Advertisement

ನಟ ರೂಪೇಶ್ ಶೆಟ್ಟಿ ಸಂದರ್ಶನ |ಗಮ್ಜಾಲ್-ಕಮಾಲ್

12:43 PM Mar 16, 2021 | ಗಿರೀಶ್ ಗಂಗೇನಹಳ್ಳಿ |

ಮಣಿಪಾಲ : ತೆರೆ ಹಿಂದೆ ಕಷ್ಟ ಪಟ್ಟು, ಬಣ್ಣದ ಪರದೆ ಮೇಲೆ ಕಾಣಿಸಿಕೊಳ್ಳುವ ಮಹೋತ್ತರ ಕನಸು ಹೊತ್ತು, ಕಷ್ಟದ ದಿನಗಳನ್ನು ಅನುಭವಿಸಿ ಇಂದು ತುಳು ಭಾಷೆಯ ಸೂಪರ್ ಸ್ಟಾರ್ ಆಗಿರುವವರು ಗಮ್ಜಾಲ್, ಗಿರಿಗಿಟ್ ಸಿನಿಮಾ ಖ್ಯಾತಿಯ ನಟ ರೂಪೇಶ್ ಶೆಟ್ಟಿ. ಇವರು ಉದಯವಾಣಿಯಿಂದ ಮೂಡಿ ಬರುತ್ತಿರುವ ‘ತೆರೆದಿದೆ ಮನೆ ಬಾ ಅತಿಥಿ’ ಕಾರ್ಯಕ್ರದಲ್ಲಿ ಇಂದು(ಮಾ.13) ಭಾಗಿಯಾಗಿ ಮನದಾಳದ ಮಾತು ಬಿಚ್ಚಿಟ್ಟಿದ್ದಾರೆ. ಅವರ ಜೊತೆಗಿನ ಕಿರು ಸಂದರ್ಶನ.

Advertisement

*ರೂಪೇಶ್ ನಿಮ್ಮ ಹಿನ್ನೆಲೆ ಏನು : ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಾನು ನಂತರದ ಸಿನಿಮಾ ನಿರ್ದೇಶಕನಾಗಬೇಕಾ? ನಟನಾಗಬೇಕಾ? ನಿರ್ಮಾಪಕನಾಗಬೇಕೆ? ಎಂಬ ಪ್ರಶ್ನೆಗಳು ನನ್ನ ತಲೆಯಲ್ಲಿ ಓಡಲು ಶುರು ಮಾಡಿದವು. ಅಪ್ಪ ಯಕ್ಷಗಾನ ಕಲಾವಿದನಾಗಿದ್ದರು, ಅಷ್ಟು ಬಿಟ್ರೆ ನನ್ನ ಮನೆಯಲ್ಲಿ ಯಾರೂ ಕೂಡ ಸಿನಿಮಾ ಹಿನ್ನೆಲೆಯಲ್ಲಿ ಬಂದವರಿಲ್ಲ. ಹೀಗಿರುವಾಗ ‘ನಮ್ಮ ಟಿವಿ’ಯಲ್ಲಿ ನಿರೂಪಕನಾಗಿ ಕೆಲಸ ಮಾಡಿದೆ. ನಂತರದ ದಿನಗಳಲ್ಲಿ ಸಿನಿಮಾದಲ್ಲಿ ಅವಕಾಶಗಳು ಸಿಗದ ಕಾರಣ ತುಳುವಿನಲ್ಲಿ ಆಲ್ಬಂ ಸಾಂಗ್ ಮಾಡಿದೆ. ‘ಮೋಕೆ’ ಆಡಿಯೋ ಸಿಡಿ ನನಗೆ ಬಿಗ್ ಹಿಟ್ ಕೊಟ್ಟಿತು. ಇದಾದ ಮೇಲೆ ಟೆಲಿಸಿನಿಮಾ ಮಾಡಿದೆ.

*ಮೊದಲ ಸಿನಿಮಾದ ಅನುಭವ ಹೇಗಿತ್ತು?: ನಾನು ಮಾಡಿದ ಮೊಟ್ಟ ಮೊದಲ ಸಿನಿಮಾ ‘ಪನ್ನು’. ಇದು ಟೆಲಿ ಫಿಲ್ಮ್  ಆಗಿದ್ದರಿಂದ ಪ್ರಚಾರಕ್ಕೆ ತುಂಬಾನೆ ಸರ್ಕಸ್ ಮಾಡಬೇಕಾಯ್ತು.ಟೌನ್ ಹಾಲ್ ಸೇರಿದಂತೆ ಜಾತ್ರೆಗಳಲ್ಲಿ ಸಿನಿಮಾ ಪ್ರದರ್ಶನ ಮಾಡುತ್ತಿದ್ದೆ. 2013 ರಲ್ಲಿ ಅಷ್ಟಾಗಿ ಇಂಟರ್ನೆಟ್ ಸಿಗುತ್ತಿರಲಿಲ್ಲ. ಪ್ರಚಾರಕ್ಕೆ ಒಂಚೂರು ಕಷ್ಟವಾಗುತ್ತಿತ್ತು. ಇದೆಲ್ಲ ಒಂದೊಳ್ಳೆ ಅನುಭವ.

