ತಿರುಪತಿ: ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲದ ಆವರಣವನ್ನು ಗರಿಷ್ಠ ಪ್ರಮಾಣದಲ್ಲಿ ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಕೆಲವು ಪ್ರಮುಖ ಮಾರ್ಪಾಡುಗಳನ್ನು ಮಾಡಲು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಟ್ರಸ್ಟ್ ಮುಂದಾಗಿದೆ.
ಕೊರೊನಾ ಅನಂತರ ತಿರುಮಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಹೀಗಾಗಿ ಇರುವ ಸ್ಥಳವನ್ನೇ ಪೂರ್ಣ ಪ್ರಮಾಣದಲ್ಲಿ ಬಳಸುವಂತಾಗಲು ಕೆಲವು ಬದಲಾವಣೆಗಳನ್ನು ಟಿಟಿಡಿ ಮಾಡುತ್ತಿದೆ.
ಲಡ್ಡು ಪ್ರಸಾದ ಮಾಡುವ ಅಡುಗೆ ಮನೆಯನ್ನು ದೇಗುಲದ ಆವರಣದ ಹೊರಗೆ ಸ್ಥಳಾಂತರಿಸಲು ಟಿಟಿಡಿ ಮುಂದಾಗಿದೆ. ಕೇವಲ ದೇವರಿಗೆ ಅರ್ಪಿಸುವ ನೈವೇದ್ಯ ಮಾತ್ರ ದೇಗುಲದೊಳಗೆ ತಯಾರಿಸಲಾಗುವುದು. ಈ ಸ್ಥಳದಲ್ಲಿ ಭಕ್ತರು ಕುಳಿತು ಕೆಲವು ಹೊತ್ತು ಧ್ಯಾನ ಮಾಡುವಂತಾಗಲು ಸ್ಥಳಾವಕಾಶ ಕಲ್ಪಿಸಲಾಗುತ್ತದೆ. ಇನ್ನೊಂದೆಡೆ ಸದ್ಯ ಧ್ವಜಸ್ತಂಭದ ಸಮೀಪ ಭಕ್ತರಿಗೆ ಪೊಂಗಲ್, ಪುಳಿಯೊಗರೆ ಸೇರಿದಂತೆ ಅನ್ನ ಪ್ರಸಾದ ವಿತರಿಸಲಾಗುತ್ತಿದೆ. ಈ ಸ್ಥಳ ಚಿಕ್ಕದಾಗಿರುವುದರಿಂದ ಇದನ್ನು ದೇಗುಲದ ಈಶಾನ್ಯಕ್ಕೆ ಸ್ಥಳಾಂತರಿಸಲಾಗುವುದು. ಈ ಹಿಂದೆ ಲಡ್ಡು ಸಂಗ್ರಹಿಸಿ ಇಡುತ್ತಿದ್ದ ದೊಡ್ಡ ಹಾಲ್‌ನಲ್ಲಿ ಅನ್ನ ಪ್ರಸಾದ ವಿತರಿಸಲಾಗುತ್ತದೆ. ಇದರಿಂದ ಜನಸಂದಣಿ ಚದುರಲಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಲಾಡು ಸಂಗ್ರಹ ಹಾಲ್ ಕೆಲವು ದಶಕದ ಹಿಂದೆ ನಿರ್ಮಿಸಿದ್ದು, ಇದು ದೇಗುಲದ ವಾಸ್ತುಗೆ ವಿರುದ್ಧವಾಗಿದೆ. ಇದನ್ನು ಸಂಪೂರ್ಣವಾಗಿ ಕೆಡವಿ, ದೇಗುಲದ ವಾಸ್ತುಗೆ ತಕ್ಕಂತೆ ನಿರ್ಮಿಸಲಾಗುವುದು. ಆದರೆ ಈ ಎಲ್ಲ ತೀರ್ಮಾನಗಳು ಅಂತಿಮಗೊಳಿಸುವ ಮೊದಲು ದೇಗುಲದ ಪುರೋಹಿತರು ಮತ್ತು ಪ್ರಮುಖ ಧಾರ್ಮಿಕ ವ್ಯಕ್ತಿಗಳೊಂದಿಗೆ ಚರ್ಚಿಸಿ ನಿರ್ಧಾರಿಸಲಾಗುವುದು ಎಂದು ಟಿಟಿಡಿ ತಿಳಿಸಿದೆ.