Advertisement

Valmiki Corruption Scam ಮುಚ್ಚಲು ಯತ್ನ: ಬಿಜೆಪಿ ಆರೋಪ, ಸಿಎಂ ಉತ್ತರಕ್ಕೆ ಅಡ್ಡಿ

12:51 AM Jul 19, 2024 | Team Udayavani |

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣ ಸದನದ ಹೊರಗೆ ಮತ್ತು ಒಳಗೆ ಕಾವೇರಿಸಿದ್ದು, ಗುರುವಾರ ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉತ್ತರ ಕೂಡ ಮೊಟಕಾಯಿತು. ಈ ಪ್ರಕರಣವನ್ನು ಮುಚ್ಚಿ ಹಾಕಲು ಸರಕಾರ ಯತ್ನ ಮಾಡುತ್ತಿದೆ ಎಂದು ಆಡಳಿತ ಪಕ್ಷದ ವಿರುದ್ಧ ವಿಪಕ್ಷಗಳು ಮುಗಿಬಿದ್ದವು.

Advertisement

ಗುರುವಾರ ಬೆಳಗ್ಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದ ಬಳಿ ಪ್ರತಿಭಟನೆ ನಡೆಸಿದ್ದ ರಾಜ್ಯ ಬಿಜೆಪಿಯು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿತ್ತು.

ವಿಧಾನಸೌಧ ಮುತ್ತಿಗೆಗೆ ಯತ್ನಿಸಿದ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದರು.

ಬಳಿಕ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಂಡ ಬಿಜೆಪಿ ಶಾಸಕರು ಆಡಳಿತ ಪಕ್ಷಕ್ಕೆ ಆರಂಭದಿಂದಲೂ ಬಿಸಿ ಮುಟ್ಟಿಸುತ್ತಲೇ ಇದ್ದರು. ಗುರುವಾರ ಮಧ್ಯಾಹ್ನ ಭೋಜನ ವಿರಾಮದ ಅನಂತರ ಕಲಾಪ ಆರಂಭವಾದಾಗ ಈ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾದರು.

ಆರಂಭದಲ್ಲಿ ಯಾವ್ಯಾವ ಶಾಸಕರು ಎಷ್ಟೆಷ್ಟು ತಾಸುಗಳ ಕಾಲ ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಕುರಿತು ಮಾತನಾಡಿದ್ದಾರೆ ಎಂದು ವಿವರಣೆ ನೀಡಿದ ಸಿಎಂ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 2013ರಿಂದ ಇದುವರೆಗೆ ಮುಖ್ಯಮಂತ್ರಿಯಾಗಿ ತಾನು ಏನೇನು ಮಾಡಿದ್ದೇನೆ ಎಂಬುದನ್ನೂ ಹೇಳುತ್ತ, ಬಿಜೆಪಿ ಏನೂ ಮಾಡಿಲ್ಲ ಎಂದು ಮಾತಿನಲ್ಲೇ ತಿವಿದರು.
ಅದೆಲ್ಲ ಬಿಡಿ, ವಿಷಯಕ್ಕೆ ಬನ್ನಿ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಹೇಳಿದ ಬಳಿಕ ಉತ್ತರ ಮುಂದುವರಿಸಿದ ಸಿಎಂ, ಪ್ರಕರಣದ ಬಗ್ಗೆ ವಿವರಣೆ ನೀಡಲಾರಂಭಿಸಿದರು. ಆದರೆ ಸಿಎಂ ಉತ್ತರ ಕೊಡುವಾಗ ವಿಷಯ ಮುಚ್ಚಿಡುತ್ತಿದ್ದಾರೆ.

Advertisement

ಆತ್ಮಹತ್ಯೆ ಮಾಡಿಕೊಂಡವರ ಮರಣಪತ್ರದಲ್ಲಿರುವ ಅಂಶವನ್ನು ಓದದೆ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ-ಜೆಡಿಎಸ್‌ ಧರಣಿ ನಡೆಸಿದ್ದರಿಂದ ಸಿಎಂ ಉತ್ತರ ಪೂರ್ಣಗೊಳ್ಳಲಿಲ್ಲ. ಸ್ಪೀಕರ್‌ ಖಾದರ್‌ ಅವರು ಶುಕ್ರವಾರ ಬೆಳಗ್ಗೆಗೆ ಕಲಾಪ ಮುಂದೂಡಿದರು. ಹೀಗಾಗಿ ಶುಕ್ರವಾರವೂ ಈ ಜಟಾಪಟಿ ಮುಂದುವರಿಯುವ ಸಾಧ್ಯತೆಗಳಿವೆ.

