Advertisement

2025ಕ್ಕೆ  ಕ್ಷಯ ಮುಕ್ತ ಭಾರತದ ಗುರಿ

02:18 PM Mar 25, 2022 | Team Udayavani |

ಬೆಳಗಾವಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಬೆಳಗಾವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ವಿಭಾಗ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ಆಶ್ರಯದಲ್ಲಿ ನಗರದ ಜೆಎನ್‌ಎಂಸಿ ಆವರಣದ ಪ್ರೊ. ಡಾ. ಬಿ.ಎಸ್‌. ಕೊಡಕಿಣಿ ಸಭಾಭವನದಲ್ಲಿ ಜಿಲ್ಲಾ ಮಟ್ಟದ ವಿಶ್ವ ಕ್ಷಯರೋಗ ದಿನ ಗುರುವಾರ ಆಚರಿಸಲಾಯಿತು.

Advertisement

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ, ಕ್ಷಯರೋಗ ನಿರ್ಮೂಲನೆಯಡಿಯಲ್ಲಿ ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅವುಗಳನ್ನು ಸಮಾಜದ ಕೊನೆಯ ವ್ಯಕ್ತಿಗಳಿಗೆ ಮುಟ್ಟಿಸಿ 2025ನೇ ವೇಳೆಗೆ ಕ್ಷಯ ಮುಕ್ತ ಭಾರತವನ್ನು ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯನ್ನು ಮುಟ್ಟಲು ಎಲ್ಲರೂ ಕೂಡಿ ಕಾರ್ಯನಿರ್ವಹಿಸುವಂತೆ ಹಾಗೂ ಭಾರತದೇಶದಿಂದ ಕ್ಷಯರೋಗವನ್ನು ಓಡಿಸಲು ಕರೆ ನೀಡಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ದೇಶಾದ್ಯಾಂತ ಕೇಂದ್ರ ಸರ್ಕಾರದಿಂದ ಕೈಗೊಂಡ ಸಮೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯು ಕ್ಷಯರೋಗ ನಿಯಂತ್ರಣದಲ್ಲಿ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಪ್ರಯುಕ್ತ ಗಣನೀಯ ಪ್ರಮಾಣದಲ್ಲಿ ಕ್ಷಯರೋಗಿಗಳ ಸಂಖ್ಯೆ ಇಳಿಮುಖವಾಗಿದೆ.

ಕೇಂದ್ರ ಸರ್ಕಾರದಿಂದ ಬೆಳ್ಳಿ ಪದಕವನ್ನು ನೀಡಿ ಗೌರವಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಮುಂದಿನ ವರ್ಷ ಜಿಲ್ಲೆಯು ಕ್ಷಯರೋಗ ನಿರ್ಮೂಲನೆಯಡಿ ಸ್ವರ್ಣ ಪದಕವನ್ನು ಪಡೆಯಬೇಕೆಂದು ತಿಳಿಸಿದರು.

ಕಾರ್ಯಕ್ರಮವನ್ನು ತಾಲೂಕಾ ಆರೋಗ್ಯಾಧಿಕಾರಿ ಡಾ. ಎಸ್‌.ಸಿ. ಮಾಸ್ತಿಹೊಳಿ ಸ್ವಾಗತಿಸಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಬಿ.ಎನ್‌ ತುಕ್ಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್‌.ವಿ. ಮುನ್ಯಾಳ ಮಾತನಾಡಿ, ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಜಿಲ್ಲೆಯ ಸಂಘ ಸಂಸ್ಥೆಗಳ ಸೇವೆ ಹಾಗೂ ಜಿಲ್ಲಾ ಆಡಳಿತದ ಮಾರ್ಗದರ್ಶನ, ಚುನಾಯಿತ ಪ್ರತಿನಿಧಿಗಳ ಬೆಂಬಲದಿಂದ ಜಿಲ್ಲೆಯಲ್ಲಿ ಕ್ಷಯರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಹೆಮ್ಮೆಯ ಸಂಗತಿ. ಇವತ್ತಿನ ದಿನ ನವದೆಹಲಿ ವಿಜ್ಞಾನ ಭವನದಲ್ಲಿ ಕೇಂದ್ರ ಸರ್ಕಾರದಿಂದ ಬೆಳಗಾವಿ ಜಿಲ್ಲೆಗೆ ಬೆಳ್ಳಿ ಪದಕ ನೀಡಿ ಗೌರವಿಸಿದ್ದು, ತಮ್ಮೆಲ್ಲರ ಪರಿಶ್ರಮವೇ ಕಾರಣವೆಂದು ತಿಳಿಸಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸುಧಾಕರ ಆರ್‌.ಸಿ,, ಡಾ. ಮೋಗಾಶಿರ, ಸ್ವಪ್ನಿಲ್‌ ಕಾಂಬಳೆ, ಜಿಲ್ಲೆಯ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳು ಮತ್ತು ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತರು, ಎನ್‌.ಜಿ.ಓ.ಗಳು ಇದ್ದರು.

ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ ಉತ್ತಮ ಪ್ರಗತಿ ತೋರಿದ ಆಧಿಕಾರಿಗಳು, ಆಶಾ ಕಾರ್ಯಕರ್ತೆ, ಆರೋಗ್ಯ ಸಿಬ್ಬಂದಿ, ಖಾಸಗಿ ವೈದ್ಯರು ಮತ್ತು ಖಾಸಗಿ ಆಸ್ಪತ್ರೆಗಳನ್ನು ಸನ್ಮಾನಿಸಲಾಯಿತು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಪಿ. ಯಲಿಗಾರ 2025 ನೇ ಸಾಲಿಗೆ ಕ್ಷಯಮುಕ್ತ ಭಾರತ ದೇಶವನ್ನಾಗಿ ಮಾಡುವ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾಜಿ ಮಳೆಗನ್ನವರ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next