ಸ್ಯಾಂಡಲ್‌ವುಡ್ ನಿತ್ಯ ಒಂದೊಂದು ಫಿಲ್ಮ್ ಶೂಟಿಂಗ್, ಮೇಕಿಂಗ್, ರಿಲೀಸ್ ಎಂಬ ನೆಲೆಯಿಂದ ಫುಲ್ ಬ್ಯುಸಿ ಇರುವುದನ್ನು ನಾವು ಕೇಳಿದ್ದೇವೆ. ಹೀಗಾಗಿಯೇ ಇಲ್ಲಿ ಸಿನೆಮಾಕ್ಕೆ ಯಾವುದೇ ಕೊರತೆ ಇಲ್ಲ-ಕೆಲಸವೂ ಕಡಿಮೆ ಆಗಿಲ್ಲ; ಆದರೆ ಕೋಸ್ಟಲ್‌ವುಡ್ ಗೆ ಈ ಸಾಧ್ಯತೆ ಹೆಚ್ಚು ಇರಲಿಲ್ಲ. ಒಂದೊಂದು ಸಿನೆಮಾದ ಮಧ್ಯೆ ಸಾಕಷ್ಟು ಸಮಯಾವಕಾಶ, ವಿರಾಮ ಎಲ್ಲವೂ ಸಿಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಸ್ಯಾಂಡಲ್‌ವುಡ್‌ನಂತೆಯೇ ಕೋಸ್ಟಲ್‌ವುಡ್ ಕೂಡ ಸಿಕ್ಕಾಪಟ್ಟೆ ಬ್ಯುಸಿ!
ಕಳೆದ ಕೆಲವು ಸಮಯದಿಂದ ಹಿಟ್ ಸಿನೆಮಾ ದಾಖಲಿಸಿದ ತುಳು ಸಿನೆಮಾರಂಗದಲ್ಲಿ ಕಸುವು ಜೋರಾಗಿದೆ.ಮಳೆ ಮುಗಿದ ಬೆನ್ನಿಗೆ ಶೂಟಿಂಗ್ ತಯಾರಿಯೂ ಇಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಹೀಗಾಗಿ ಚಿತ್ರತಂಡಗಳು ಫುಲ್ ಬ್ಯುಸಿ.
ಮುಖ್ಯ ಕಲಾವಿದರಿಗೆ ಡೇಟ್ ಹೊಂದಾಣಿಕೆ ಮಾಡಿ ಶೂಟಿಂಗ್‌ಗೆ ಬರುವುದೇ ಈಗ ಸವಾಲು ಎಂಬಂತಾಗಿದೆ. ಜತೆಗೆ ಇತರ ಕಲಾವಿದರು ಕೂಡ ಕಾಂತಾರ ಸಹಿತ ಇತರ ಸಿನೆಮಾ, ನಾಟಕದಲ್ಲಿ ಇರುವ ಕಾರಣದಿಂದ ಟೈಮ್ ಎಡ್ಜಸ್ಟ್ ಮಾಡುವುದು ಕಷ್ಟ ಕಷ್ಟ ಎಂಬಂತಹ ಸ್ಥಿತಿ ಇದೆ. ಜತೆಗೆ ಕೆಮರಾ ಸಹಿತ ತಂತ್ರಜ್ಞರು ಕೂಡ ಸಿಕ್ಕಾಪಟ್ಟೆ ಟೈಟ್ ಶೆಡ್ನೂಲ್‌ನಲ್ಲಿದ್ದಾರೆ.
ಅಂತೂ ಕರಾವಳಿಯ ಒಂದೊಂದು ಜಾಗದಲ್ಲಿ ಈಗ ತುಳು ಸಿನೆಮಾ ಶೂಟಿಂಗ್, ತಯಾರಿಯ ಗೌಜಿ ಜೋರಾಗಿದೆ. ಮುಂದಿನ 3/4 ತಿಂಗಳು ಇದೇ ವಾತಾವರಣ ಇರುವ ಕಾರಣದಿಂದ ನೂರಾರು ಮಂದಿಯ ಬದುಕಿನ ದಾರಿಗೆ ಕೋಸ್ಟಲ್‌ವುಡ್ ಊರುಗೋಲು. ಅಂದಹಾಗೆ ಈಗ ಜೈ, 90 , ನೆತ್ತರಕೆರೆ, ಧರ್ಮ ಚಾವಡಿ, ಪಿಲಿ ಪಂಜ, ಪ್ರೊಡಕ್ಷನ್ ನಂ.1, ಗಜಾನನ ಕ್ರಿಕೆಟರ್ಸ್, ತರವಾಡು, ಮನೆ ಮಂಚವು ಶೂಟಿಂಗ್ ಹಂತದಲ್ಲಿದೆ.
ದಿಗಿಲ್, ಇಂಬು ಇತ್ತೀಚೆಗೆ ಶೂಟಿಂಗ್ ಮುಗಿಸಿದೆ. ಇನ್ನು ಕಂಕನಾಡಿ, ಪೆಟ್ಟಿಸ್ಟ್, ಗಾಡ್ ಪ್ರಾಮಿಸ್.. ಹೀಗೆ ಕೆಲವು ಸಿನೆಮಾಗಳು ರೆಡಿಯಾಗಲಿವೆ. ದಸ್ಕತ್ ಶುಕ್ರವಾರ ಬಿಡುಗಡೆ ಆಗಿದೆ. ಮಿಡ್ಲ್ ಕ್ಲಾಸ್ ಫ್ಯಾಮಿಲಿ ಈಗಾಗಲೇ ರೆಡಿಯಾಗಿದ್ದು, ತೆರೆಕಾಣಲು ಸಿದ್ದವಾಗಿದೆ.
ಇದಿಷ್ಟೇ ಅಲ್ಲ; ಇನ್ನೂ ಹಲವು ಸಿನೆಮಾ ಮಾಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ. ಕೆಲವು ಚಿತ್ರಕಥೆ ಕೂಡ ನಡೆಯುತ್ತಿದೆ. ನಿರ್ದೇಶಕರು ಲೊಕೇಶನ್ ಹುಡುಕುತ್ತಿದ್ದಾರೆ. ಪ್ಲ್ಯಾನಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮೇಲೆ ತಿಳಿಸಿದ ಸಿನೆಮಾಗಳು ಅಲ್ಲದೆ ಇನ್ನೂ 5ಕ್ಕೂ ಅಧಿಕ ಸಿನೆಮಾಗಳು ಕೆಲವೇ ದಿನಗಳ ಅಂತರದಲ್ಲಿ ಶೂಟಿಂಗ್ ಆರಂಭಿಸಲಿದೆ. ಅಂತೂ ಕೋಸ್ಟಲ್ ವುಡ್ ಈಗ ಸಿಕ್ಕಾಪಟ್ಟೆ ಬ್ಯುಸಿ!