Advertisement

ನೆನಪೆಂಬ ತುಳಸಿ

08:03 PM Mar 05, 2017 | Harsha Rao |

ಅತ್ತಿಗೆ, ನಾಳೆ ಹತ್ತು ಗಂಟೆಗೆ ಜೆಸಿಬಿ ಬರುತ್ತಂತೆ. ನೀವು ಒಮ್ಮೆ ಕೊನೇ ಬಾರಿ ನೋಡ್ಬೇಕು ಅಂತಿದ್ರಲ್ಲ… ನಾಳೆ ಬಿಡುವು ಮಾಡಿಕೊಂಡು ಹೋಗ್ಬನ್ನಿ…” ರಘು ಫೋನ್‌ ಮಾಡಿ ತಿಳಿಸಿದ್ದ.

Advertisement

ಈ ರಘು, ಮಾಧವನ್ನ “ಅಣ್ಣ’ ಅಂತ್ಲೆà ಕರೀತಿದ್ದುದು. ಹಾಗೇ ಇದ್ದವ ಕೂಡಾ. ನಮ್ಮ ಕಷ್ಟ ಕಾಲಕ್ಕೆಲ್ಲಾ ಆದವ. ಒಡಹುಟ್ಟಿದವರಂತೇ ಇದ್ದವರು. ಒಂದೇ ಫ್ಯಾಕ್ಟರಿಯ ಸಹಕಾರ್ಮಿಕರು.

ನಾಳೆ ನಮ್ಮ ಆ ಮನೆ ನೆಲಸಮವಾಗಲಿದೆ. ಒಂದೆರಡು ದಿನ ಮುಂಚೆ ತಿಳಿಸಿದ್ದರೆ, ನಿಧಾನ ನೋಡಬಹುದಿತ್ತು. ನಾಳೆ ನನ್ನ ಆ ಮನೆಗೆ ಕೊಟ್ಟಕೊನೆ ದಿನ… ಒಮ್ಮೆ ಕಣುªಂಬಿಕೊಳ್ಳಬೇಕು.
.
ಮನಸ್ಸು, ಹೃದಯ, ದೇಹ ಎಲ್ಲವೂ ಭಾರ ಭಾರ. ಪ್ರಯಾಸದಿಂದ ತೂಗುತ್ತಾ ಬಂದೆ.
ಮನೆ ಹಾಳು-ಹಾಳು. ಗೇಟಿಲ್ಲದ ಮಣ್ಣಿನ ಕಾಂಪೌಂಡ್‌… ಮನೆಗೆ ಬಾಗಿಲು ಕೂಡಾ ಇಲ್ಲ. ಕಿಟಕಿಗಳಿದ್ದಲ್ಲೀಗ ಬರೀ ಚೌಕಾಕಾರದ ಕಿಂಡಿಗಳು… ಆಗಲೇ ತಾರಸಿ ಕರಿ-ಹೆಂಚುಗಳನ್ನೆಲ್ಲ ತೆಗೆದಾಗಿದೆ.

ಮನೆಯ ಎಲ್ಲ ಮೂಲೆ ಮೂಲೆಗೂ ಬಿಸಿಲು-ಗಾಳಿ ತಗಲುತ್ತಿದೆ.ಮೊದಲಿಗೆ ಹಾಗಿರಲಿಲ್ಲ. ಕೊಂಚ ನಸುಗತ್ತಲಿನ ಛಾಯೆ ತುಂಬಿರುತ್ತಿತ್ತು.ಮಣ್ಣಿನ ಹಳೆಯ ಮನೆ. ಕೆಡುವುದರ ಅಗತ್ಯವಿಲ್ಲದ, ತಂತಾನೆ ಬೀಳುವಂತಿದ್ದ ಮನೆ. ಆದರೂ ಅದೆಂಥ ಬೆಚ್ಚನೆಯ, ನೆಚ್ಚನೆಯ ನೆಮ್ಮದಿ ಆ ಮನೆಯೊಳಗೆ ಆಗ. ಇಡೀ ಮನೆಯನ್ನೆಲ್ಲಾ ನೋಡಿ ಬಂದೆ.
.
ಹೊರಗೆ ಸದ್ದಾಯ್ತು. ಆಗಲೇ ಅಂಗಳಕ್ಕೆ ಜೆ.ಸಿ.ಬಿ. ಬಂದಾಗಿತ್ತು. ಅದು ತನ್ನ ಹಿಂಗಾಲು, ಸೊಂಡಿಲು ಆಡಿಸುವ ರಿಹರ್ಸಲ್‌ ನಡೆಸಿದಂತಿತ್ತು.

ನೋಡು ನೋಡುತ್ತಿದ್ದಂತೆ ತನ್ನ ಕರ್ಕಶ ಶಬ್ದದೊಂದಿಗೆ, ಒಂದೇ ಏಟಿಗೆಂಬಂತೆ, ಮಣ್ಣಿನ ಕಾಂಪೌಂಡನ್ನು ಕೆಡವಿ ಹಾಕಿತ್ತು. ಇದೀಗ ನಿಧಾನ ಮನೆಯೆಡೆಗೆ ಧಾವಿಸುತ್ತಿತ್ತು. ಎಲ್ಲವನ್ನೂ ಬರೀ ಕಾಣುತ್ತ, ನೋಡುತ್ತ ಮಾತು ಆಡಲಾಗುತ್ತಿಲ್ಲ. ದುಗುಡ ಗಂಟಲು ತುಂಬಿತ್ತು. ಅಂಗಳದ ಮೂಲೆಯೊಂದರಲ್ಲಿ ನಿಂತು ಬಿಟ್ಟಿದ್ದೆ.
ಬೇಡ ಬೇಡವೆಂದರೂ, ಕೊನೆಯುಸಿರೆಳೆಯುತ್ತಿರುವ ಈ ಮನೆ, ನನ್ನ ನೆನಪಿನ ಬತ್ತಿಯನ್ನು ಹೊತ್ತಿಸುತ್ತಲೇ ಇತ್ತು. ನನಗೆ ಬೇಡವಾಗಿತ್ತು ಆ ಎಲ್ಲ ನೆನಪುಗಳು… ಆದರೂ…

