ಮೈಸೂರು: ನಗರದ ತುಳಸಿದಾಸ್ ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಸರಿಪಡಿಸಿ, ಆಸ್ಪತ್ರೆಗೆ ಬರುವ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಸೌಲಭ್ಯಗಳನ್ನು ಆಸ್ಪತ್ರೆಯಲ್ಲೇ ಕಲ್ಪಿಸುವಂತೆ ಶಾಸಕ ಎಸ್.ಎ.ರಾಮದಾಸ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಲಕ್ಷ್ಮಿಪುರಂನಲ್ಲಿರುವ ತುಳಸಿದಾಸ್ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿ, ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಸ್ಪತ್ರೆ ಪಕ್ಕದಲ್ಲಿ ಒಪಿಡಿ ನಿರ್ಮಿಸಲು ಹಾಗೂ ಅಲ್ಲಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಸೂಚಿಸಿದರು.
ಇದಕ್ಕಾಗಿ ಆಸ್ಪತ್ರೆ ಮುಂಭಾಗದ ಗೇಟನ್ನು ಮುಚ್ಚಿ ಶಾರದವಿಲಾಸ ಕಾಲೇಜು ಕಡೆಗೆ ಗೇಟ್ ತೆಗೆದು, ಸಾರ್ವಜನಿಕರ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು. ಜೊತೆಗೆ ಆಸ್ಪತ್ರೆ ಹಿಂಭಾಗದ ಮೂರು ವಸತಿಗಳಿಗೆ ಮಾನಂದವಾಡಿ ರಸ್ತೆಯ ಭಾಗದಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಇನ್ನೂ ಆಸ್ಪತ್ರೆಯ ಆವರಣದಲ್ಲಿ ನಿರಂತರವಾಗಿ ನೀರು ಬರುತ್ತಿದ್ದು, ಇದನ್ನು ಸರಿಪಡಿಸುವ ಸಲುವಾಗಿ ಕ್ರಮವಹಿಸುವಂತೆ ಸೂಚಿಸಿದರು. ಈ ಭಾಗದಲ್ಲಿ ಈಗಾಗಲೇ ರಸ್ತೆ ನಿರ್ಮಿಸಲಾಗುತ್ತಿದ್ದು, ಈ ವೇಳೆ ಆಸ್ಪತ್ರೆಯೊಳಗೆ ನೀರು ಬಾರದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಯಾವ ರೀತಿ ಮಾಡಬೇಕೆಂಬುದನ್ನು ಚರ್ಚಿಸಿ ಕೂಡಲೇ ಕೆಲಸ ಆರಂಭಿಸಬೇಕು ಎಂದರು.
ಜೊತೆಗೆ ಆಸ್ಪತ್ರೆ ಆವರಣದಲ್ಲಿ ಸಸಿಗಳನ್ನು ನೆಟ್ಟು ಹಸಿರೀಕರಣಕ್ಕೆ ಆದ್ಯತೆ ನೀಡಿ, ಆಸ್ಪತ್ರೆಯಲ್ಲೇ ನಿಲ್ಲಿಸುವ ಆ್ಯಂಬುಲೆನ್ಸ್‌ಗಳನ್ನು ಬೇರೆ ಕಡೆ ನಿಲ್ಲಿಸಲು ಬೇಕಾದ ವ್ಯವಸ್ಥೆಗಳನ್ನು ಮಾಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಅವರು ಸೂಚನೆ ನೀಡಿದರು.