Advertisement

ತುಳು-ಬ್ಯಾರಿ ಭಾಷೆಗಿದೆ ವಿಶ್ವಮಾನ್ಯತೆ

10:24 AM Feb 04, 2019 | Team Udayavani |

ಮೂಡಿಗೆರೆ: ತುಳು ಮತ್ತು ಬ್ಯಾರಿ ಭಾಷೆಗಳು ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಬೆಳೆದು ವಿಶ್ವ ಮಟ್ಟಕ್ಕೆ ತಮ್ಮ ಪ್ರಾಬಲ್ಯ ಬೆಳೆಸಿಕೊಂಡಿದೆ ಎಂದು ಕರ್ನಾಟಕ ಬ್ಯಾರಿ ಅಕಾಡೆಮಿ ಅಧ್ಯಕ್ಷ ಕರಂಬಾರ್‌ ಮಹಮ್ಮದ್‌ ಹೇಳಿದರು.

Advertisement

ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ತುಳುಕೂಟ ಮತ್ತು ಕರ್ನಾಟಕ ತುಳು ಮತ್ತು ಬ್ಯಾರಿ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ನಡೆದ ಜಿಲ್ಲಾ ತುಳು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕರಾವಳಿ ಜಿಲ್ಲೆಯ ತುಳು ಭಾಷೆ ದಕ್ಷಿಣ ಕರ್ನಾಟಕದಲ್ಲಿ ತಮ್ಮ ಸಾಮರ್ಥ್ಯ ತೋರಿಸಿಕೊಂಡು ದೇಶ ವಿದೇಶದ ಮಟ್ಟಕ್ಕೆ ತಲುಪಿದೆ. ಬ್ಯಾರಿ ಭಾಷೆಯೂ ತುಳು ಭಾಷೆಯ ಜೊತೆಯಾಗಿ ಸಾಗಿದೆ. ಈ ಎರಡೂ ಭಾಷೆಯನ್ನು ಶ್ರೀಮಂತಗೊಳಿಸಲು ತುಳು ಮತ್ತು ಬ್ಯಾರಿ ಅಕಾಡೆಮಿಗಳು ತನ್ನದೇ ಆದ ರೀತಿಯಲ್ಲಿ ಕಾರ್ಯ ನಡೆಸುತ್ತಾ ಜನರ ಮನಸ್ಸನ್ನು ತಲುಪಿದೆ ಎಂದು ತಿಳಿಸಿದರು.

ಮಂಗಳೂರಿನ ತುಳು ವಿದ್ವಾಂಸ ದಯಾನಂದ ಕತ್ತಲ್ಕರ್‌ ಮಾತನಾಡಿ, ಕೇಂದ್ರ ಸರಕಾರ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸದ ಹೊರತು, ತುಳು ಭಾಷೆಗಾಗಿ ಎಷ್ಟೇ ಸಮ್ಮೇಳನಗಳನ್ನು ನಡೆಸಿದರೆ ಪ್ರಯೋಜನವಿಲ್ಲ. ಸರಕಾರದ ಮೇಲೆ ಒತ್ತಡ ಹೇರುವ ಮೂಲಕ 8ನೇ ಪರಿಚ್ಛೇದಕ್ಕೆ ಸೇರಿಸುವ ಕೆಲಸ ಆಗಬೇಕು. ತುಳು ಭಾಷೆ ಒಂದು ಜಿಲ್ಲೆಯಿಂದ ಬಂದಿದೆ ಎಂದರೆ ತಪ್ಪಾಗುತ್ತದೆ. ಒಂದು ಸಾವಿರ ವರ್ಷದ ಹಿಂದೆ ಕರಾವಳಿ ತುಳು ರಾಜ್ಯವಾಗಿತ್ತು. ಇಂದು ಒಂದು ಜಿಲ್ಲೆಯಾಗಿದೆ. ಈ ಭಾಷೆ ಒಂದು ರಾಜ್ಯವಾಗುವವರೆಗೆ ಹೋರಾಟ ಮಾಡಬೇಕಾಗಿದೆ. ಭಾಷೆಯ ಬೆಳವಣಿಗೆಗೆ ತುಳು ಮತ್ತು ಬ್ಯಾರಿ ಭಾಷಿಗರು ಒಗ್ಗಟ್ಟಾಗಿ ಹೋರಾಟ ರೂಪಿಸುವ ಅಗತ್ಯವಿದೆ ಎಂದು ತಿಳಿಸಿದರು.