Advertisement

ಈಗ ಜೆ.ಸಿ.ಬಿ. ಮುಂಬಾಗಿಲ ಗೋಡೆಯನ್ನು ಕೆಡವಿ ಹಾಕಿತ್ತು. ಅಷ್ಟೆಲ್ಲ ವರ್ಷಗಳ ಸಂಭ್ರಮ, ಸಂತೋಷಗಳ ಮೊಗಸಾಲೆ, ಈಗಷ್ಟೇ ಬೆತ್ತಲೆಯಾಗುತ್ತಿತ್ತು. ಯಾಕೆ ಎಲ್ಲಕ್ಕಿಂತ ಹೆಚ್ಚಾಗಿ ದುಃಖವೇ ಅಮರತ್ವ  ಪಡೆಯುತ್ತೋ ನಾ ಕಾಣೆ. ಇದೇ ಹಜಾರದಲ್ಲೇ ಅಲ್ಲವೆ, ಮಾಧವನ ನಜ್ಜುಗುಜಾjದ ದೇಹವನ್ನು ಮುದ್ದೆ ಮುದ್ದೆಯಾಗಿ ಮಲಗಿಸಿದ್ದು. ಪೋಸ್ಟ್‌ಮಾರ್ಟಂ ನಂತರದ ದೇಹ… ಮೇಲಾಗಿ ಅಪಘಾತದಲ್ಲಿ ನಲುಗಿದ ದೇಹ… “ಇದು ನನ್ನ ಮಾಧವನಾ?’ ಎಂದೇ ಮನ ಹಲಬುತ್ತಿತ್ತು. ಎರಡೂವರೆ ದಶಕಗಳಿಂದ ಪರಿಚಯವಿದ್ದ ದೇಹ. ಇಂದು “ಇದೇನಾ!’ ಎನ್ನುವಷ್ಟು ಬದಲಾದ ಆಕೃತಿ. ಕಣ್ಣು, ಕಿಡ್ನಿ… ಏನೇನೋ ಎಲ್ಲವನ್ನೂ ದಾನ ಮಾಡುವಂತೆ ಹೇಳಿ ಪ್ರಾಣ ಬಿಟ್ಟಿದ್ದನಂತೆ ಮಾಧವ. ಕೊನೆಗೆ ತನ್ನದೇ ಮನೆಗೆ ಬಂದು ತಲುಪಿದ್ದು ಈ ವಿಧವಾದ ಮಾಧವ. ಅಪಘಾತ ಹೇಗಾಯ್ತು… ಎಂತಾಯ್ತು… ಎಲ್ಲವೂ ಗೋಜಲು ಗೋಜಲು. ವರ್ಷಗಳೇ ಕಳೆದರೂ ಗೋಜಲು ಕರಗಿಲ್ಲ. ಮಾಧವ ಫ್ಯಾಕ್ಟರಿಯ ಯೂನಿಯನ್‌ ಲೀಡರು.

ಎಲ್ಲದಕ್ಕೂ “ನ್ಯಾಯ… ನ್ಯಾಯ’ ಎಂದು ಹಲಬುತ್ತಿದ್ದ. ಎಲ್ಲಿದೆ ನ್ಯಾಯ? ಈಚೀಚೆ, ಈ ಹಳೇ ಮನೆಯ ಹಿಂದು-ಮುಂದಿನ ಜಾಗ ಎಲ್ಲ, ಯಾವುದೋ ಬಿಲ್ಡರ್‌ನ ಕಣ್ಣಿಗೆ ನಾಟಿ ಬಿಟ್ಟು , ಪದೇ ಪದೇ ತನ್ನ ಚೇಲಾಗಳನ್ನು ಕಳಿಸಲುತೊಡಗಿದ್ದ. “ಮನೆ ಮಾರುವುದಿದ್ದರೆ ನಮಗೇ ಮಾರಿ, ಒಳ್ಳೇ ಬೆಲೆ ಕೊಡ್ತೇವೆ…’ ಎಂದೆಲ್ಲಾ ಮುಂಬಾಗಿಲಲ್ಲೇ ಪುಕಾರು ಎಬ್ಬಿಸುತ್ತಿದ್ದರು. “ನಾವ್ಯಾಕೆ ಮಾರಬೇಕು?’ ಎಂತಿದ್ದವರು, ಫ್ಯಾಕ್ಟರಿ ನೌಕರಿಯಿಂದ ಸಸ್ಪೆಂಡಾದ ಮೇಲೆ, “ನಾವ್ಯಾಕೆ ಮಾರಬಾರದು?’ ಎಂದು ನಮ್ಮೊಳಗೇ ಕೇಳಿಕೊಳ್ಳಲು ತೊಡಗಿದ್ದೆವು.ಹೇಗೊ ಕೋರ್ಟಿಗೆ ಅಲೆದಾಡಿ ನೌಕರಿಯನ್ನು ಹಿಂಪಡೆದದ್ದಾಯ್ತು. ಚೇಲಾಗಳು ಇನ್ನೂ ಎಡತಾಕುತ್ತಲೇ ಇದ್ದರು: “ಮಾರುವುದಿದ್ದರೆ ನಮಗೇ ಮಾರಿ…’ ಮಾಧವ ಖಡಾಖಂಡಿತ: “ಮನೆ ಹಾಳು ಬಿಧ್ದೋದರೂ ಪರವಾ ಇಲ್ಲ, ನಿಮYಂತೂ ಮಾರೋದಿಲ್ಲ…’ ಇಷ್ಟೆಲ್ಲಾ ಹಿನ್ನೆಲೆಯಲ್ಲಿ ಮಾಧವನಿಗೆ ಅಪಘಾತ, ಅಂಗಾಂಗ ದಾನ, ಸಾವು, ಅಳು, ಛೀತ್ಕಾರ… ಒಂದೇ ಎರಡೇ… ಮಾಧವ ಗುಪ್ಪೆಯಾ ಇದೇ ಪಡಸಾಲೆಯಲ್ಲಿ ಮಲಗಿದ್ದ! ನಿಶ್ಚಲ.

