ಕಲಬುರಗಿ: ಕ್ಷಯ ಚಿಕಿತ್ಸೆಯಿಲ್ಲದ ಕಾಯಿಲೆ ಏನಲ್ಲ. ಇದಕ್ಕೆ ಸೂಕ್ತ ಕಾಲದಲ್ಲಿ ಉತ್ತಮ ಚಿಕಿತ್ಸೆ ನೀಡಿದರೆ 6 ತಿಂಗಳಲ್ಲಿ ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಮಾಧವರಾವ ಕೆ. ಪಾಟೀಲ ಹೇಳಿದರು.
ನಗರದ ತಾಜ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ಷಯ ರೋಗ ಒಂದು ಸಾಂಕ್ರಾಮಿಕ ರೋಗವಾಗಿದೆ. ಅನಾದಿ ಕಾಲದಿಂದಲೂ ಮನುಷ್ಯನನ್ನು ಬೆಂಬಿಡದೇ ಕಾಡುತ್ತಿದೆ. ಮೈಕೋಬ್ಯಾಕ್ಟಿರಿಂ ಟ್ಯುಬರ್‌ಕ್ಯುಲೋಸಿಸ್ ಎಂಬ ಸೂಕ್ಷ್ಮಾಣು ಜೀವಿಯಿಂದ ಹರಡುತ್ತದೆ. ಈ ರೋಗ ರೋಗಿ ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ತುಂತುರುಗಳಿಂದ ಗಾಳಿ ಮೂಲಕ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶ ಸೇರಿ ಸೊಂಕು ಹರಡುತ್ತದೆ ಎಂದು ಹೇಳಿದರು.
ಇದಕ್ಕಾಗಿ ಕ್ಷಯ ರೋಗಿಗಳು ಕೆಮ್ಮುವಾಗ ಹಾಗೂ ಸೀನುವಾಗ ಬಾಯಿ ಮತ್ತು ಮೂಗಿಗೆ ಕರವಸ್ತ್ರ ಇಟ್ಟುಕೊಳ್ಳಬೇಕು. ರೋಗಿಯು ಕಫವನ್ನು ಎಲ್ಲೆಂದರಲ್ಲಿ ಉಗುಳಬಾರದು. ಕಫವನ್ನು ಡಬ್ಬಿಯಲ್ಲಿ ಶೇಖರಿಸಿ ಗಟ್ಟಿಯಾಗಿ ಮುಚ್ಚಿ ಸುಟ್ಟು ಹಾಕಬೇಕು ಅಥವಾ ಭೂಮಿಯಲ್ಲಿ ಮುಚ್ಚಬೇಕು ಎಂದು ಹೇಳಿದರು.
ಸಕ್ರಿಯ ಕ್ಷಯರೋಗ ಪ್ರಕರಣ ಕಂಡು ಹಿಡಿಯುವುದು ಹಾಗೂ ಕ್ಷಯರೋಗದ ಸೇವೆಗಳು ಮನೆ ಬಾಗಿಲವರೆಗಿವೆ. ಸಾರ್ವಜನಿಕರು ಹಾಗೂ ಬಡವರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಮಹಾನಗರ ಪಾಲಿಕೆ ಉಪ ಮಹಾಪೌರ ಪುತಲಿಬೇಗಂ ಕಾಯಕ್ರಮ ಉದ್ಘಾಟಿಸಿದರು. ಅಶ್ರಫ್‌ಮಿಯಾ, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ| ಶಿವಶರಣಪ್ಪ ಪೂಜಾರಿ, ತಾಲೂಕು ಆರೋಗ್ಯಾಧಿಕಾರಿ ಡಾ| ರಾಜಕುಮಾರ ಕುಲಕರ್ಣಿ, ಡಿಎಲ್‌ಒ ಡಾ| ಶರಣಬಸಪ್ಪ, ತಾಜನಗರ ಎಂ.ಒ. ಡಾ| ವೇಣುಗೋಪಾಲ, ಡಾ| ಮಕುºಲ್ ಪಟೇಲ್, ಟಿಐಐಎಸ್ ಕಾರ್ಯಕ್ರಮಾಧಿಕಾರಿ ಅಬ್ದುಲ್ ಶಫಿ ಅಹ್ಮದ್, ಡಿಪಿಸಿ ಅಬ್ದುಲ್ ಜಬ್ಟಾರ್, ಸುರೇಶ ದೊಡ್ಮನಿ, ಶೌಕತ್ ಅಲಿ, ಗುಂಡಪ್ಪ ದೊಡ್ಮನಿ, ಶಶಿಧರ, ಡಾ| ಶರಣಬಸಪ್ಪ ಸಜ್ಜನಶೆಟ್ಟಿ, ಮಂಜುನಾಥ ಕಂಬಾಳಿಮಠ ಇದ್ದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ರಾಜೇಂದ್ರ ಭಾಲ್ಕೆ ಸ್ವಾಗತಿಸಿದರು. ಸುರೇಶ ದೊಡ್ಮನಿ ನಿರೂಪಿಸಿದರು. ಡಾ| ವೇಣುಗೋಪಾಲ ವಂದಿಸಿದರು. ಬೀದಿ ನಾಟಕಕ್ಕೂ ಚಾಲನೆ ನೀಡಲಾಯಿತು.