ಈ ವೇಳೆ ಸಾಹಿತಿ ಜಯಪ್ಪ ಗೌಡ, ಬ್ಯಾರಿ ಅಕಾಡೆಮಿ ಅಧ್ಯಕ್ಷ ಕೆ.ಮಹಮ್ಮದ್‌ ಅವರನ್ನು ಗೌರವಿಸಲಾಯಿತು. ತುಳು ಪುಸ್ತಕ ಬಿಡುಗಡೆಗೊಳಿಸಲಾಯಿತು. ಶಾಸಕ ಎಂ.ಪಿ.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

Advertisement

ಎಂಎಲ್‌ಸಿ ಎಂ.ಕೆ.ಪ್ರಾಣೇಶ್‌, ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ, ತುಳು ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ರಿಜಿಸ್ಟ್ರಾರ್‌ ಚಂದ್ರಹಾಸ ರೈ, ತುಳುಕೂಟದ ಅಧ್ಯಕ್ಷ ಅಶೋಕ ಎನ್‌. ಶೆಟ್ಟಿ, ತಾ.ಪಂ. ಅಧ್ಯಕ್ಷ ಕೆ.ಸಿ.ರತನ್‌, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಕುಮಾರ್‌, ಜಿಲ್ಲಾ ಬ್ಯಾರಿ ಒಕ್ಕೂಟದ ಅಧ್ಯಕ್ಷ ಸಿ.ಕೆ.ಇಬ್ರಾಹಿಂ, ಮುಖಂಡರಾದ ನರೇದ್ರ ಶೆಟ್ಟಿ, ಡಾ| ರಾಮಚರಣ ಅಡ್ಯಂತಾಯ, ಬಿ.ಎಲ್‌.ವಿಶ್ವನಾಥ್‌ ರೈ, ವಸಂತ ಎಸ್‌.ಪೂಜಾರಿ, ರಾಘವ ಮುಡಿತ್ತಾಯ, ಕಿರುಗುಂದ ಅಬ್ಟಾಸ್‌, ವಿಶ್ವ ಕುಮಾರ್‌, ವಿನೀದ್‌ ಕುಮಾರ್‌ ಶೆಟ್ಟಿ, ರವಿಕುಮಾರ್‌, ಸುಂದರ್‌ ಬಿಳಗುಳ, ಕೇಶವ ಸುವರ್ಣ, ರಮೇಶ್‌ ಆಚಾರ್ಯ, ಅತುಲ್‌ರಾವ್‌, ಪಿ.ಹರೀಶ್‌, ಗಂಗಾಧರ್‌, ಎಂ.ಎ.ಹಮಬ್ಬ, ಐವಿಆರ್‌ ಪಿಂಟೊ, ಎ.ಸಿ.ಅಯೂಬ್‌ ಹಾಜಿ, ಫಿಶ್‌ ಮೋಣು, ಬಿ.ಎಚ್. ಮಹಮ್ಮದ್‌ ಮತ್ತಿತರರಿದ್ದರು.

ಮೂಡಿಗೆರೆ ತಾಲೂಕಿನಲ್ಲಿ 30 ಸಾವಿರ ಮಂದಿ ತುಳು ಭಾಷಿಗರಿದ್ದೇವೆ. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ನಮ್ಮ ಒತ್ತಾಯವಿದೆ. ತುಳು ಅಕಾಡೆಮಿಗೆ ತಾಲೂಕಿನಿಂದ ಇಬ್ಬರು ಸದಸ್ಯರನ್ನು ಸರಕಾರ ನೇಮಿಸಬೇಕು. ಅಕಾಡೆಮಿಯಿಂದ ಪ್ರತಿ ವರ್ಷ ತುಳುಕೂಟದ ಕಾರ್ಯಕ್ರಮಕ್ಕೆ 5 ಲಕ್ಷ ರೂ. ಅನುದಾನ ಒದಗಿಸಬೇಕು. •ಅಶೋಕ್‌ ಎನ್‌.ಶೆಟ್ಟಿ, ತುಳುಕೂಟದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next