ಈ ಹಜಾರದಲ್ಲಿ ಏನೇನೆಲ್ಲಾ ಸಂಭವಿಸಿದರೂ, ಬರೀ ಪ್ರತ್ಛನ್ನ ನೆನಪಲ್ಲುಳಿದದ್ದು ಇದು ಮಾತ್ರ… ಏಕೋ…!
ಜೆ.ಸಿ.ಬಿ. ಇದೀಗ ಮಲಗುವ ಕೋಣೆಯನ್ನು ಸವರಲು ತನ್ನ ಮುಸುಡಿ ಅತ್ತ ತಿರುವಿತ್ತು.

ಹೌದು, ಇದೇ ನಮ್ಮ ಮಲಗುವ ಕೋಣೆ. ನಸುಗತ್ತಲ ಕೋಣೆ. ಏನೋ ಇಷ್ಟದ ವಾಸನೆ ಕೋಣೆತುಂಬ. ಇಲ್ಲಿ ಕೂಡಾ ಅನೇಕ ಸವಿನೆನಪುಗಳ ಸಾಲ ಸರಣಿಯೇ ಇದೆ. ಆದರೆ ನೆಪಾಗುತ್ತಿದ್ದುದು ಅದೇ ಕೆಟ್ಟ ಘಟನೆ.

ಅಂದು, ಆಚೆಗಲ್ಲಿಯ ತರಕಾರಿ ಗೂಡಂಗಡಿಯಲ್ಲಿ… ನಾನೇನೋ ತರಕಾರಿ ಆಯುತ್ತಿದ್ದೆ. ನನ್ನ ಹತ್ತಿರಕ್ಕೆ ಬಂದು ನಿಂತವ ಸನತ್‌! ಅಪ್ಪಟ ಅನಿರೀಕ್ಷಿತ… ಒಂಥರ ಅಧೈರ್ಯ, ಅದಕ್ಕಿಂತ ಹೆಚ್ಚಾಗಿ ಆತಂಕ. ನನ್ನ ಮದುವೆಗೆ ಮುಂಚೆ, “ಮದುವೆಯಾದರೆ ನಿಮ್ಮನ್ನೇ’ ಎಂದವ… ಮಾತು, ಕತೆ, ತಿಂಡಿ, ಕಾಫಿ, ಸದರ ಎಲ್ಲ ಸಾಂಗವಾಗಿತ್ತು. ಆದರೆ ನಾನು ಸದಾ ಜಾಗೃತಳಿದ್ದೆ. ಸದರ ಎಲ್ಲೆ ಮೀರದಂತೆ ಎಚ್ಚರ ವಹಿಸಿದ್ದೆ. ಗಂಡು ತಾನೇ ಮೆಚ್ಚಿ ಬಂದರೆ, ಬಡವರಾದ ನನ್ನ ತಂದೆಗೆ ಕೊಂಚ ಅನುಕೂಲವಾಗಲಿತ್ತು. ಆದರೆ, ನಾನು ಎಲ್ಲದಕ್ಕೂ “ಸುಲಭ, ಸುಲಲಿತ’ ಅಲ್ಲ ಎಂದರಿತ ಈತ, ಬೇರೆ ಯಾವುದೋ ಹುಡುಗಿಯೊಂದಿಗೆ ನಿರಾಳವಾಗಿ ಲಗ್ನವಾಗಿ, ನನ್ನ ನೆನಪಿನ ಮಡಿಕೆಗಳಲ್ಲಿ ಮರೆಯಾಗಿ ಹೋದವ. ಇಂದು ಎದುರಿಗೆ ನಿಂತಿದ್ದಾನೆ. ಅದೇ ಧೂರ್ತ ನಗೆ. ಅದೇ ನಿಗೂಢ ಮುಖಚರ್ಯ. ಒಂದಿಷ್ಟೂ ಬದಲಾಗಿಲ್ಲ.

