Advertisement

ಸೂಕ್ತ ಚಿಕಿತ್ಸೆಯಿಂದ ಕ್ಷಯರೋಗ ನಿವಾರಣೆ

04:55 PM Mar 25, 2022 | Team Udayavani |

ಹಾವೇರಿ: ಕ್ಷಯರೋಗಿಗಳು ಸಕಾಲದಲ್ಲಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದರೆ ರೋಗ ಗುಣಪಡಿಸಲು ಸಾಧ್ಯ ಎಂದು ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.

Advertisement

ನಗರದ ಡಾ|ಬಾಬಾಸಾಹೇಬ್‌ ಅಂಬೇಡ್ಕರ್‌ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ವಿಭಾಗ ಹಾಗೂ ವಾರ್ತಾ ಮತ್ತು ಪ್ರಸಾರ ಇಲಾಖೆ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಎದೆ ನೋವು, ತೂಕ ಕಡಿಮೆಯಾಗುವುದು, ಕಫದಲ್ಲಿ ರಕ್ತ ಬೀಳುವುದು, ಹಲವಾರು ದಿನಗಳಿಂದ ಕೆಮ್ಮು, ಜ್ವರದ ಬಾಧೆಯಿಂದ ಬಳಲುತ್ತಿರುವ ವ್ಯಕ್ತಿಗಳು ಸಮೀಪದ ಆಸ್ಪತ್ರೆಗೆ ತೆರಳಿ ನಿಯಮಿತ ಅವಧಿಯವರೆಗೆ ಸೂಕ್ತ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಮುಖರಾಗಲು ಸಾಧ್ಯ ಎಂದು ಹೇಳಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|ಪಿ.ಆರ್‌.ಹಾವನೂರ ಮಾತನಾಡಿ, ಕ್ಷಯರೋಗ ಮಾನವ ಮತ್ತು ಹಲವು ಪ್ರಾಣಿಗಳಿಗೆ ಬರುವ ಮಾರಕ ರೋಗ. ಇದು ಮೈಕೋ ಬ್ಯಾಕ್ಟೀರಿಯಂ ಜಾತಿಯ ಬ್ಯಾಕ್ಟೀರಿಯಾಗಳಿಂದ ಬರುತ್ತದೆ. ಪ್ರಮುಖವಾಗಿ ಶ್ವಾಸಕೋಶಗಳಿಗೆ ಹಾನಿ ಮಾಡುವ ಈ ರೋಗ ಮುಂದೆ ದೇಹದ ಹಲವು ಅಂಗಾಂಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಎರಡು ವಾರಗಳ ವರೆಗೆ ಕೆಮ್ಮು, ನಿರಂತರ ಜ್ವರ, ಅಸಹಜ ಎನಿಸುವಷ್ಟು ತೂಕ ಕಡಿಮೆಯಾಗುವುದು ಮತ್ತು ರಾತ್ರಿ ವೇಳೆ ಬೆವರುತ್ತಿದ್ದರೆ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಷಯರೋಗ ತಪಾಸಣೆ ಮಾಡಿಸಿಕೊಳ್ಳಬೇಕೆಂದರು.

Advertisement

ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ|ನಿಲೇಶ್‌ ಎಂ.ಎನ್‌. ಅವರು ಪ್ರಸ್ತಾವಿಕ ಮಾತನಾಡಿ, 1882ರಲ್ಲಿ ಡಾ|ರಾಬರ್ಟ್‌ ಕಾಕ್‌ ಎಂಬ ವಿಜ್ಞಾನಿ ಕ್ಷಯರೋಗ ಉಂಟು ಮಾಡುವ ಮೈಕೋ ಬ್ಯಾಕ್ಟೀರಿಯಂ ಟ್ಯೂಬರ್‌ ಕ್ಯುಲೋಸಿಸ್‌ ಕಂಡು ಹಿಡಿದರು.

