಿ ಬರುವ ಸರ್ಕಸ್‌ಗಳನ್ನು ಹೇಗೆ ಎದುರಿಸಬೇಕಾಗುತ್ತದೆ ಎಂಬುದೇ ಈ ಸಿನಿಮಾ. ಲವ್, ಕಾಮಿಡಿ, ಸೆಂಟಿಮೆಂಟ್, ಎಮೋಶನ್ಸ್ ಎಲ್ಲವೂ ಸಿನಿಮಾದಲ್ಲಿದೆ. ಹೀಗಾಗಿ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುತ್ತಿದೆ’ ಎನ್ನುವುದು ರೂಪೇಶ್ ಶೆಟ್ಟಿ ವಿವರಣೆ.
“ಸರ್ಕಸ್’ ಸಿನಿಮಾದಲ್ಲಿ ರೂಪೇಶ್ ಶೆಟ್ಟಿ ಅವರಿಗೆ ರಚನಾ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಅರವಿಂದ ಬೋಳಾರ್, ನವೀನ್ ಡಿ. ಪಡೀಲ್, ದೇವದಾಸ್ ಕಾಪಿಕಾಡ್, ಯಶ್ ಶೆಟ್ಟಿ , ಭೋಜರಾಜ ವಾಮಂಜೂರು ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಶೋಲಿನ್ ಫಿಲಂಸ್’, “ಆರ್. ಎಸ್ ಸಿನಿಮಾಸ್’, “ಮುಗ್ರೊಡಿ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಜಂಟಿಯಾಗಿ ಈ ಸಿನಿಮಾ ನಿರ್ಮಾಣವಾಗಿದೆ. ಮಂಗಳೂರು, ಉಡುಪಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.
ನಟ ಯಶ್ ಶೆಟ್ಟಿ, ಅವಿನಾಶ್ ಶೆಟ್ಟಿ ಮೊದಲಾದವರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದು “ಸರ್ಕಸ್’ ಸಿನಿಮಾದ ಬಗ್ಗೆ ಮಾತನಾಡಿದರು