“”ಓ…, ಏನಂತೀರಿ… ಏನು… ಇಲ್ಲಿ…?” ಎಂದಿದ್ದೆ ನಿರ್ವಿಕಾರವಾಗಿ.
“”ಡೆಪ್ಯೂಟೇಶನ್‌… ತಾತೂ³ರ್ತಿಕ… ಇಲ್ಲೇ….” ಏನೇನೋ
ಬಡಬಡಿಸಿದ. ಒಂದೂ ತಲೆಯಲ್ಲಿ ಮೂಡಲಿಲ್ಲ. ಅಷ್ಟೊಂದು ಗಲಿಬಿಲಿ…  ದಿšೂnಢತೆ… ನನ್ನೇ ನಾ ಮರೆವಂತೆ. ದಿಕ್ಕು ತಪ್ಪಿದವಳಂತೆ.

“”ನಿಮ್ಮನೆ?” ಎಂದಾತ ಕೇಳಿದ್ದಂತೆ ನೆನಪು… “”ಇದೇ ಬೀದಿಯ ಕೊನೆಗೆ” ಎಂದಿದ್ದನೇನೋ… “”ಮಕ್ಳು?” ಎಂದಿದ್ದ. ಇಲ್ಲ ಎಂದಿದ್ದೆ ಮುಖ ತಗ್ಗಿಸಿ.

ಒಂದು ದಿನ, ಸನತ್‌ನ ಇಡೀ ದೇಹವೇ ಪ್ರತ್ಯಕ್ಷ! ಮನೆಯಲ್ಲಿ ನಾನೊಬ್ಬಳೇ. ಮಾಧವ ಫ್ಯಾಕ್ಟರಿಗೆ.
“”ಏನು ಸನತ್‌?” ಎಂದಿದ್ದೆ. ಒಳಗೆ ಕರೆಯಬೇಕೆನ್ನುವಷ್ಟರಲ್ಲಿ, ಆತ ಅದಾವ ಮಾಯದಲ್ಲಿ, ಹಜಾರದ ಮರದ ಕುರ್ಚಿಯಲ್ಲಿ ಕುಳಿತಾಗಿತ್ತು.

ಅದೂ ಇದೂ ಮಾತಾಗಿತ್ತು. “”ಒಂದಿಷ್ಟು ಚಹಾ ಮಾಡ್ತೇನೆ…” ಎಂದು ಅಡಿಗೆ ಮನೆಗೆ ಹೋಗಿದ್ದೆ. ಇನ್ನೇನು, ಕುದಿಯುತ್ತಿದ್ದ ಡಿಕಾಕ್ಷನ್‌ ಕೆಳಗಿಳಿಸಿ, ಹಾಲು ಬೆರಸಬೇಕು. ಅಷ್ಟರಲ್ಲಿ. ಹಿಂದಿನಿಂದ ಸನತ್‌…! ಬಿಗಿಯಾಗಿ ಅಪ್ಪಿಕೊಂಡಿದ್ದ.

ಇಕ್ಕುಳ ಅಲ್ಲೇ ಬಿಸಾಕಿ, “”ಏಯ್‌! ಇದೇನಿದು!… ನನಗೆ… ಥೂ..! ಛಿ!…” ಎಂದೆಲ್ಲಾ ಕೊಸರಿಕೊಂಡು, ಮಲಗುವ ಕೋಣೆಗೆ ಹೋಗಿ ಬಾಗಿಲು ಹಾಕ್ಕೊಂಡಿದ್ದೆ. ಆತ ಬಾಗಿಲು ಬಡಿದ, “”ನನ್ನ ಮಾತು ಕೇಳಿ ಹರಿಣಿ… ಒಂದೇ ಒಂದು ಸಲ ಸಹಕರಿಸು. ಐ ಲವ್‌ ಯೂ ಡಿಯರ್‌ ಹರಿಣಿ…” ನಾನು ಬಿಕ್ಕಿಸುತ್ತಾ, ಒಳ ಚಿಲಕವನ್ನು ಭದ್ರವಾಗಿ ಬಿಗಿದು, ಮಂಚದ ಮೇಲೆ ಮೃದ್ವಂಗಿಯಂತೆ ಮುದುರಿ ಮುಲುಗುತ್ತಿದ್ದೆ. ಅವಮಾನ, ತಿರಸ್ಕಾರ, ಹೇವರಿಕೆ, ಜುಗುಪ್ಸೆ… ಎಲ್ಲ ಒಮ್ಮೆಲೇ ಎರಗಿದ ಭಾರಕ್ಕೆ ಬಸವಳಿದಿದ್ದೆ. ಏನೋ ಮೈಲಿಗೆ ಭಾವ ನನ್ನನ್ನೇ ಆರೋಪಿಸುತ್ತಿತ್ತು.

ಆತ ಕೋಣೆಯ ಬಾಗಿಲನ್ನು ದಬದಬ ಅಂತ ಬಡಿದು ಏನೇನೋ ಬೇಡಿಕೊಳ್ಳುತ್ತಾ, ಏನೇನೋ ಬೆದರಿಸುತ್ತ ಕೊನೆಗೆ ಒಂದಿಷ್ಟು ಹೊತ್ತು ಕಾದಿದ್ದು, ಯಾವಾಗಲೋ ಹೊರಟುಹೋಗಿದ್ದ.

