Advertisement

Tulasi: ಸರ್ವ ರೋಗ ನಿವಾರಿಣಿ ತುಳಸಿ

02:58 PM Dec 04, 2023 | Team Udayavani |

ನಮ್ಮ ಹಿಂದೂ ಸಂಪ್ರದಾಯಗಳಲ್ಲಿ ತುಳಸಿ ಗಿಡಕ್ಕೆ, ತುಳಸಿ ಪೂಜೆಗೆ ಬಹಳ ಮಹತ್ವವಿದೆ. ತುಳಸಿ ಗಿಡವನ್ನು ಲಕ್ಷ್ಮೀ ದೇವಿಯ ಸ್ವರೂಪವೆಂದು ಪೂಜಿಸಲಾಗುತ್ತದೆ.

Advertisement

ಮುತ್ತೈದೆಯರು ತುಳಸಿ ಗಿಡವನ್ನು ಪೂಜಿಸುವುದರಿಂದ ಪತಿವ್ರತ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಪುರಾಣಗಳು ಹೇಳುತ್ತವೆ. ತುಳಸಿ ಗಿಡವನ್ನು ಪೂಜಿಸುವ ಮೊದಲು ಶುದ್ಧವಾಗಿ ಸ್ನಾನ ಮಾಡಿ, ಮೊದಲಿಗೆ ಸೂರ್ಯ ದೇವರಿಗೆ ಅರ್ಘ್ಯವನ್ನು ಸಮರ್ಪಿಸಿ ಅನಂತರ ತುಳಸಿ ಗಿಡಕ್ಕೆ ಹಿತ್ತಾಳೆಯ ಕಲಶದಲ್ಲಿ ನೀರನ್ನು ಹಾಕಿ ತುಳಸಿ ಗಿಡದ ಸುತ್ತ ಮೂರು ಪ್ರದಕ್ಷಿಣೆ ಬರಬೇಕು. ಮೊದಲ ಹಾಗೂ ಎರಡನೇ ಸುತ್ತಿನ ಪ್ರದಕ್ಷಿಣೆಯಲ್ಲಿ ತುಳಸಿ ಗಿಡದ ಬುಡಕ್ಕೆ ಹಾಗೂ ಮೂರನೆಯ ಸುತ್ತಿನ ಪ್ರದಕ್ಷಿಣೆಯಲ್ಲಿ ತುಳಸಿ ಗಿಡದ ತುದಿಯಿಂದ ಗಿಡದ ಎಲ್ಲ ಭಾಗಗಳಿಗೂ ನೀರು ಬೀಳುವಂತೆ ನೀರನ್ನು ಹಾಕಬೇಕು.

ತುಳಸಿ ಮಾತೆಗೆ ಮೂರು ಪ್ರದಕ್ಷಿಣೆ ಬಂದ ಅನಂತರ ದೇವಿಗೆ ಆರತಿಯನ್ನು ಎತ್ತಿ, ಹೂ ಮಾಲೆ ಹಾಕಿ, ಸೆಗಣಿ ಸಾರಿಸಿ ನಿರ್ಮಲವಾದ ತುಳಸಿ ಕಟ್ಟೆಯ ಎದುರಿನಲ್ಲಿ ರಂಗೋಲಿ ಬಿಡಿಸಿ, ದೇವಿಗೆ ಸೀರೆಯನ್ನು ಉಡಿಸಿ, ಬಳೆ, ಕಾಲುಂಗುರ, ಕುಂಕುಮ, ತಾಳಿಯನ್ನು ಇಟ್ಟು, ಬಾಳೆದಿಂಡನ್ನು ತುಳಸಿ ಕಟ್ಟೆಯ ಪಕ್ಕದಲ್ಲಿ ಇಟ್ಟು, ನೆಲ್ಲಿಕಾಯಿಯ ಗೆಲ್ಲನ್ನು ತುಳಸಿ ಗಿಡದ ಜತೆಗೆ ಇಟ್ಟು, ತುಳಸಿ ಮಾತೆಗೆ ಆರತಿ ಬೆಳಗಿ ಪೂಜೆ ಮಾಡುತ್ತಾರೆ.

