ರಾಯಚೂರು: ಕ್ಷಯ ಸಾಂಕ್ರಾಮಿಕ ರೋಗವಾಗಿದ್ದು, ಜನ ಭಯಪಡುವ ಅಗತ್ಯವಿಲ್ಲ. ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆದಲ್ಲಿ ಈ ರೋಗವನ್ನು ನಿವಾರಣೆ ಮಾಡಬಹುದು ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ| ಸುರೇಂದ್ರಬಾಬು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ವಿಭಾಗದಿಂದ ಪತ್ರಕರ್ತರಿಗೆ ಹಮ್ಮಿಕೊಂಡಿದ್ದ ಟಿಬಿ ಸೋಲಿಸಿ, ಕರ್ನಾಟಕ ಗೆಲ್ಲಿಸಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರ ಟಿಬಿ ಹಾರೇಗಾ ದೇಶ್ ಜೀತೆಗಾ ಎಂಬ ಘೋಷವಾಕ್ಯದಂತೆ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. 2025ರ ವೇಳೆಗೆ ಕ್ಷಯರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸರ್ಕಾರ ಮುಂದಾಗಿದೆ ಎಂದರು.
ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನೆಗಾಗಿ 46 ಜನ ಕೆಲಸ ಮಾಡುತ್ತಿದ್ದಾರೆ. 2017ರಿಂದ 2022ರವರೆಗೆ ಜಿಲ್ಲೆಯಲ್ಲಿ ಶೇ.1.7ರಷ್ಟು ಮಕ್ಕಳು ಪ್ರತಿ ವರ್ಷ ಕ್ಷಯರೋಗಕ್ಕೆ ತುತ್ತಾಗುತ್ತಿದ್ದಾರೆ. ಶೇ.35ರಷ್ಟು ಮಹಿಳೆಯರಿಗೆ ಹಾಗೂ ಶೇ.65ರಷ್ಟು ಪುರುಷರಲ್ಲಿ ಈ ಕ್ಷಯರೋಗ ಕಂಡು ಬಂದಿದ್ದು, ಅದರಲ್ಲಿ ಶೇ.80ರಷ್ಟು ಶ್ವಾಸಕೋಶದ ಭಾಗಕ್ಕೆ ರೋಗ ಕಂಡು ಬರುತ್ತದೆ ಎಂದರು.
ಗ್ರಾಪಂಗಳಲ್ಲಿ ಈ ಅಭಿಯಾನ ಹಮ್ಮಿಕೊಂಡು ಗ್ರಾಮಸ್ಥರಿಗೆ ಕ್ಷಯರೋಗದ ಭಯ ಹೋಗಲಾಡಿಸಲು ಮುಂದಾಗಲಾಗುವುದು. ಪ್ರತಿ ಬುಧವಾರ ಮನೆ-ಮನೆಗೆ ತೆರಳಿ ಕಫದ ಮಾದರಿ ಪಡೆದು ರೋಗದ ಲಕ್ಷಣ ಕಂಡು ಬಂದಲ್ಲಿ ರೋಗಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವುದರ ಜೊತೆಗೆ ತಿಂಗಳಿಗೆ 500 ರೂ. ಸರ್ಕಾರವೇ ನೀಡಲಿದೆ. ರೋಗಿಯ ಲಕ್ಷಣಗಳು ಗಾಳಿಯಿಂದ, ದೂಳಿನಿಂದ, ಕ್ಷಯ ರೋಗಿಯ ಕೆಮ್ಮಿನಿಂದ ಬರುತ್ತದೆ ಎಂದರು.
ಎಕ್ಸರೇ, ಕಫ ಪರೀಕ್ಷೆ, ಸಿಬಿನ್ಯಾಟ್ ವಿಧಾನಗಳ ಮೂಲಕ ರೋಗ ಪತ್ತೆ ಹಚ್ಚಬಹುದಾಗಿದ್ದು, ರೋಗಿಗಳು ನಿರಂತರ 6 ತಿಂಗಳು ಚಿಕಿತ್ಸೆ ಪಡೆದು ಪೌಷ್ಟಿಕಾಂಶ ಆಹಾರ ಸೇವಿಸಿದ್ದಲ್ಲಿ ಗುಣಮುಖರಾಗುತ್ತಾರೆ. ಜನ ಸ್ವ-ಇಚ್ಛೆಯಿಂದ ಚಿಕಿತ್ಸೆಗೆ ಮುಂದಾಗುತ್ತಿದ್ದು, ಜಿಲ್ಲೆಯಲ್ಲಿ ರೋಗದ ಪ್ರಮಾಣ ಕಡಿಮೆಯಾಗಿದೆ ಎಂದರು.
ಜಿಲ್ಲಾ ಪಿಪಿಎಂ ಸಂಯೋಜಕರು ಮೋಹಿನ್ ಪಾಷಾ, ಜಿಲ್ಲಾ ಪಿಎಂಡಿಟಿ ಪ್ರವೀಣ್ ಕುಮಾರ ಸೇರಿ ಪತ್ರಕರ್ತರು ಭಾಗಿಯಾಗಿದ್ದರು.