ನಾನು ಅದೆಷ್ಟೋ ಹೊತ್ತು, ಬೆಂಬತ್ತಿದ ಬೇಡನಿಂದ ಬೆದರಿದ ಹರಿಣದಂತೆ, ಒಳಗೇ ಅಡಗಿದ್ದು, ಕೊಂಚವೆ ಕೋಣೆಯ ಬಾಗಿಲು ತೆರೆದು, ಅವನು ಹೊರಟುಹೋದದ್ದನ್ನು ದೃಢಪಡಿಸಿಕೊಂಡ ಮೇಲೆ, ದಿಗ್ಗನೆ ಹೊರಗೊØàಗಿ ಮುಂಬಾಗಿಲ ಹಾಕಿಕೊಂಡಿದ್ದೆ. ಮೈ-ಮನ ಇನ್ನೂ ಗಲ-ಗಲವೆಂದು ಅಲುಗುತ್ತಲೇ ಇತ್ತು. ಎದೆ ಹೊಡೆದುಕೊಳ್ಳುತ್ತಿತ್ತು.ಬಚ್ಚಲು ಮನೆಗೆ ನುಗ್ಗಿ ಉಟ್ಟ ಸೀರೆಯಲ್ಲೇ ಎರಡು ಬಕೆಟ್‌ ತಲೆ ಮೇಲೆ ಹುಯ್ಯಿದುಕೊಂಡಿದ್ದೆ. ಮನದ ಮೂಲೆಯ ನಸು ಕೊಳೆಯೂ ತೊಳೆದು ಹೋಗಲಿ ಎಂಬಂತೆ.

ಸಂಜೆ ಮಾಧವ ಮರಳಿದಾಗ, ಇದಾವುದನ್ನೂ ಉಸುರಬಾರದು ಎಂದೇ ನಿಶ್ಚೆ„ಸಿದೆ. ಹಾಗೇ ಮಾಡಿದೆ ಕೂಡಾ.
ಆಮೇಲೆ ಸನತ್‌ಎಲ್ಲೂ ಕಾಣಿಸಿದ್ದೇ ಇಲ್ಲ. ಆದರೂ ಮುಂಬಾಗಿಲು ಸದಾ ಭದ್ರವಾಗಿ ಮುಚ್ಚಿರುವಂತೆ ನೋಡಿಕೊಂಡಿದ್ದೆ.
ನಾನು ನನ್ನ ಪಾಲಿಗೆ ಬಂದಿದ್ದ ಅಂದಿನ ಮನೋದೌರ್ಬಲ್ಯದ ದೇಹ ಸಹಜ ಮಹಾಸಮರವನ್ನು ಗೆದ್ದು ಹಾಕಿದ್ದೆ!
ಅಂಥ ಹೆಮ್ಮೆಗೆ ಕಾರಣವಾದ ಈ ಮಲಗುವ ಕೋಣೆ ಇದೀಗ ತನ್ನ ಅಸ್ತಿತ್ವವನ್ನೇ ನೀಗಿಕೊಳ್ಳುತ್ತಿದೆ.

ಇದೀಗ, ಜೆ.ಸಿ.ಬಿ. ಅಡಿಗೆ ಮನೆಗೆ ಉರುಳುತ್ತಾ ಬಂತು. ಮೊದಮೊದಲು ಮೂಸಿದಂತೆ ಮಾಡಿದ ಡೈನೋಸಾರ್‌, ಆಮೇಲೆ ಒಂದಿಷ್ಟು ಬದಿಗೆ ತಾಗಿದ್ದೇ ನೆಪ, ನನ್ನ ಅಡಿಗೆ ಮನೆ ಬಟಾಬಯಲಾಗಿ ನಿಂತುಬಿಟ್ಟಿತು.

ಇದು ನನ್ನ ಪಾಲಿಗೆ ಕೇವಲ ಅಡಿಗೆ ಮನೆ ಅಲ್ಲ. ನಮ್ಮ ದಾಂಪತ್ಯದ ರುಚಿಯನ್ನೇ ಪರಿಶೀಲಿಸಿದ ಪರೀûಾ ಸ್ಥಳ!
ನಾನಷ್ಟು ರೂಪವಂತೆ ಅಲ್ಲದಿದ್ದರೂ, ಕುರೂಪಿಯಂತೂ ಅಲ್ಲವೇ ಅಲ್ಲ.

ಮಾಧವ ನನ್ನ ಮೆಚ್ಚಿಕೊಂಡೇ ತಾಳಿ ಕಟ್ಟಿದ್ದು. ಸರಳ ಮನುಷ್ಯ, ಸರಳ ಮನಸು… ಹೀಗಾಗಿ ನನ್ನ ಹೆತ್ತವರಿಗೆ ಮದುವೆಯೊಂದು ಭಾರವಾಗಲೇ ಇಲ್ಲ. ಆದರೆ, ಮಾಧವ ಮತ್ತೂಬ್ಬರ ನೋವಿಗೆ ಮಿಡಿವ ಮನುಷ್ಯ. ಇವನ ಒಳ್ಳೆಯತನ, ಅನುಕಂಪ ಸದಾ ದುರುಪಯೋಗವಾದದ್ದೇ ಹೆಚ್ಚು. ಒಮ್ಮೊಮ್ಮೆ ನನಗೇ ಚಿಂತೆಯಾಗುತ್ತಿತ್ತು. ಇವನ ಒಳ್ಳೆಯತನ, ಇವನಿಗೇ ಉರುಳಾಗದಿರಲಿ ಎಂದು. ಕೊನೆಗೂ ಆದದ್ದೇ ಅದು.
ಈ ಅಡಿಗೆ ಕೋಣೆಯೊಂದೇ ನನಗೆ ನಿರಾಳಭಾವ, ಕೃತಕೃತ್ಯತೆಯ ಅನುಭವ ನೀಡಿದ್ದು.

