ತಿರುಪತಿ: ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ನಡಿಗೆ ಪಥದ ಮೂಲಕ ಸಾಗುವವರು ಇನ್ನು ಮುಂದೆ ಕಡ್ಡಾಯವಾಗಿ ತಮ್ಮ ಜತೆಗೆ ಕೋಲು ತೆಗೆದು ಕೊಂಡು ಹೋಗಬೇಕು. ಕಾಡು ಪ್ರಾಣಿಗಳಿಂದ ರಕ್ಷಣೆಗಾಗಿ ತಿರುಮಲ ತಿರುಪತಿ ದೇವಸ್ಥಾನಗಳು ಟ್ರಸ್ಟ್(ಟಿಟಿಡಿ) ಈ ಕ್ರಮವನ್ನು ಕೈಗೊಂಡಿದೆ.
ಕಳೆದ ವಾರ ಚಿರತೆ ದಾಳಿಗೆ ಸಿಲುಕಿ 6 ವರ್ಷದ ಬಾಲಕಿ ಮೃತಪಟ್ಟ ಹಿನ್ನೆಲೆಯಲ್ಲಿ ಹಲವು ಕ್ರಮಗಳನ್ನು ಟಿಟಿಡಿ ಕೈಗೊಂಡಿದೆ.
“ನಡಿಗೆ ಪಥದ ಮೂಲಕ ತೆರಳುವ ಭಕ್ತರು ಇನ್ನು ಮುಂದೆ ಬ್ಯಾಚ್‌ಗಳಲ್ಲಿ ಹೋಗಬೇಕು. ಪತೀ 100 ಮಂದಿ ಭಕ್ತರ ಒಂದು ಬ್ಯಾಚ್ ಜತೆಗೆ ಒಬ್ಬರು ಭದ್ರತಾ ಸಿಬಂದಿ ಇರುತ್ತಾರೆ. ಜತೆಗೆ ಕಾಡು ಪ್ರಾಣಿಗಳ ದಾಳಿಯ ವಿರುದ್ಧ ರಕ್ಷಣೆಗೆ ಪ್ರತಿಯೊಬ್ಬರಿಗೂ ಒಂದು ಕೋಲು ನೀಡಲಾಗು ತ್ತದೆ. ಎಷ್ಟು ಕೋಲು ಬೇಕಾದರೂ ಒದಗಿಸಲು ಸಿದ್ಧರಿದ್ದೇವೆ’ ಎಂದು ಟಿಟಿಡಿ ಅಧ್ಯಕ್ಷ ಬಿ.ಕರುಣಾಕರ ರೆಡ್ಡಿ ತಿಳಿಸಿದ್ದಾರೆ.
“ಭಕ್ತರು ಆಹಾರವನ್ನು ಎಲ್ಲೆಂದರಲ್ಲಿ ಎಸೆಯಬಾರದು. ವಾಸನೆಗೆ ಕಾಡು ಪ್ರಾಣಿಗಳು ಸಮೀಪ ಬರುವ ಸಾಧ್ಯತೆ ಇರುತ್ತದೆ. ಅಲ್ಲದೇ ಕೋತಿಗಳಿಗೆ ಯಾವುದೇ ಆಹಾರವನ್ನು ನೀಡಬಾರದು’ ಎಂದು ಮನವಿ ಮಾಡಿದರು.
“ನಡಿಗೆ ಪಥದ ಸುತ್ತಲೂ ಬೇಲಿ ಹಾಕಲು ನಾವು ಮುಂದಾಗಿದ್ದೇವೆ. ನಡಿಗೆ ಪಥವು ಸಂರಕ್ಷಿತ ಅರಣ್ಯದಡಿ ಬರುತ್ತದೆ. ಹೀಗಾಗಿ ಬೇಲಿ ಹಾಕುವ ಯೋಜನೆಗೆ ಅನುಮತಿ ನೀಡುವಂತೆ ನಾವು ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ದ್ದೇವೆ. ಈಗಾಗಲೇ ಈ ಮಾರ್ಗದಲ್ಲಿ 500 ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಅಗತ್ಯಬಿದ್ದರೆ ಡ್ರೋನ್ ಕೆಮರಾಗಳನ್ನು ಖರೀದಿಸಲಾಗುವುದು. ಪ್ರಾಣಿಗಳ ಚಲನವಲನಗಳ ಮೇಲೆ ನಿಗಾ ಇಡುವ ಸಿಬಂದಿ ಹಾಗೂ ವೈದ್ಯರು ದಿನದ 24 ಗಂಟೆಯೂ ಲಭ್ಯವಿರಲಿದ್ದಾರೆ’ ಎಂದು ಟಿಟಿಡಿ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.