Advertisement

ತುಳು ನಾಟಕ ಪರ್ಬ ಸಮಾರೋಪ

10:54 AM Apr 01, 2018 | Team Udayavani |

ಪುರಭವನ: ಮನೋರಂಜನೆಯ ಜತೆಗೆ ಮನೋವಿಕಾಸದ ಚಿಂತನೆಯೂ ತುಳು ರಂಗಭೂಮಿಯಲ್ಲಿ ನಡೆಯಬೇಕು. ಗಂಭೀರ ನಾಟಕಗಳ ಮೂಲಕ ಪ್ರೇಕ್ಷಕರನ್ನು ಹೊಸತನಕ್ಕೆಳೆಯುವ ಕೆಲಸ ಮಾಡಬೇಕು ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ರಂಗ ನಿರ್ದೇಶಕ ಸದಾನಂದ ಸುವರ್ಣ ಆಶಿಸಿದರು.

Advertisement

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಮಹಾನಗರ ಪಾಲಿಕೆಯ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಮಾರ್ಚ್‌ 24ರಿಂದ 31ರ ವರೆಗೆ ನಡೆದ ತುಳು ನಾಟಕ ಪರ್ಬದ ಸಮಾರೋಪದಲ್ಲಿ ಅವರು ಶನಿವಾರ ಸಮಾರೋಪ ಭಾಷಣ ಮಾಡಿದರು.

ಕರಾವಳಿಯಲ್ಲಿ ತುಳು ನಾಟಕಗಳು ಹೆಚ್ಚೆಚ್ಚು ಪ್ರದರ್ಶನಗೊಳ್ಳುತ್ತಿರುವುದು ಖುಷಿಯ ವಿಚಾರ. ಮನೋರಂಜನೆಯನ್ನೇ ಮುಖ್ಯ ಉದ್ದೇಶವಾಗಿರಿಸಿಕೊಂಡು ತುಳು ನಾಟಕಗಳನ್ನು ಆಡಿ ತೋರಿಸಲಾಗುತ್ತದೆ. ಹೊಸ ಹೊಸ ಚಿಂತನೆಗಳ ಪ್ರಯೋಗಗಳು ತುಳು ನಾಟಕದಲ್ಲಿ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಸಂಸ್ಕೃತಿ ಮೇಲೆ ಬೆಳಕು ಚೆಲ್ಲುತ್ತದೆ
ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿವಿ ಎಸ್‌ವಿಪಿ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ| ಶಿವರಾಮ ಶೆಟ್ಟಿ ಬೋಳಾರ ಮಾತನಾಡಿ, ನಾಟಕಗಳು ಮನಸ್ಸಿಗೆ ಮುದ ನೀಡುವುದರೊಂದಿಗೆ ತುಳುವರ ಸಂಸ್ಕೃತಿ, ಪರಂಪರೆಯ ಮೇಲೆಯೂ ಬೆಳಕು ಚೆಲ್ಲುತ್ತದೆ. ಇಲ್ಲಿನ ಜನರ ಬದುಕನ್ನು ಪ್ರತಿನಿಧಿಸುವ ಕೆಲಸವನ್ನು ತುಳು ನಾಟಕಗಳು ಮಾಡುತ್ತಿರುವುದು ಶ್ಲಾಘನೀಯ ಎಂದರು. ಸಮುದಾಯಗಳನ್ನು ಕಟ್ಟುವ ನಾಟಕಗಳ ಸಂಖ್ಯೆ ಬೆಳೆಯಬೇಕು. ಈ ನಿಟ್ಟಿನಲ್ಲಿ ತುಳು ಸಾಹಿತ್ಯ ಅಕಾಡೆಮಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ವಿಮರ್ಶೆಯೂ ನಡೆಯಲಿ
ಲಚ್ಚು ನಾಟಕದ ಮೂಲ ಕರ್ತೃ  ಎನ್‌. ಗೋಪಾಲಕೃಷ್ಣ ಬೆಂಗಳೂರು ಮಾತನಾಡಿ, ತುಳು ನಾಟಕಗಳು ಜನರಿಗೆ
ನೇರವಾಗಿ ಸಾಹಿತ್ಯವನ್ನು ಮುಟ್ಟಿಸುವ ಕೆಲಸವನ್ನು ಮಾಡುತ್ತವೆ. ತುಳು ನಾಟಕಗಳ ಪ್ರದರ್ಶನದೊಂದಿಗೆ ಅವುಗಳ ವಿಮರ್ಶೆಯೂ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

Advertisement

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ರಂಗ ನಿರ್ದೇಶಕ ವಿಜಯ ಕುಮಾರ್‌ ಕೊಡಿಯಲ್‌ಬೈಲ್‌ ಮುಖ್ಯ ಅತಿಥಿಯಾಗಿದ್ದರು. ತುಳು ನಾಟಕ ಪರ್ಬದ ಸದಸ್ಯ ಸಂಚಾಲಕ ಎ. ಶಿವಾನಂದ ಕರ್ಕೇರ ಸ್ವಾಗತಿಸಿದರು. ಅಕಾಡೆಮಿ ರಿಜಿಸ್ಟ್ರಾರ್‌ ಚಂದ್ರಹಾಸ ರೈ ವಂದಿಸಿದರು. ಎ. ಗೋಪಾಲ ಅಂಚನ್‌ ನಿರೂಪಿದರು.

ಖಾಲಿ ಖಾಲಿ
ತುಳು ನಾಟಕ ಪರ್ಬದ ಸಮಾರೋಪ ಸಮಾರಂಭದಲ್ಲಿ ಜನರಿಲ್ಲದೆ ಕುರ್ಚಿಗಳೆಲ್ಲ ಖಾಲಿ ಖಾಲಿಯಾಗಿತ್ತು. ಅತಿಥಿಗಳು, ಮಾಧ್ಯಮದವರು ಮತ್ತು ಬೆರಳೆಣಿಕೆಯಷ್ಟು ಮಂದಿ ಮಾತ್ರ ಕಾರ್ಯಕ್ರಮದಲ್ಲಿದ್ದು, ಎಲ್ಲ ಒಟ್ಟು ಸೇರಿ ಇಪ್ಪತ್ತೈದು ಜನರೂ ಇರಲಿಲ್ಲ.  

Advertisement

Udayavani is now on Telegram. Click here to join our channel and stay updated with the latest news.

Next