ಅದೊಂದು ದಿನ. ಮಾಧವನಿಗೆ ರಜೆ. ನಸುಗತ್ತಲೆಯ ಅಡಿಗೆ ಮನೆಯಲ್ಲಿ ಚಹಾ ಕುದಿಯುತ್ತಿತ್ತು. ಇನ್ನೇನು ಕೆಳಗಿರಿಸಿ, ಹಾಲು ಬೆರೆಸಬೇಕು, ಮಾಧವ ಹಿಂದಿನಿಂದ ಬಂದವನೇ ಭುಜಕ್ಕೆ ಮುತ್ತನಿಕ್ಕಿದ್ದ. ನನಗೋ ಅಪರೂಪವಲ್ಲದಿದ್ದರೂ, ನಿರೀಕ್ಷಿತವಾಗಿರಲಿಲ್ಲ. “”ತುಂಬ ಸುಂದರ ಜಿಂಕೆ ಇದು. ಮಾಯಾ ಜಿಂಕೆ ನನ್ನದು…” ಎನ್ನುತ್ತಾ, ಅಪ್ಪಿ$ಹಿಡಿದಿದ್ದ. ಚಹಾ ಆರುತ್ತಿತ್ತು; ದೇಹದ ಬಿಸಿ ಏರುತ್ತಿತ್ತು.

“”ನಾನೇನು ಅಷ್ಟು ಒಳ್ಳೆಯವಳಲ್ಲ. ನೀವು ಭಾವಿಸಿದಷ್ಟು ಮುಗ್ಧಳೂ ಅಲ್ಲ… ಏನೋ ಹೇಳಬೇಕಿದೆ. ಹೇಳಲಾಗ್ತಿಲ್ಲ. ಹೇಳಲಾಗಿಲ್ಲ. ಒಳಗೇ ಕೊರಗ್ತಿದೀನಿ…” ಮ್ಲಾನಳಾಗಿ ಅವನ ಕೊರಳಿಗೆ ಮುಖ ಒರಗಿಸಿ ಹೇಳಿದ್ದೆ. ಕಣ್ಣಲ್ಲಿ ಆಯಾಚಿತ ನೀರು… ಬಿಕ್ಕು.

“”ಅದೇ ಸನತ್‌ನ ವಿಷಯ ತಾನೇ?” ಎಂದಿದ್ದ! ನನಗೆ ಗರಗರ ತಿರುಗಿಸಿ ಕುಕ್ಕಿದಂತಹ ಅನುಭವ.
ನನ್ನ ಕಿವಿಯನ್ನೇ ನಂಬದಾಗಿದ್ದೆ. ಮಾಧವನ ಬಾಯಲ್ಲಿ ಸನತ್‌! ಏನಾಗಬಾರದಿತ್ತು ಅದೇ ಆಗಿತ್ತು! ಬಾಯಿಪಸೆ ಆರಿತ್ತು.
ನನ್ನ ಕಾಲಕೆಳಗೇ ಆಳದಲ್ಲೊಂದು ಕೊಳ್ಳದಲ್ಲಿ ಕುಸಿಯುತ್ತಿದ್ದೆ. ಅಡಿಗೆ ಕೋಣೆಯ ಎಲ್ಲ ಪಾತ್ರೆ-ಪಡಗಗಳು, ನನ್ನ ಕಣ್ಣಿಗೆ ಗೀರಿಕೊಂಡೇ ತಿರುಗಿದಂತೆ.

“”ಅದೇ ಸನತ್‌ ಬಗ್ಗೆ ಅಲ್ವಾ… ನೀನ್‌ ಹೇಳ್ಬೇಕಾಗಿರೋದು?” ಅಪ್ಪುಗೆ ಸಡಿಲಿಸಿ ಕೇಳಿದ.
ಮಾಧವನ್ನ ಬರಿದೇ ನೋಡಿದೆ.
ಆತನೇ ಮುಂದಲೆ ಸವರಿ, “”ಆ ಸ್ಕೌಂಡ್ರಲ್‌, ನನ್ನನ್ನೇ ಹುಡುಕಿ ಬಂದಿದ್ದ. ನಾನು ಹರಿಣಿ ಹಳೇ ಪ್ರೇಮಿಗಳು… ಹಾಗೆ… ಹೀಗೆ… ಏನೆಲ್ಲಾ ಊಳಿಟ್ಟು ಮನಸ್ಸು ಕೆಡಿಸಲು ನೋಡಿದ. ಅಷ್ಟೇ ಏಕೆ… ಮಗುವಿನ ಆಸೆಗಾಗಿ ಬೇಡ ಬಿಡು. ಅದೆಲ್ಲಾ ಒಟ್ಟಾರೆ ಅವನೊಬ್ಬ ಪಕ್ಕಾ ಕ್ರಿಮಿನಲ್‌…” ಹೇಳುತ್ತಲೇ ಇದ್ದ.
ಬರಿದೇ ನೋಡಿದೆ.

“”ಹಾnಂ… ನಾನು ಸರೀ ಗೊಟಕಾಯಿಸಿದೆ ನೋಡು…” ತಿಕ ಸುಟ್ಟ ಬೆಕ್ಕಿನಂತೆ ಅಂದು ನುಸುಳಿಕೊಂಡವ ಇನ್ನೂ ಪತ್ತೆ ಇಲ್ಲ. ಈ ಮಾತಿಗೆ ಎರಡೂ¾ರು ವರ್ಷ ಆಗಿರಬೇಕು.
ನಾನು ಬರಿದೇ ನೋಡುತ್ತಿದ್ದೆ.

