Advertisement
ಸಾಂಕ್ರಾಮಿಕ ರೋಗ: ಸುನಾಮಿಯ ಭೀಕರತೆಗೆ ತುತ್ತಾಗಿರುವ ಪಾಲು ಹಾಗೂ ಡೊಂಗ್ಗಾಲ ನಗರಗಳಲ್ಲಿ ಎಲ್ಲಿ ನೋಡಿದರೂ, ಉರುಳಿದ ಕಟ್ಟಡಗಳ ಅವ ಶೇಷಗಳು, ರಸ್ತೆಗಳಲ್ಲಿ ಒಂದರ ಮೇಲೊಂದು ಹೇರಿಕೊಂಡಿರುವ ಕಾರು, ವಾಹನಗಳು, ಧರೆಗುರುಳಿದ ಮರ, ವಿದ್ಯುತ್ ಕಂಬಗಳೇ ಕಣ್ಣಿಗೆ ರಾಚುತ್ತವೆ. ಇದೆಲ್ಲರದ ನಡುವೆಯೇ, ಸುನಾಮಿಯಿಂದ ಬದುಕುಳಿದವರಲ್ಲಿ ಹಲವರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿದ್ದು, ಇದು ಸಮಸ್ಯೆಯ ಮತ್ತೂಂದು ಮಗ್ಗುಲನ್ನು ಅನಾವರಣ ಗೊಳಿಸಿದೆ. ಗಾಯಾಳುಗಳಿಂದ ಭರ್ತಿಯಾಗಿರುವ ಆಸ್ಪತ್ರೆಗಳ ಮುಂದೆ ಈಗ ರೋಗದ ಸೋಂಕು ತಗುಲಿದವರೂ ದಿನವಿಡೀ ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಲು, ಡೊಂಗ್ಗಾಲ ನಗರಗಳ ಎಲ್ಲೆಲ್ಲೂ ಆ್ಯಂಬುಲೆನ್ಸ್‌ಗಳ ಶಬ್ದ ಮಾರ್ದನಿಸುತ್ತಿದೆ. ಜತೆಗೆ, ಶುದ್ಧ ಕುಡಿಯುವ ನೀರಿನ ಸಮಸ್ಯೆಯೂ ಉದ್ಭವವಾಗಿದ್ದು, ಜನರನ್ನು ಮತ್ತಷ್ಟು ಹೈರಾಣಾಗಿಸಿದೆ.
ಇಂಡೋನೇಷ್ಯಾದಲ್ಲಿನ ಭೂಕಂಪದ ಸ್ಥಿತಿಯ ಕರಾಳತೆ ರಾಚುತ್ತಿರುವ ಈ ಸಂದರ್ಭದಲ್ಲೇ ಫಿಜಿಯಲ್ಲಿ ರವಿವಾರ ಬೆಳಗ್ಗೆ ಪ್ರಬಲ ಭೂಕಂಪ ಉಂಟಾಗಿದೆ. ರಿಕ್ಟರ್ ಮಾಪಕದಲ್ಲಿ ಈ ಭೂಕಂಪದ ತೀವ್ರತೆ 6.6ರಷ್ಟಿತ್ತೆಂದು ಹೇಳಲಾಗಿದೆ. ಸೆ. 7ರಂದು ಈ ದ್ವೀಪರಾಷ್ಟ್ರದಲ್ಲಿ 7.8ರ ಪ್ರಬಲ ಭೂಕಂಪ ಉಂಟಾಗಿ ಭಾರೀ ಹಾನಿ ಉಂಟು ಮಾಡಿತ್ತು.