ಮಂಗಳೂರು: ತುಳು ಭಾಷೆ, ಸಂಸ್ಕೃತಿಯ ಸಂರಕ್ಷಣೆ ಮತ್ತು ಉನ್ನತಿಯಲ್ಲಿ ತುಳು ರಂಗಭೂಮಿಯ ಕೊಡುಗೆ ಮಹತ್ತರ ಎಂದು ಮಾಜಿ ಸಚಿವ, ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಮಂಗಳೂರು ಮನಪಾ ಸಹಯೋಗದೊಂದಿಗೆ ಮಂಗಳೂರು ಪುರಭವನದಲ್ಲಿ ಆಯೋಜಿಸಿದ ತುಳು ನಾಟಕ ಪರ್ಬ ಕಾರ್ಯಕ್ರಮದ ಉದ್ಘಾಟನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ತುಳು ಭಾಷೆ, ಸಂಸ್ಕೃತಿಯ ಸಂರಕ್ಷಣೆಗಾಗಿ ಸ್ಥಾಪನೆಗೊಂಡಿರುವ ತುಳು ಸಾಹಿತ್ಯ ಅಕಾಡೆಮಿ ಈ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತ ಬಂದಿದೆ. ತುಳು ನಾಟಕ ರಂಗಕ್ಕೆ ವಿಶೇಷ ಕೊಡುಗೆ ನೀಡಿದ ಹಿರಿಯ ಸಾಧಕರ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಅವರನ್ನು ಸ್ಮರಿಸುವ ತುಳು ನಾಟಕ ಪರ್ಬ ಉತ್ತಮ ಕಾರ್ಯಕ್ರಮ ಎಂದು ಶ್ಲಾಘಿಸಿದರು. ‘ಪರ್ಬ’ವನ್ನು ಉದ್ಘಾಟಿಸಿದ ಮಾಜಿ ಮೇಯರ್ ಕವಿತಾ ಸನಿಲ್, ತುಳು ನಮ್ಮ ಮಾತೃಭಾಷೆ. ಇದನ್ನು ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ತುಳು ಸಾಹಿತ್ಯ ಅಕಾಡೆಮಿ ನಾಟಕ ಉತ್ಸವವನ್ನು ಆಯೋಜಿಸಿರುವುದು ಅಭಿನಂದನೀಯ ಎಂದರು.
ಮುಖ್ಯ ಅತಿಥಿ, ಮನಪಾ ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ ಅವರು ಮಾತನಾಡಿ ತುಳು ಭಾಷೆ ತನ್ನದೇ ಆದ ಅನನ್ಯತೆಯನ್ನು ಹೊಂದಿದೆ. ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ರಂಗಭೂಮಿ ಕಾರ್ಯಕ್ರಮಗಳಿಗೆ ಮಂಗಳೂರು ಮನಪಾ ತನ್ನದೇ ಆದ ರೀತಿಯಲ್ಲಿ ನೆರವು ನೀಡುತ್ತಾ ಬಂದಿದೆ. ತುಳು ನಾಟಕ ಪರ್ಬ ಆಯೋಜನೆಗೂ ಸಹಯೋಗ ನೀಡಿ ಆರ್ಥಿಕ ನೆರವು ಒದಗಿಸಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ, ಕಾರ್ಪೊರೇಟರ್ ರಾಧಾಕೃಷ್ಣ ಮಾತನಾಡಿ, ತುಳು ನಾಟಕ ರಂಗಕ್ಕೆ ವಿಶೇಷ ಕೊಡುಗೆ ನೀಡಿದ ಮಹನೀಯರನ್ನು ಸಂಸ್ಮರಣೆ ಮಾಡುವ ತುಳು ನಾಟಕ ಪರ್ಬ ಉತ್ತಮ ಕಾರ್ಯಕ್ರಮ ಎಂದರು. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಹಿರಿಯ ನಾಟಕಕಾರರಾದ ಎಂ.ಕೆ. ಸೀತಾರಾಮ ಕುಲಾಲ್, ಡಾ| ಸಂಜೀವ ದಂಡಕೇರಿ, ಕಿಶೋರ್ ಡಿ. ಶೆಟ್ಟಿ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಮಾತನಾಡಿ, ತುಳು ಭಾಷೆಯ ಬೆಳವಣಿಗೆಗೆ ತುಳು ನಾಟಕ ರಂಗ ತನ್ನದೇ ಕೊಡುಗೆ ನೀಡುತ್ತಾ ಬಂದಿದೆ. ಈ ಕ್ಷೇತ್ರದ ವಿಶೇಷ ಸಾಧಕರನ್ನು ಸಂಸ್ಮರಣೆ ಮಾಡುವ ಮೂಲ ಆಶಯದೊಂದಿಗೆ ತುಳು ನಾಟಕ ಪರ್ಬ ಆಯೋಜಿಸಲಾಗಿದೆ. ಒಟ್ಟು 8 ದಿನಗಳ ಕಾಲ ನಡೆಯುವ ನಾಟಕ ಪರ್ಬದಲ್ಲಿ ಹಿಂದಿನ ಕಾಲದ ನಾಟಕಕಾರರನ್ನು ಸ್ಮರಿಸಿ ಅವರ ನಾಟಕಗಳನ್ನು ರಂಗದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ. ಇದನ್ನು ಪ್ರತಿ ವರ್ಷ ನಡೆಸುವ ಗುರಿಯನ್ನು ಇರಿಸಿಕೊಂಡಿದ್ದೇವೆ. ತುಳು ನಾಟಕ ಪರ್ಬಕ್ಕೆ ಸಹಯೋಗ ನೀಡಿ 5 ಲಕ್ಷ ರೂ. ಆರ್ಥಿಕ ನೆರವು ಒದಗಿಸಿರುವುದಕ್ಕೆ ಮಂಗಳೂರು ಮನಪಾಗೆ ಆಭಾರಿಯಾಗಿದ್ದೇವೆ ಎಂದರು.
ತುಳು ನಾಟಕ ಪರ್ಬದ ಸದಸ್ಯ ಸಂಚಾಲಕ ಎ. ಶಿವಾನಂದ ಕರ್ಕೇರ ಸ್ವಾಗತಿಸಿದರು. ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಪ್ರಸ್ತಾವನೆಗೈದರು. ಸದಸ್ಯ ಎ. ಗೋಪಾಲ ಅಂಚನ್ ವಂದಿಸಿದರು. ಸದಸ್ಯ ತಾರಾನಾಥ ಗಟ್ಟಿ ನಿರೂಪಿಸಿದರು.
1,845 ವಿದ್ಯಾರ್ಥಿಗಳಿಗೆ ತುಳು ತೃತೀಯ ಭಾಷೆ
ತುಳು ಭಾಷೆಯನ್ನು ಪ್ರೌಢ ಶಿಕ್ಷಣದಲ್ಲಿ ತೃತೀಯ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವುದು ಸಂತಸದ ವಿಚಾರ. ಪ್ರಸ್ತುತ ಒಟ್ಟು 1,845 ವಿದ್ಯಾರ್ಥಿಗಳು ತುಳುಭಾಷೆಯನ್ನು ತೃತೀಯ ಭಾಷೆಯಾಗಿ ಕಲಿಯುತ್ತಿದ್ದಾರೆ. ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 400ಕ್ಕೂ ಅಧಿಕ ವಿದ್ಯಾರ್ಥಿಗಳು ತುಳು ತೃತೀಯ ಭಾಷೆಯಾಗಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ವಿವರಿಸಿದರು.