Advertisement

ರಾಜ್ಯದ ಯೋಜನೆಗೆ ಟಿಟಿಡಿ ಒಪ್ಪಿಗೆ

07:14 AM Jul 04, 2020 | Lakshmi GovindaRaj |

ಬೆಂಗಳೂರು: ತಿರುಮಲದಲ್ಲಿ ರಾಜ್ಯ ಸರ್ಕಾರದ ವತಿಯಿಂದ 200 ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣ ಮಂಟಪ ಹಾಗೂ ವಸತಿ ಗೃಹ ನಿರ್ಮಾಣ ಸಂಬಂಧ ಯೋಜನೆಯ ನೀಲನಕ್ಷೆಗೆ ಟಿಟಿಡಿ ಒಪ್ಪಿಗೆ ನೀಡಿದೆ. ಗೃಹ ಕಚೇರಿ “ಕೃಷ್ಣಾ’ದಲ್ಲಿ  ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಟಿಟಿಡಿ ಅಧ್ಯಕ್ಷ ಎಂ.ವಿ. ಸುಬ್ಟಾರೆಡ್ಡಿ ಅವರು ಉದ್ದೇ ಶಿತ ಯೋಜನೆ ನೀಲನಕ್ಷೆ ಪರಿಶೀಲಿಸಿ ಒಪ್ಪಿಗೆ ನೀಡಿದ್ದಾರೆ.

Advertisement

ತಿರುಮಲದಲ್ಲಿ ಕರ್ನಾಟಕ ಸರ್ಕಾರಕ್ಕೆ ಸೇರಿದ 7 ಏಕರೆ ಭೂಮಿಯಿದ್ದು, ಆ ಜಾಗದಲ್ಲಿ ಡಾರ್ಮೆಂಟ್ರಿ ಸೇರಿದಂತೆ 320 ಕೊಠಡಿಗಳುಳ್ಳ ಮೂರು ವಸತಿಗೃಹ, ಕಲ್ಯಾಣ ಮಂಟಪ ಒಳಗೊಂಡಂತೆ ಇತರೆ ಅಭಿವೃದ್ಧಿ ಯೋಜನೆಗೆ ನೀಲನಕ್ಷೆ ಸಿದ್ಧಪಡಿಸಿದೆ.  ಆದರೆ ಈ ನೀಲನಕ್ಷೆಯಲ್ಲಿ ಕೆಲ ತಿದ್ದುಪಡಿಗೆ ಟಿಟಿಡಿ ಪ್ರಸ್ತಾಪಿಸಿತ್ತು. ಅದರಂತೆ ನೀಲನಕ್ಷೆಯಲ್ಲಿ ಬದಲಾವಣೆ ಮಾಡಲಾಗಿತ್ತು. ಸುಮಾರು 15 ವರ್ಷಗಳಿಂದ ಎದುರಾಗಿದ್ದ ಕಾನೂನು ತೊಡಕುಗಳೆಲ್ಲ ನಿವಾರಣೆಯಾಗಿರುವ ಹಿನ್ನೆಲೆಯಲ್ಲಿ ಎಂ.ವಿ. ಸುಬ್ಟಾರೆಡ್ಡಿ ಅವರು ನೀಲನಕ್ಷೆ, ಯೋಜನಾ ವಿವರವನ್ನು ಶುಕ್ರವಾರ ಪರಿಶೀಲಿಸಿ ಒಪ್ಪಿಗೆ ನೀಡಿದ್ದಾರೆ.

ರಾಜ್ಯ ಸರ್ಕಾರ ಯೋಜನಾ ವೆಚ್ಚವನ್ನು ನೇರವಾಗಿ ಟಿಟಿಡಿಗೆ ವರ್ಗಾಯಿಸಲಿದ್ದು,  ಟಿಟಿಡಿ ವತಿಯಿಂದಲೇ ಕಾಮಗಾರಿ ಅನುಷ್ಠಾನವಾಗಲಿದೆ. ರಾಜ್ಯ ಸರ್ಕಾರದ ಉದ್ದೇಶಿತ ಯೋಜನೆ ಸಂಬಂಧ ಸಿಎಂ ಯಡಿಯೂರಪ್ಪ ಅವರು ಗುರುವಾರ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ್‌ರೆಡ್ಡಿ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ  ನಡೆಸಿದ್ದರು. ಅದರಂತೆ ಟಿಟಿಡಿ ಅಧ್ಯಕ್ಷರು ಶುಕ್ರವಾರ ಯಡಿಯೂರಪ್ಪ ಅಧ್ಯಕ್ಷತೆಯ ಸಭೆಯಲ್ಲಿ ಪಾಲ್ಗೊಂಡಿದ್ದರು.

ಆಷಾಢ ಕಳೆದ ಬಳಿಕ ಶ್ರಾವಣದಲ್ಲಿ ಮುಖ್ಯಮಂತ್ರಿಯವರು ತಿರುಮಲಕ್ಕೆ ಭೇಟಿ ನೀಡಿ ಯೋಜನೆಗೆ ಶಂಕುಸ್ಥಾಪನೆ  ನೆರವೇರಿಸಲಿದ್ದಾರೆ. ಆ ಸಂದರ್ಭ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ. ಸಚಿವ ಡಾ.ಕೆ.ಸುಧಾಕರ್‌, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌, ಹಿಂದೂ  ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾ ದಾಯ ದತ್ತಿಗಳ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next