ಮಂಗಳೂರು: ತುಳುನಾಡಿನ ಗ್ರಾಮೀಣ ಬದುಕಿನ ನೂರಾರು ಸಂಗತಿಗಳನ್ನು ಆಯ್ದುಕೊಂಡು ಅವುಗಳನ್ನು ಬಿಡಿಬಿಡಿಯಾಗಿ ಬಿಡಿಸಿಕೊಂಡು ಒಂದೊಂದು ಸಂಗತಿಯನ್ನು ರೂಪಕದ ಹಾಗೆ ಸೃಷ್ಟಿಸುತ್ತ ಕಷ್ಟ-ಸಂಕಟಗಳನ್ನು ಪೋಣಿಸಿದ “ದಸ್ಕತ್’ ತುಳು ಸಿನೆಮಾ ಮೊದಲ ವಾರದಲ್ಲಿಯೇ ಸಕ್ಸಸ್ ಪ್ರದರ್ಶನ ದಾಖಲಿಸಿದೆ.
ತುಳುನಾಡಿನಲ್ಲಿ ಹಿಂದಿನ ಕಾಲದಲ್ಲಿ ಗ್ರಾಮೀಣ ಜನರ ಮೇಲಾಗುತ್ತಿದ್ದ ದಬ್ಬಾಳಿಕೆ, ದೌರ್ಜನ್ಯದ ಕಥಾನಕವನ್ನೇ ಮುಂದಿಟ್ಟು ಸಿದ್ದಪಡಿಸಿದ ಹಾಗೂ ತುಳು ಸಿನೆಮಾ ರಂಗದಲ್ಲಿ ಮಾಡಿದ ಹೊಸ ಪ್ರಯೋಗವಾದ ದಸ್ಕತ್‌ಗೆ ಪ್ರೇಕ್ಷಕರು ಶಹಬ್ಬಾಸ್‌ಗಿರಿ ತಿಳಿಸಿದ್ದಾರೆ.
ತುಳು ಚಿತ್ರರಂಗಕ್ಕೆ ಬದಲಾವಣೆಯ ಪ್ರಭಾವ ಬೀರಿದ ಒಂದು ಅದ್ಭುತ ಕೃತಿ ಎಂದು ಬಣ್ಣಿಸಿದ್ದಾರೆ.
ಒಬ್ಬ ಗ್ರಾಮ ಪಂಚಾಯತ್ ನೌಕರ ಊರಿನ ಕೆಲವರನ್ನು ಶೋಷಿಸುವ ಅಂಶ, ಅವರ ನಡುವಿನ ದ್ವೇಷ, ನಡುವಲ್ಲೊಂದು ಪ್ರೀತಿ, ರೋಷ, ಊರೊಳಗಿನ ಸಣ್ಣ ರಾಜಕೀಯ ಹೀಗೆ ನಾನಾ ಕೋನಗಳನ್ನು ಬೆಸೆದುಕೊಳ್ಳುವಲ್ಲಿ ದಸ್ಕತ್ ಯಶಸ್ವಿಯಾಗಿದೆ.
ಒಂದು ಸರಕಾರಿ ಕಚೇರಿ, ಅಲ್ಲಿಯ ಭ್ರಷ್ಟ ವ್ಯವಸ್ಥೆ ಹಾಗೂ ಅದರಿಂದ ರೋಸಿ ಹೋದ ಊರಿನ ಎಲ್ಲ ವಯೋಮಾನದ ಜನರು ಇದಕ್ಕೆ ಪ್ರತಿಕ್ರಿಯಿಸುವ ಬಗೆಯನ್ನು ಜನಪದ ರೂಪಕದ ಸ್ವರೂಪದಲ್ಲಿ ದಸ್ಕತ್ ಪ್ರಸ್ತುತಪಡಿಸಿದೆ. ಈ ಸಿನೆಮಾದಲ್ಲಿ ಸ್ಟಾರ್ ನಟ-ನಟಿಯರು ಇಲ್ಲವಾದರೂ ನಟನೆಯ ಮೂಲಕ ಎಲ್ಲ ಕಲಾವಿದರು ಸ್ಟಾರ್‌ಗಳಾಗಿದ್ದಾರೆ. ಕಥೆ ಹೇಳಿದ ರೀತಿ, ಪಾತ್ರಗಳ ಆಯ್ಕೆ ಹಾಗೂ ಅಭಿನಯ ಸಿನೆಮಾದ ತಾಕತ್ತು ಪ್ರದರ್ಶಿಸಿದೆ. ಪ್ರತೀ ದೃಶ್ಯಗಳು ವಿಭಿನ್ನ ಅನುಭವ ನೀಡುವಂತಿದೆ.
ಸೆವೆಂಟಿ ಸೆವೆನ್ ಸ್ಟುಡಿಯೋಸ್ ರಾಘವೇಂದ್ರ ಕುಡ್ವ ಅವರ ನಿರ್ಮಾಣದಲ್ಲಿ ಸಿದ್ದವಾದ ಈ ಸಿನೆಮಾವನ್ನು ಕೃಷ್ಣ ಜೆ. ಪಾಲೆಮಾರ್ ಅರ್ಪಿಸಿದ್ದಾರೆ. ಅನೀಶ್ ಪೂಜಾರಿ ವೇಣೂರು ರಚನೆ ಮತ್ತು ನಿರ್ದೇಶನ ಮಾಡಿದ್ದಾರೆ. ದೀಕ್ಷಿತ್ ಕೆ. ಅಂಡಿಂಜೆ, ಭವ್ಯ ಪೂಜಾರಿ, ಚಂದ್ರಹಾಸ್ ಉಲ್ಲಾಳ್, ಯುವ ಶೆಟ್ಟಿ, ಮೋಹನ್ ಶೇಣಿ, ದೀಪಕ್ ರೈ ಪಾಣಾಜೆ, ನೀರಜ್ ಕುಂಜರ್ಪ, ಮಿಥುನ್ ರಾಜ್, ತಿಮ್ಮಪ್ಪ ಕುಲಾಲ್, ಯೋಗೀಶ್ ಶೆಟ್ಟಿ ಸಹಿತ ಹಲವು ಕಲಾವಿದರು ಚಿತ್ರದಲ್ಲಿ ಮೋಡಿ ಮಾಡಿದ್ದಾರೆ. ಸಂತೋಷ್ ಆಚಾರ್ಯ ಗುಂಪಲಾಜೆ ಛಾಯಾಗ್ರಹಣ, ಗಣೇಶ್ ನೀರ್ಚಾಲ್ ಸಂಕಲನ ಮಾಡಿದ್ದಾರೆ. ಸಮರ್ಥನ್ ಎಸ್. ರಾವ್ ಸಂಗೀತವಿದೆ.