Advertisement
ಕೆಲವು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿರುವ ಪದ್ಮಶ್ರೀ ಪ್ರಶಸ್ತಿ ಪಡೆದ ತುಳಸಿ ಗೌಡರ ಊರಿಗೆ ಪ್ರವಾಸ ಮತ್ತು ಸಂದರ್ಶನ ಎರಡನ್ನು ಹಮ್ಮಿಕೊಂಡೆವು.
Related Articles
Advertisement
ತುಳಸಿ ಗೌಡರು ಎರಡು ವರ್ಷದ ಮಗುವಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಹೆಣ್ಣಿನ ಜವಾಬ್ದಾರಿ ಎಂದರೆ ಹಿಂದಿನ ಕಾಲದಲ್ಲಿ ಕಷ್ಟವೆಂದೇ ನಂಬಿಕೆ. ಅಲ್ಲದೆ ತುಳಸಿ ಅವರದ್ದು ಬಾಲ್ಯ ವಿವಾಹ ಆದರೆ ಗಂಡ ಗೋವಿಂದಗೌಡರು ಬಹುಬೇಗನೆ ತೀರಿಕೊಂಡಾಗ ತುಳಸಿ ಮಗನನ್ನು ಸಾಕುವ ಜವಾಬ್ದಾರಿಯನ್ನು ಹೊರಬೇಕಾಯಿತು.
ಅನಂತರ ಇವರು ನೋವು ತುಂಬಿದ ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಉದ್ದೇಶದಿಂದ ಪ್ರಕೃತಿಯ ಮಡಿಲಿಗೆ ಬಂದರು. ಇಲ್ಲಿ ಇವರು ಪರಿಸರದ ಬಗ್ಗೆ ಹಲವಾರು ವಿಚಾರಗಳನ್ನು ತಿಳಿದು ಯಾವ ಸಂದರ್ಭದಲ್ಲಿ ಯಾವ ಬೀಜ ಬಿತ್ತಿ ಬೆಳೆ ಬೆಳೆಯಬೇಕು? ಯಾವಾಗ ನಾಟಿಗೆ ಸೂಕ್ತ? ಎಂಬುದನ್ನು ಕಲಿಯುತ್ತಾ ವರ್ಷಕ್ಕೆ ಮೂವತ್ತು ಸಾವಿರಕ್ಕಿಂತಲೂ ಹೆಚ್ಚು ಗಿಡಗಳನ್ನು ನೆಟ್ಟು ಈ ಭೂಮಂಡಲದ ಹಸುರು ಹೊದಿಕೆಯನ್ನು ವಿಸ್ತಾರಗೊಳಿಸುತ್ತ ಬರುತ್ತಿದ್ದಾರೆ. ಇವರು ಹಲವಾರು ವಿಧದ ಗಿಡಗಳನ್ನು ನೆಟ್ಟು ಮಕ್ಕಳಂತೆ ಬೆಳೆಸಿ ಪೋಷಣೆ ಮಾಡಿದ್ದಾರೆ. ಮರಗಿಡಗಳಲ್ಲಿ ಮಕ್ಕಳ ಪ್ರೀತಿಯನ್ನು ಕಾಣುತ್ತಾ ಮುಗ್ಧರಾಗಿದ್ದಾರೆ.
ಗಿಡ ಮರಗಳೊಂದಿಗೆ ಸದಾ ಮಾತಾಡುವ ಅವುಗಳ ರೋದನೆ, ವೇದನೆಗೆ ಸ್ಪಂದಿಸುವ ಇವರು ಬಡತನದಲ್ಲಿ ಇದ್ದರು ತಾನೂ ನೆಟ್ಟ ಲಕ್ಷಾಂತರ ಗಿಡ ಮರಗಳ ನೆಮ್ಮದಿಯನ್ನು ಕಾಣುತ್ತಾ ಬದುಕನ್ನು ಕಟ್ಟಿಕೊಂಡಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ಬಂದಿರುವುದರ ಬಗ್ಗೆ ಇವರಲ್ಲಿ ಕೇಳಿದಾಗ ಏನೋ ಒಂದಿಷ್ಟು ಮಾಡಿದ್ದೇನೆ. ಇನ್ನೂ ಒಂದಷ್ಟು ಮಾಡಲು ಇದೆ. ಪ್ರಕೃತಿ ಸೇವೆಗೆ ಅಂತ್ಯವಿಲ್ಲ ಅದು ನಿರಂತರ. ಪದ್ಮಶ್ರೀ ಪ್ರಶಸ್ತಿಯ ಸಂಭ್ರಮಕ್ಕಿಂತ ನಾಡಿನ ಎಲ್ಲರೂ ಸ್ವ ಇಚ್ಛೆಯಿಂದ ಯಾರೆಲ್ಲ ಒತ್ತಾಯಕ್ಕೂ ಕಾಯದೆ ನಮ್ಮ ಭವಿಷ್ಯದ ಭದ್ರತೆಯ ಉದ್ದೇಶ ಇಟ್ಟುಕೊಂಡು ಗಿಡ ನೆಟ್ಟು ಪೋಷಿಸಿದರೆ ಅದಕ್ಕಿಂತ ದೊಡ್ಡ ಸಂಭ್ರಮ ಬೇರೆ ಇಲ್ಲ ಎನ್ನುತ್ತಾರೆ.
ಅರುಣ್ ಕುಮಾರ್
ಶ್ರೀನಿವಾಸ್ ಕಾಲೇಜು, ಮಂಗಳೂರು