Advertisement
ಡಿ. 1ರಿಂದ ಆರಂಭಗೊಂಡು 31ರ ವರೆಗೆ ಆಂದೋಲನ ನಡೆಯಲಿದೆ. ಉಡುಪಿ ಜಿಲ್ಲೆಯಲ್ಲಿ ಮೊದಲ ವಾರದಲ್ಲಿ ಉಡುಪಿ ಮತ್ತು ಬ್ರಹ್ಮಾವರ ತಾಲೂಕು, ದ್ವಿತೀಯ ವಾರದಲ್ಲಿ ಕಾಪು ಮತ್ತು ಬೈಂದೂರು ತಾಲೂಕು, ತೃತೀಯ ವಾರದಲ್ಲಿ ಕಾರ್ಕಳ ಹಾಗೂ ನಾಲ್ಕನೇ ವಾರದಲ್ಲಿ ಕುಂದಾಪುರದಲ್ಲಿ ತಪಾಸಣೆ ನಡೆಯಲಿದೆ. ಜಿಲ್ಲೆಯಲ್ಲಿ 1,27,245 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗುತ್ತದೆ.
ಕ್ಷಯರೋಗದ ಪತ್ತೆ ಮತ್ತು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರೋಗಪತ್ತೆ ಯಂತ್ರಗಳನ್ನು ಪೂರೈಸಲಾಗಿದೆ. ಈ ಮೊದಲು ಮೈಕ್ರೋಸ್ಕೋಪ್ ಯಂತ್ರದ ಮೂಲಕ ತಪಾಸಣೆ ನಡೆಸಲಾಗುತ್ತಿತ್ತು. ಈ ಬಾರಿ ಸಿಬಿಎನ್‌ಎಎಟಿ ಯಂತ್ರಗಳನ್ನು ಪೂರೈಸಲಾಗಿದೆ. ತಪಾಸಣೆಗಾಗಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕರನ್ನೊಳಗೊಂಡ ಸುಮಾರು 1002 ಮಂದಿ ಸಿಬಂದಿಯನ್ನು ಜಿಲ್ಲೆಯಲ್ಲಿ ಇದಕ್ಕಾಗಿ ಬಳಸಿಕೊಳ್ಳಲಾಗಿದೆ. ಒಂದು ತಂಡದಲ್ಲಿ ಇಬ್ಬರು ಸಿಬಂದಿ ಇರಲಿದ್ದಾರೆ. ಈ ಬಗೆಗಿನ ಎಲ್ಲ ರೀತಿಯ ತರಬೇತಿ ಪ್ರಕ್ರಿಯೆಗಳು ಈಗಾಗಲೇ ಪೂರ್ಣಗೊಂಡಿವೆ. ಆಯಕಟ್ಟಿನ ಸ್ಥಳಗಳಲ್ಲಿ ಪರೀಕ್ಷೆ
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಜನ ಸಂದಣಿ ಇರುವ ಪ್ರದೇಶ, ಕಾರ್ಖಾನೆಗಳು, ಕಟ್ಟಡ ನಿರ್ಮಾಣ ಪ್ರದೇಶಗಳು, ಸಹಿತ ಜನಸಂಖ್ಯೆ ಹೆಚ್ಚಿರುವ ಭಾಗಗಳನ್ನು ಗುರುತಿಸಿಕೊಂಡು ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಕಫದ ಮಾದರಿಗಳನ್ನು ಸ್ಥಳದಲ್ಲಿಯೇ ಸಂಗ್ರಹಿಸಲಾಗುತ್ತದೆ. ಹೆಚ್ಚುವರಿ ಚಿಕಿತ್ಸೆ ಬೇಕಿದ್ದರೂ ಆಸ್ಪತ್ರೆಯಲ್ಲಿ ನೀಡಲಾಗುತ್ತದೆ ಎನ್ನುತ್ತಾರೆ ಜಿಲ್ಲಾ ನೋಡಲ್ ಅಧಿಕಾರಿಯಾದ ಸುಭಾಶ್ ಬಂಗೇರ ಅವರು.
Related Articles
ಕ್ಷಯರೋಗ ಒಂದು ಅಂಟು ರೋಗವಾಗಿದ್ದು, ಮೈಕೋ ಬ್ಯಾಕ್ಟೀರಿಯಂ ಟ್ಯುಬರ್‌ಕ್ಯುಲೋಸಿಸ್ ಎಂಬ ಸೂಕ್ಷ್ಮ ರೋಗಾಣು ವಿನಿಂದ ಒಬ್ಬರಿಂದ ಒಬ್ಬರಿಗೆ ಅತೀವೇಗದಲ್ಲಿ ಹರಡುತ್ತದೆ. ಕ್ಷಯರೋಗಿ ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ಈ ರೋಗಾಣುಗಳು ಗಾಳಿಯ ಮೂಲಕ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶ ಸೇರಿ ಸೋಂಕು ಉಂಟಾಗುತ್ತದೆ. ನಿರಂತರ ಕೆಮ್ಮು, ಕಫದಲ್ಲಿ ರಕ್ತ ಬೀಳುವುದು, ಬಿಟ್ಟು ಬಿಟ್ಟು ಜ್ವರ ಬರುವುದು ಇವುಗಳು ಕ್ಷಯರೋಗದ ಲಕ್ಷಣವಾಗಿದೆ. ಇಂತಹ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಔಷಧ ತೆಗೆದುಕೊಳ್ಳುವ ಮೂಲಕ ಕ್ಷಯರೋಗವನ್ನು ನಿಯಂತ್ರಿಸಬಹುದು.
Advertisement
ಮನೆಬಾಗಿಲಿಗೆ ಬಂದು ತಪಾಸಣೆ2025ರೊಳಗೆ ಕ್ಷಯರೋಗ ನಿರ್ಮೂಲನೆ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿದೆ. ದೇಶಾದ್ಯಂತ ಈ ಅಭಿಯಾನ ನಡೆಯಲಿದೆ. ಉಡುಪಿ ಜಿಲ್ಲೆಯಲ್ಲಿ ಡಿ.1ರಿಂದ ಆರಂಭಗೊಳ್ಳಲಿದೆ. ಚಿಕಿತ್ಸೆ ಸಂಪೂರ್ಣ ಉಚಿತವಾಗಿದೆ. ಕಾರ್ಯಕರ್ತರು ಮನೆಬಾಗಿಲಿಗೆ ಬಂದು ತಪಾಸಣೆ ನಡೆಸಲಿದ್ದಾರೆ. ರೋಗ ಲಕ್ಷಣಗಳು ಇದ್ದವರು ಸ್ವತಃ ತಾವಾಗಿಯೇ ಬಂದು ತಪಾಸಣೆಯನ್ನೂ ಮಾಡಬಹುದು.
-ಡಾ| ಚಿದಾನಂದ ಸಂಜು, ಜಿಲ್ಲಾ ಕ್ಷಯರೋಗ ನಿರ್ಮೂಲನೆ ಅಧಿಕಾರಿ, ಉಡುಪಿ