ಅವರ ಸ್ಮರಣಾರ್ಥ ವಿಶ್ವ ಆರೋಗ್ಯ ಸಂಸ್ಥೆ 1982ರಿಂದ ಪ್ರತಿ ವರ್ಷ ಒಂದೊಂದು ಘೋಷವಾಕ್ಯದೊಂದಿಗೆ ವಿಶ್ವ ಕ್ಷಯರೋಗ ದಿನ ಆಯೋಜಿಸುತ್ತಿದೆ. ಈ ವರ್ಷ “ಕ್ಷಯರೋಗ ನಿರ್ಮೂಲನೆಗೆ ಸಂಪನ್ಮೂಲಗಳನ್ನು ಬಳಸಿ-ಜೀವ ಉಳಿಸಿ’ ಎಂಬ ಘೋಷವಾಕ್ಯ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಡಾ|ಸಂಪತ್‌ ಸಿಂಗ್‌ ರಂಗವಾಲೆ ಅವರು “ಕ್ಷಯರೋಗ ನಿರ್ಮೂಲನೆಗೆ ಸಂಪನ್ಮೂಲಗಳ ಬಳಕೆ’ ವಿಷಯ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|ಎಚ್‌.ಎಸ್‌. ರಾಘವೇಂದ್ರಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಜಿಲ್ಲೆಯಲ್ಲಿ ಕ್ಷಯರೋಗದ ಬಗ್ಗೆ ಅತ್ಯುತ್ತಮ ಸೇವೆ ಸಲ್ಲಿಸಿದ ಆರೋಗ್ಯ ಸಿಬ್ಬಂದಿ, ಕಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಮತ್ತು ಕ್ಷಯರೋಗ ಕುರಿತು ಏರ್ಪಡಿಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ|ಜಯಾನಂದ, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಜಗದೀಶ ಪಾಟೀಲ, ಡಾ|ಚನ್ನಬಸಯ್ಯ ವಿರಕ್ತಮಠ, ಹಾವೇರಿ ತಾಲೂಕು ವೈದ್ಯಾ ಧಿಕಾರಿ ಡಾ|ಪ್ರಭಾಕರ ಕುಂದೂರು, ರಾಣಿಬೆನ್ನೂರು ತಾಲೂಕು ವೈದ್ಯಾಧಿಕಾರಿ ಡಾ|ಸಂತೋಷಕುಮಾರ ಜಿ., ಬ್ಯಾಡಗಿ ತಾಲೂಕು ವೈದ್ಯಾ ಧಿಕಾರಿ ಡಾ|ಸುನಿಲ್‌, ಶಿಗ್ಗಾವಿ ತಾಲೂಕು ವೈದ್ಯಾ ಧಿಕಾರಿ ಡಾ|ಮನೋಜ್‌ ನಾಯ್ಕ ಪಾಲ್ಗೊಂಡಿದ್ದರು.

 

ಜಗತ್ತಿನಲ್ಲಿ ಅತೀ ಹೆಚ್ಚು ಕ್ಷಯರೋಗ ಪ್ರಕರಣಗಳ ಪೈಕಿ ಭಾರತದಲ್ಲಿ ಪ್ರತಿಶತ 27ಕ್ಕಿಂತ ಹೆಚ್ಚು ಪ್ರಕರಣಗಳು ಕಂಡು ಬರುತ್ತಿವೆ ಮತ್ತು ಪ್ರತಿಶತ 35ಕ್ಕಿಂತ ಹೆಚ್ಚು ಮರಣಗಳು ನಮ್ಮ ದೇಶದಲ್ಲೇ ಸಂಭವಿಸುತ್ತಿವೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಕ್ಷಯದಿಂದ ಉಂಟಾಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು 2025ಕ್ಕೆ ಕ್ಷಯರೋಗ ನಿರ್ಮೂಲನೆ ಮಾಡುವ ಗುರಿ ನಿಗದಿಪಡಿಸಿದೆ.

ಡಾ|ನಿಲೇಶ್‌ ಎಂ.ಎನ್‌., ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next