“”ಇವೆಲ್ಲಾ ಇದ್ದದ್ದೇ ಜಿಂಕೆ… ಸೌಂದರ್ಯ, ಚೆಲುವಿಕೆ ಇರುವಲ್ಲಿ ಅನುಮಾನ, ಸಂಶಯ, ಚಾಡಿ, ಆಸೆಬುರುಕುತನ, ನಿಲುಕದ ಹಣ್ಣಿಗೆ ಹುಳಿ ಎನ್ನುವ ಮನೋಭಾವ, ತನಗೆ ಸಿಗದ ಹಾಲನ್ನು ಉರುಳಿಸಿ ಹೋಗುವ ದುರುಳತನ… ಇವೆಲ್ಲ ತುಂಬ ಸಾಮಾನ್ಯ. ಮನಸ್ಸಿಗೆ ತಂದೊRàಬೇಡ. ನನಗೆ ನಿನ್ಮೆàಲೆ ನಂಬಿಕೆ ಅಗೋ ನೋಡು ಆ ಬಿಲ್ಡಿಂಗ್‌ನಷ್ಟಿದೆ…” ಎಂದು ನಾಲ್ಕಂತಸ್ತಿನ ಅಪಾರ್ಟಮೆಂಟನ್ನು ತೋರಿಸಿ ನಕ್ಕಿದ್ದ.

ನನಗೆ ನಾಲ್ಕಂತಸ್ತಿನಿಂದಲೇ ಬಿದ್ದ ಅನುಭವ. ಆದರೆ ಪುಳಕ, ಏನೋ ನಿರಾಳ… ಹಗುರಾಗಿ ನೀಲ ನಭದಲ್ಲಿ ತೇಲಿದಂತೆ.

ಡಿಕಾಕ್ಷನ್‌ ಆರಿ ತಣ್ಣಗಾಗಿತ್ತು. ಮತ್ತೆ ಬಿಸಿಗೆ ಇಟ್ಟೆ. ಕುದಿಯುತ್ತಿದ್ದ ಕಪ್ಪನೆ ದ್ರವಕ್ಕೆ ಹಾಲು ಸೇರಿಸಿದೆ. ಹದವಾದ ಕೇಸರಿ ಚಹಾದ ಪರಿಮಳ ಮನೆ, ಮನ ತುಂಬಿತು.

ಇದೆಲ್ಲಾ ನಡೆದದ್ದು ಇದೇ ಅಡಿಗೆಕೋಣೆಯಲ್ಲಿ. ಇದೀಗದು ಬರೀ ಒಂದೆರಡು ಮಣ್ಣು-ಗುಪ್ಪೆ.
ಓಹ್‌! ಹಳದಿ ರಕ್ಕಸ ಎಲ್ಲವನ್ನೂ ತರಿದು, ಸವರಿ ಅದರದೇ ಮಣ್ಣರಾಶಿಯ ಮೇಲೆ ತಾನೇ ನಡೆದು ಬಂತು. ದೊಡ್ಡ ಸಾಹಸಗೈದವರಂತೆ ಹೇಷಾರವಗೈಯುತ್ತಿತ್ತು.

ಇದೀಗ ಎಲ್ಲ ಸಪಾಟಾಗಿತ್ತು; ಸಮತಲವಾಗಿತ್ತು. ಹೆಂಟೆ-ಗುಡ್ಡೆ ಅಲ್ಲಲ್ಲಿ.
ಉಳಿದದ್ದು ಬರೀ ತುಳಸೀಕಟ್ಟೆ.
ಇದೀಗಷ್ಟೇ ಹುಟ್ಟಿದ ಹುಲ್ಲೆಮರಿಯ ಮೇಲೆ ಸಿಂಹವೊಂದು ಎರಗುವಂತೆ, ತುಳಸಿಕಟ್ಟೆ ಕಡೆ ಗೋಣು ತಿರುಗಿಸಿ ಸಜಾjಗಿ ನಿಂತಿತು ದೈತ್ಯ.

ಆವಾಗಲೇ ನಾನು ವಾಸ್ತವಕ್ಕಿಳಿದದ್ದು!
ಪ್ರತಿದಿನದ ನಸುಕು ಹಾಗೂ ಸಂಜೆ ಮಸುಕಿಗೆ ಮೊದಲೇ ತುಳಸಿಗೆ ನೀರುಣಿಸುತ್ತಿದ್ದೆ. ಅರಿಶಿಣ ಕುಂಕುಮ ಏರಿಸುತ್ತಿದ್ದೆ. ಆಗಲೆ ತಾಳಿಗೂ… ತಪ್ಪಿದ್ದೇ ಇಲ್ಲ.

ಈಗಲೂ ಇದು ಹುಲುಸು-ಹುಲುಸು, ದಟ್ಟ ಹಸಿರು. ಅಡ್ಡಾದಿಡ್ಡಿ ಬೆಳೆದು ನಿಂತಿತ್ತು.
“ಜೆ.ಸಿ.ಬಿ.’ಗೆ ಕೈ ಮಾಡಿದೆ. ನಿಂತಿತು.