*ಪೂರ್ಣ ಪ್ರಮಾಣದ ನಟನೆ ಯಾವಾಗಿನಿಂದ ಶುರುವಾಯಿತು : ‘ನಮ್ಮ ಟಿವಿ’ಯಲ್ಲಿ ನಾನು ನಿರೂಪಕನಾಗಿ ಕೆಲಸ ಮಾಡುತ್ತಿದ್ದ ವೇಳೆ ಅಲ್ಲಿ ಮೇಕ‍ಪ್ ಮ್ಯಾನ್ ಆಗಿದ್ದ ದೇವರಾಜ್ ಎಂಬುವವರು ಸಿನಿಮಾ ಒಂದನ್ನು ಮಾಡಿದ್ರು.ಆ ಚಿತ್ರಕ್ಕೆ ನನ್ನನೇ ನಾಯಕನಾಗಿ ಆಯ್ಕೆ ಮಾಡಿಕೊಂಡಿದ್ದರು. ಅಲ್ಲಿಂದ ನನ್ನ ಸಿನಿ ಜರ್ನಿ ಶುರುವಾಯಿತು. ಆದರೆ ಆ ಸಿನಿಮಾ ಯಶಸ್ಸು ಕಾಣಲಿಲ್ಲ.

*ಚಿತ್ರರಂಗದ ಬಗ್ಗೆ ಹೇಳೋದಾದ್ರೆ : ‘ಐಸ್ ಕ್ರೀಂ’ ಸೇರಿದಂತೆ ಸುಮಾರು ಐದಾರು ಚಿತ್ರಗಳಲ್ಲಿ ನಟಿಸಿದೆ. ಆದ್ರೆ ಅವು ಹೇಳಿಕೊಳ್ಳುವಂತಹ ಯಶಸ್ಸು ಕಾಣಲಿಲ್ಲ.  ಪ್ಲಾಫ್ ಆದವು. ನಂದೇ ಸ್ಟಾರ್ ಡಮ್ ಇದೆ ಎನ್ನುವ ಗುಂಗಿನಲ್ಲಿದ್ದ ನನಗೆ ಚಿತ್ರಗಳ ಸೋಲು ಪಾಠ ಕಲಿಸಿದವು.  ನಂತರದ ಚಿತ್ರಗಳಿಗೆ ಹೆಚ್ಚೆಚ್ಚು ಶ್ರಮ ವಹಿಸಿ ಹೊಸತನ್ನು ಕೊಡಬೇಕು ಎಂದು ನಿರ್ಧರಿಸಿದೆ. ಸಿನಿಮಾ ಸೋತಾಗ ನನಗೊಂದು ಕಾನ್ಫಿಡೆನ್ಸ್ ಬಂದಿದ್ದು, ಚಿತ್ರರಂಗದಲ್ಲೇ ಬದುಕು ಕಟ್ಟಿಕೊಳ್ಳಬೇಕೆಂದು ನಿರ್ಧರಿಸಿದೆ.

Advertisement

*ಗಿರಿಗಿಟ್ ಸಿನಿಮಾ ಬಗ್ಗೆ ಮಾತನಾಡೋದಾದ್ರೆ : ಇದು ನನ್ನನ್ನು ಚಿತ್ರರಂಗದಲ್ಲಿ ಉಳಿಸಿದ ಚಿತ್ರ. ನನ್ನ ಈ ಹಿಂದಿನ ಎಲ್ಲಾ ಚಿತ್ರಗಳು ಪ್ಲಾಫ್ ಆಗಿದ್ದವು. ಎಲ್ಲ ಕಡೆ ಸೋತಿದ್ದ ನನಗೆ ಏನು ಮಾಡಬೇಕು ತಿಳಿಯುತ್ತಿರಲಿಲ್ಲ. ಕೊನೆಯದಾಗಿ ಇದೊಂದು ಸಿನಿಮಾ ಮಾಡಿ ಸುಮ್ಮನಾಗಿ ಬಿಡೋಣ.ಯಶಸ್ಸಾದ್ರೆ ಮುಂದುರೆಯೋಣ, ಇಲ್ಲವಾದರೆ ಸಿನಿ ಪಯಣ ಇಲ್ಲಿಗೆ ನಿಲ್ಲಿಸೋಣ ಎಂದು ನಿರ್ಧರಿಸಿ ಮಾಡಿದ ಚಿತ್ರವೇ ಗಿರಿಗಿಟ್. ಆದ್ರೆ ಇದು ತುಂಬಾ ಯಶಸ್ಸು ಮತ್ತು ಬ್ರೇಕ್ ಕೊಟ್ಟ ಚಿತ್ರ.

