Advertisement

ಚಿಕಿತ್ಸೆಯಿಂದ ಕ್ಷಯ ರೋಗ ನಿರ್ಮೂಲನೆ ಸಾಧ್ಯ: ಸಿಇಒ

06:55 PM Mar 25, 2021 | Team Udayavani |

ಬೀದರ: ಕ್ಷಯ ರೋಗದ ಲಕ್ಷಣ ಇದ್ದವರು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ 2 ಬಾರಿ ಕಪ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕ್ಷಯರೋಗ ಯಾರಿಗೆ ಬೇಕಾದರೂ ಬರಬಹುದು ಎಂದು ಜಿಪಂ ಸಿಇಒ ಜಹೀರಾ ನಸೀಮ್‌ ಹೇಳಿದರು. ನಗರದ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ನಡೆದ ವಿಶ್ವ ಕ್ಷಯರೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಕ್ಷಯ ರೋಗ ಮುಕ್ತವಾಗಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.

Advertisement

ಡಿಎಚ್‌ಒ ಡಾ| ವಿ.ಜಿ. ರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಷಯ ರೋಗ “ಮೈಕೋಬ್ಯಾಕ್ಟೀರಿಯಂ ಟ್ಯೂಬರ್‌ ಕ್ಯುಲೋಸಿಸ್‌’ ಸೂಕ್ಷ್ಮಾಣು ಜೀವಿಯಿಂದ ಬರುತ್ತದೆ. ಈ ರೋಗ ದೇಹದ ಯಾವುದೇ ಭಾಗಕ್ಕಾದರೂ ಬರಬಹುದು. ರೋಗದಲ್ಲಿ ಶ್ವಾಸಕೋಶದ ಕ್ಷಯ ಮತ್ತು ಶ್ವಾಸಕೋಶೇತ್ತರ ಕ್ಷಯ ಎಂಬ ಎರಡು ವಿಧಗಳಿವೆ. ಕ್ಷಯರೋಗಿ ಕೆಮ್ಮಿದಾಗ, ಸೀನಿದಾಗ ಹೊರಬರುವ ತುಂತುರುಗಳಿಂದ ರೋಗಾಣುಗಳು ಆರೋಗ್ಯವಂತ ವ್ಯಕ್ತಿಯ ದೇಹ ಸೇರಿ ಸೋಂಕು ಉಂಟಾಗುತ್ತದೆ ಎಂದರು.

ಜಿಲ್ಲಾ ಕ್ಷಯ ರೋಗ ಅಧಿ ಕಾರಿ ಡಾ| ದೀಪಾ ಖಂಡ್ರೆ ಮಾತನಾಡಿ, ಜಿಲ್ಲೆಯ ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮೈಕ್ರೋಸ್ಕೋಪಿ ಪರೀಕ್ಷೆ ಮಾಡಲಾಗುತ್ತದೆ. ಕ್ಷಯರೋಗದ ಪರೀಕ್ಷೆ ಮತ್ತು ಚಿಕಿತ್ಸೆ ಸಂಪೂರ್ಣ ಉಚಿತವಾಗಿದೆ. ಕ್ಷಯ ರೋಗಿಯ ಮನೆ ಸಮೀಪದ ನೇರ ನಿಗಾವಣೆ ಕೇಂದ್ರದಲ್ಲಿ 6 ರಿಂದ 8 ತಿಂಗಳು ಚಿಕಿತ್ಸೆ ನೀಡಲಾಗುವುದು ಎಂದರು. ಬ್ರಿಮ್ಸ್ ಕ್ಷಯ ರೋಗದ ನೋಡಲ್‌ ಅಧಿಕಾರಿ ಡಾ| ಮಹೇಶ ತೊಂಡಾರೆ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಉತ್ತಮ ಕೆಲಸ ನಿರ್ವಹಿಸಿರುವ ವೈದ್ಯರು, ಟೆಕ್ನಾಲಾಜಿಸ್ಟ್‌, ಫಾರ್ಮಶಿಸ್ಟ್‌, ಕಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆ ಹಾಗೂ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಸಿಬ್ಬಂದಿಗೆ ಸನ್ಮಾನಿಸಲಾಯಿತು.

ಜಾಗೃತಿ ರ್ಯಾಲಿ: ಕಾರ್ಯಕ್ರಮಕ್ಕೂ ಮುನ್ನ ಕ್ಷಯ ರೋಗ ಕುರಿತು ಜಾಗೃತಿ ಮೂಡಿಸಲು ನಗರದಲ್ಲಿ ನಡೆದ ವಾಹನಗಳ ರ್ಯಾಲಿಗೆ ಜಿಪಂ ಸಿಇಒ ಜಹೀರಾ
ನಸೀಮ್‌ ಚಾಲನೆ ನೀಡಿದರು. ಈ ವೇಳೆ ಐಎಂಎ ಅಧ್ಯಕ್ಷ ಡಾ| ವಿ.ವಿ. ನಾಗರಾಜ, ಕುಷ್ಠ ರೋಗ ಅ ಧಿಕಾರಿ ಡಾ| ಮಹೇಶ ಬಿರಾದಾರ, ಆರ್‌ಸಿಎಚ್‌
ಅಧಿಕಾರಿ ಡಾ| ರಾಜಶೇಖರ ಪಾಟೀಲ, ಕುಟುಂಬ ಕಲ್ಯಾಣಾಧಿಕಾರಿ ಡಾ| ಶಿವಶಂಕರ ಬಿ., ಜಿಲ್ಲಾ ಮಲೇರಿಯಾ ಅ ಧಿಕಾರಿ ಡಾ| ಸಂಜುಕುಮಾರ
ಪಾಟೀಲ, ಸಂಗಪ್ಪ ಕಾಂಬಳೆ ಇತರರಿದ್ದರು.

Advertisement

ರೋಗಿಗಳಿಗೆ ಚಿಕಿತ್ಸೆ
ಬೀದರ ಜಿಲ್ಲೆಯಲ್ಲಿ 2019ರಲ್ಲಿ ಒಟ್ಟು 3015 ಕ್ಷಯ ರೋಗಿಗಳಿಗೆ ಚಿಕಿತ್ಸೆಗೆ ಒಳಪಡಿಸಲಾಯಿತು. ಅದರಲ್ಲಿ 2512 ರೋಗಿಗಳು ಗುಣಮುಖರಾಗಿದ್ದು, 190 ರೋಗಿಗಳು ಮೃತಪಟ್ಟಿದ್ದಾರೆ. 149 ರೋಗಿಗಳು ಚಿಕಿತ್ಸೆ ಮಧ್ಯದಲ್ಲೇ ಚಿಕಿತ್ಸೆ ಬಿಟ್ಟಿದ್ದಾರೆ. 44 ರೋಗಿಗಳಿಗೆ ಚಿಕಿತ್ಸೆ ವೈಫಲ್ಯತೆಯಾಗಿದೆ. 2020ರಲ್ಲಿ ಒಟ್ಟು 13,849 ಶಂಕಿತರ ಕಫ ಪರೀಕ್ಷಿಸಲಾಗಿದ್ದು, ಅದರಲ್ಲಿ 2200 ಧನಾತ್ಮಕ-ಋಣಾತ್ಮಕ ರೋಗಿಗಳನ್ನು ಕಂಡುಹಿಡಿಯಲಾಗಿದ್ದು, ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next