ತುಳಸೀಕಟ್ಟೆಗೆ ಸಮೀಪಿಸಿ, ಕೊಂಚ ಮಣ್ಣು ಕೆರೆದು, ಒಂದೇ ಒಂದು ಪುಟ್ಟ ಎಳೆಯ ತುಳಸಿ ಸಸಿಯನ್ನು, ಅದರ ಬೇರುಸಹಿತ ನಯವಾಗಿ ಬಿಡಿಸಿ, ಕೋಳಿಮರಿಯಂತೆ ನಾಜೂಕಾಗಿ ಎತ್ತಿ, ಅಲ್ಲೇ ಬಿದ್ದಿದ್ದ ಪ್ಲಾಸ್ಟಿಕ್‌ ಹಾಳೆಯಲ್ಲಿ ಸಡಿಲಾಗಿ ಸುತ್ತಿಕೊಂಡು, ಜಾಗ್ರತೆಯಿಂದ ವ್ಯಾನಿಟಿ ಬ್ಯಾಗಿನಲ್ಲಿಟ್ಟುಕೊಂಡು, ಸಿಟಿಬಸ್‌ ಸ್ಟಾಪ್‌ ಕಡೆಗೆ ಹೆಜ್ಜೆ ಹಾಕಿದೆ.
ತಿರುವಿನಲ್ಲಿ ಒಮ್ಮೆ ಹಿಂತಿರುಗಿ ನೋಡಿದೆ. ಮನೆಯಿದ್ದಲ್ಲೀಗ ಬಯಲು; ಬಟಾ-ಬಯಲು! ಕಣುªಂಬಿ ಬಂತು.
ಮಾಧವ ಬಯಲುದ್ದಕ್ಕೂ, ಬಯಲೆತ್ತರಕ್ಕೂ ಎದ್ದು ನಿಂತಂತೆ ಭಾಸವಾಯ್ತು.
ಅರಿವಾಗದೇ ಕಣ್ಣೀರು ಮೆಲಕು ತೋಯಿಸಿತು. ದುಃಖ ಗಂಟಲೊತ್ತುತ್ತಿತ್ತು.
ವ್ಯಾನಿಟಿ ಬ್ಯಾಗ್‌ನಿಂದ ಕರವಸ್ತ್ರಕ್ಕಾಗಿ ತಡಕಾಡಿ, ತೆಗೆದು ಕಣ್ಣೀರೊರೆಸಿಕೊಂಡೆ.

ಓ! ತುಳಸಿಯ ನವಿರು-ಕಂಪು! ಬ್ಯಾಗಿನೆಡೆಗೆ ನೋಡಿದೆ: ಬ್ಯಾಗ್‌ ತುಂಬ ಒಂಚೂರೂ ನಲುಗದ ತುಳಸಿಯ ಅಲೌಕಿಕ ನವಿರು-ಗಂಧ! ಒಂದೇ ಕಣ ಚಿಗುರು ಎಲೆ ಕಿರು ಬೆರಳು ತಾಗಿತ್ತು. ಕಚ್ಚಿ ನೋಡಿದೆ. ಖಾರ… ಖಾರ. ಕಣ್ಣಲ್ಲಿನ ನೀರು. ಕಹಿನೆನಪಿಗೋ, ತುಳಸಿ ಘಾಟಕ್ಕೋ ತಿಳಿಯದಾದೆ.

ಕಾಣದ ದುರಾದೃಷ್ಟವೆಂಬಂತೆ, ನಾವೆಷ್ಟೇ ಒಳ್ಳೆಯದಾಗಿ ಬದುಕಿದರೂ, ಕೆಟ್ಟದ್ದೇ ಒದಗಬಹುದು ಎಂಬುದಕ್ಕೆ ಈ ಮೊಗಸಾಲೆಯ ಘಟನಾವಳಿಗಳು, ತುಳಸಿಯ ûಾರತ್ವವನ್ನು ನೆನಪಿಸಿದರೆ, ಕೆಲವೊಂದನ್ನು ನಾವೇ ಕಷ್ಟಪಟ್ಟು, ಸಂಯಮದಿಂದ ಸಾಧಿಸಿಕೊಳ್ಳಬೇಕು ಎಂಬುದಕ್ಕೆ ಈ ಮಲಗುವ ಕೋಣೆಯ ಕಟು ಅನುಭವ, ಅದೇ ತುಳಸಿಯ ಔಷಧೀಯ ಶಮನಕಾರತ್ವವನ್ನು ನೆನಪಿಸಿದರೆ, ಬದುಕಿನಲ್ಲಿ ನಾವು ಆಶಿಸಲೇ ಆಗದ, ನಿರೀಕ್ಷಿಸಿರದ ಕೆಲವು ಆನಂದ, ಸುಖ, ನಿರಾಳತೆ ತಂತಾವೆ ಲಭ್ಯವಾಗುವುದಕ್ಕೆ, ಆ ನನ್ನ ಅಡುಗೆ ಕೋಣೆಯ ವಿದ್ಯಮಾನವನ್ನು ತುಳಸಿಯ ಅವರ್ಣನೀಯ ನರುಗಂಪು ನೆನಪಿಸುತ್ತದೆಯೇನೋ… ಬದುಕಿನ ಪಕ್ವತೆಗೆ ಎಲ್ಲವೂ ಸಹಜವೇನೋ ಎಂದು ಸಮಾಧಾನಗೊಳ್ಳಲು ಯತ್ನಿಸುತ್ತಿರುವಂತೆಯೇ.
ಸಿಟಿಬಸ್ಸು ತಿರುವು ತಿರುಗಿ ನನ್ನ ಹತ್ತಿರವೇ ಬಂದು ನಿಂತಿತು.

– ರಾಮಚಂದ್ರ ಎಸ್‌. ಕುಲಕರ್ಣಿ

Advertisement

Udayavani is now on Telegram. Click here to join our channel and stay updated with the latest news.

Next