*ಗಮ್ಜಾಲ್ ಚಿತ್ರದಲ್ಲಿ ನವೀನ್ ಡಿ ಪಡಿಲ್ ಬಗ್ಗೆ ಹೇಳೋದಾದ್ರೆ : ಅವರೊಬ್ಬ ಅದ್ಭುತ ನಟ.ಮುಖ್ಯವಾಗಿ ಚಿತ್ರದಲ್ಲಿ ಇವರ ಪಾತ್ರ ತುಂಬಾ ಮುಖ್ಯವಾಗಿದ್ದು, ಮುದುಕನ ಪಾತ್ರಕ್ಕೆ ನವೀನಣ್ಣ ಹೇಳಿ ಮಾಡಿಸಿದ ಹಾಗೆ ನಟಿಸಿದ್ದಾರೆ. ಅವರ ಪಾತ್ರ ಹೇಗಿತ್ತು ಅಂದ್ರೆ ಇತ್ತ ಕಾಮಿಡಿಯೂ ಬೇಕಿತ್ತು ಮತ್ತೊಂದು ಕಡೆ ಭಾವುಕತೆಯೂ ಬೇಕಿತ್ತು. ಎರಡನ್ನೂ ಸಮನಾಗಿ ತೂಗಿಸಿದ್ರು ನವೀನಣ್ಣ.

*ಗಮ್ಜಾಲ್ ರಿಲೀಸ್ ಹಿಂದಿನ ಕಥೆ ಏನು : ತುಳು ಸಿನಿಮಾ ರಂಗಕ್ಕೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಚಿತ್ರವನ್ನು ಫೆ.19ಕ್ಕೆ ರಿಲೀಸ್ ಮಾಡಲು ನಿರ್ಧರಿಸಿದ್ದೆವು. ಆದರೆ ನಮಗೂ ಒಂದು ಆತಂಕ ಇದ್ದು ಕೋವಿಡ್ ನಂತರ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ ನಮ್ಮದೆ. ಒಟಿಟಿಯಲ್ಲಿ ರಿಲೀಸ್ ಮಾಡಿ ಅಂತ ಕೆಲವರು ಹೇಳಿದ್ರು ಕೂಡ ನಾವು ದೇವರ ಮೇಲೆ ಭಾರ ಹಾಕಿ ಚಿತ್ರಮಂದಿರಗಳಲ್ಲಿಯೇ ಸಿನಿಮಾ ರಿಲೀಸ್ ಮಾಡಿದ್ವಿ. ಕುಟುಂಬ ಸಮೇತರಾಗಿ ಬಂದು ಚಿತ್ರವನ್ನು ನೋಡ್ತಾ ಇದ್ದಾರೆ. ಇನ್ನೇನು 25ನೇ ದಿನಕ್ಕೆ ಕಾಲಿಡುತ್ತಿದೆ. ಚಿತ್ರವನ್ನು ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದ.

*ನಿಮ್ಮ ಪ್ರಕಾರ ಯಶಸ್ಸು ಅಂದ್ರೆ ಏನು : ಶ್ರಮ ಪಟ್ಟು ಕೆಲಸ ಮಾಡಿ ಸೋತು ನಿಂತಾಗ ಬರುತ್ತದೆಯಲ್ಲ ಒಂದು ಒಳ್ಳೆಯ ರಿಸಲ್ಟ್, ಅದೇ ಯಶಸ್ಸು. ನಮ್ಮ ಪಾಲಿನ ಕೆಲಸವನ್ನು ಸರಿಯಾಗಿ ಮಾಡಿ ಫಲಾಪೇಕ್ಷೆಯನ್ನು ದೇವರಿಗೆ ಬಿಡಬೇಕು. ಒಟ್ಟಿನಲ್ಲಿ ಶ್ರಮಕ್ಕೆ ಮೊದಲ ಆದ್ಯತೆ ನೀಡಿದರೆ ಯಶಸ್ಸು ದೊರೆಯುವುದು ಪಕ್ಕಾ.

Advertisement

Udayavani is now on Telegram. Click here to join our channel and stay updated with the latest news.

Next