ಈ ರೀತಿ ಪ್ರತೀ ದಿನವೂ ಪೂಜೆ ಮಾಡಿದರೆ ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ವೃದ್ಧಿಗೊಳ್ಳುತ್ತದೆ ಹಾಗೂ ದುಷ್ಟ ಶಕ್ತಿಗಳು ನಿರ್ನಾಮವಾಗಿ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತದೆ. ಹಾಗೂ ಮನೆಯ ವಾಸ್ತು ದೋಷಗಳು ಕೂಡ ಪರಿಹಾರ ವಾಗುತ್ತವೆ.

ತುಳಸಿ ಗಿಡವನ್ನು ನೆಡುವಾಗ ಶುದ್ಧ ಮಣ್ಣಿನಲ್ಲಿ ನೆಡಬೇಕು. ಮನೆಯ ಯಜಮಾನನು ಸೋಮವಾರ, ಬುಧವಾರ, ಗುರುವಾರಗಳಂದು ತುಳಸಿ ಗಿಡವನ್ನು ನೆಟ್ಟರೆ ಶುಭ ಎನ್ನುತ್ತಾರೆ. ತುಳಸಿ ಗಿಡಕ್ಕೆ ನೀರು ಹಾಕಿ ಪೂಜಿಸಿದ ಅನಂತರ ತುಳಸಿ ದಳದಲ್ಲಿ ಬಿದ್ದ ನೀರನ್ನು ತೀರ್ಥವೆಂದು ಸ್ವೀಕರಿಸಿದರೆ ಸರ್ವ ರೋಗ ನಿವಾರಣೆಯಾಗುತ್ತದೆ.

Advertisement

ತುಳಸಿ ಗಿಡವನ್ನು ಸೂರ್ಯ ದೇವರ ಕಿರಣಗಳು ತುಳಸಿ ಗಿಡದ ಅಭಿಮುಖವಾಗಿ ಬೀಳುವಂತೆ ಶುದ್ಧ ಮಣ್ಣಿನಲ್ಲಿ ನೆಡಬೇಕು ಹಾಗೂ ಮನೆಯ ಈಶಾನ್ಯ ಭಾಗದಲ್ಲಿ ನೆಟ್ಟರೆ ಶುಭ.

ನೆಟ್ಟ ತುಳಸಿ ಗಿಡವು ಒಣಗಿದರೆ ಸಕಲ ವಿಘ್ನಗಳು ನಿವಾರಣೆಯಾಯಿತು, ಮನೆಯಲ್ಲಿ ಏನಾದರೂ ವಾಸ್ತು ದೋಷಗಳು ಇದ್ದರೆ ಅವುಗಳೆಲ್ಲಾ ಪರಿಹಾರವಾಗಿ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಯೂರಿತು ಎಂದು ಭಾವಿಸಬೇಕೇ ವಿನಃ ನೆಟ್ಟ ಗಿಡ ಒಣಗಿ ಹೋಯಿತಲ್ಲಾ ಎಂದು ಮರುಕಪಡಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಸರ್ವ ರೋಗ ನಿವಾರಿಣಿ, ಸರ್ವ ಪಾಪ ಪರಿಹಾರಿಣಿಯಾದ ತುಳಸಿ ಕಟ್ಟೆಯ ಸಮೀಪ ಪ್ರತಿನಿತ್ಯ ಮುಸ್ಸಂಜೆಯ ಹೊತ್ತು ದೀಪವಿಟ್ಟರೆ ತುಂಬಾ ಒಳಿತು ಹಾಗೂ ದುಷ್ಟ ಶಕ್ತಿಗಳನ್ನು ನಿಗ್ರಹಿಸುವ ಶಕ್ತಿ ನಾವು ದೇವಿಯ ಬಳಿ ಇಡುವ ದೀಪಕ್ಕಿದೆ.

-ಪ್ರಜ್ಞಾ ರವೀಶ್‌

ಕಾಸರಗೋಡು

 

Advertisement

Udayavani is now on Telegram. Click here to join our channel and stay updated with the latest news.

Next