ಸಚಿವರ ಮೌಖಿಕ ಸೂಚನೆ ಮೇರೆಗೆ…
ವಿಪಕ್ಷ ಪಟ್ಟು ಗಟ್ಟಿಯಾಗುತ್ತಿದ್ದಂತೆ ಮಣಿದ ಸಿಎಂ, ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್‌ ಮರಣಪತ್ರವನ್ನು ಸಂಪೂರ್ಣವಾಗಿ ಓದಲಾರಂಭಿಸಿದರು. “ಸಚಿವರ ಮೌಖಿಕ ಸೂಚನೆ ಮೇರೆಗೆ’ ಎಂದು ಉಲ್ಲೇಖವಾಗಿದೆಯೇ ವಿನಾ ನನ್ನ ಸಾವಿಗೆ ಕಾರಣ ಎಂದು ಬರೆದಿಲ್ಲ ಎನ್ನುತ್ತಿದ್ದಂತೆ ಸಚಿವರನ್ನು ರಕ್ಷಿಸುತ್ತಿದ್ದೀರಿ ಎಂದು ವಿಪಕ್ಷ ಸದಸ್ಯರು ಮುಗಿಬಿದ್ದರು. ಇದಕ್ಕೆ ಪ್ರತ್ಯುತ್ತರ ಕೊಟ್ಟ ಸಿಎಂ, ಯಾರನ್ನೂ ರಕ್ಷಣೆ ಮಾಡುವುದಿಲ್ಲ, ನಿಮ್ಮನ್ನೂ ರಕ್ಷಣೆ ಮಾಡುವುದಿಲ್ಲ. ನೀವು ತಪ್ಪು ಮಾಡಿದರೆ ನಿಮ್ಮ ಮೇಲೂ ಕ್ರಮ ತೆಗೆದುಕೊಳ್ಳುತ್ತೇನೆ. ಚಂದ್ರಶೇಖರ್‌ ಪತ್ನಿ ಕವಿತಾ ಕೊಟ್ಟ ದೂರಿನಲ್ಲಿ ಸಚಿವರ ಹೆಸರಿಲ್ಲ, ನೋಡಿ ಬೇಕಿದ್ದರೆ ಎಂದು ದೂರಿನ ಪ್ರತಿಯನ್ನು ಬಿಜೆಪಿಯವರಿಗೆ ನೀಡಿದರು. ಸಮಾಧಾನಗೊಳ್ಳದ ಬಿಜೆಪಿ ಶಾಸಕರು, ಸಚಿವರ ರಕ್ಷಣೆ ಮಾಡುತ್ತಿದ್ದೀರಿ, ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿ ದ್ದೀರಿ ಎಂದು ಧರಣಿಗಿಳಿದರು. ಕಲಾಪವನ್ನು 10 ನಿಮಿಷ ಮುಂದೂಡಿದ ಸ್ಪೀಕರ್‌, ಸಂಜೆ 4.30ರಿಂದ 6ರ ವರೆಗೆ ಸಂಧಾನಕ್ಕೆ ಪ್ರಯತ್ನಿಸಿದರು. ಐದು ನಿಮಿಷ ಮಾತನಾಡಲು ಬಿಡಿ ಎಂದ ಸಿಎಂ ಎದುರು ಸಿಬಿಐ ತನಿಖೆಗೆ ವಹಿಸಿದರೆ ಮಾತ್ರ ಬಿಡುತ್ತೇವೆ ಎಂದು ಸಂಧಾನಸಭೆಯಲ್ಲೇ ವಿಪಕ್ಷ ಸದಸ್ಯರು ಪಟ್ಟು ಹಿಡಿದರು. ಸರಕಾರವೂ ತನ್ನ ಹಠ ಬಿಡಲಿಲ್ಲ.

ಕೊನೆಗೆ ಶುಕ್ರವಾರಕ್ಕೆ ಕಲಾಪ ಮುಂದೂಡಿಕೆಯಾಯಿತು. ವಿಧಾನಸಭೆಯ ಸಭಾಂಗಣದಿಂದಲೇ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಹೊರಬಂದ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ಪ್ರತಿಭಟನೆ ನಡೆಸಿದರು.

ಮರಣ ಪತ್ರದಲ್ಲಿ ಸಚಿವರ ಹೆಸರಿಲ್ಲ!
2024ರ ಮೇ 26ರಂದು ನಿಗಮದ ಲೆಕ್ಕ ಅಧೀಕ್ಷಕ ಚಂದ್ರಶೇಖರ್‌ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಪತ್ನಿ ಕವಿತಾ ದಾಖಲಿಸಿದ ದೂರಿನ ಆಧಾರದ ಮೇಲೆ ತತ್‌ಕ್ಷಣ ಎಫ್ಐಆರ್‌ ದಾಖಲಿಸಿ, ತನಿಖೆ ಆರಂಭಿಸಲಾಗಿದೆ. ಅದೇ ರೀತಿ ಮೇ 28ರಂದು ಯೂನಿಯನ್‌ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ರಾಜಶೇಖರ್‌ ಎಂಬವರು ಬ್ಯಾಂಕ್‌ ಅಧಿಕಾರಿಗಳಾದ ಮಣಿಮೇಖಲೈ, ನಿತೇಶ್‌ ರಂಜನ್‌, ರಾಮಸುಬ್ರಹ್ಮಣ್ಯಂ, ಸಂಜಯ್‌ ರುದ್ರ, ಪಂಕಜ್‌ ದ್ವಿವೇದಿ ಹಾಗೂ ಶುಚಿಸ್ಮಿತಾ ರೌಲ್‌ ಎಂಬುವರ ವಿರುದ್ಧ ನೀಡಿದ ದೂರನ್ನು ಆಧರಿಸಿ ಎಫ್ಐಆರ್‌ ಆಗಿದೆ ಎಂದು ಸಿಎಂ ಹೇಳಿದರು.

ಮಧ್ಯಪ್ರವೇಶಿಸಿದ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್‌, ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಮಾತ್ರ ದೂರು ಏಕೆ? ನಿಗಮದ ಅಧಿಕಾರಿಗಳ ವಿರುದ್ಧ ಏಕೆ ದಾಖಲಾಗಲಿಲ್ಲ? ಆತ್ಮಹತ್ಯೆ ಮಾಡಿಕೊಂಡವರ ಮರಣ ಪತ್ರದಲ್ಲಿ ಸಚಿವರ ಹೆಸರಿತ್ತಲ್ಲವೇ? ಅವರ ಹೆಸರೇಕೆ ದೂರಿನಲ್ಲಾಗಲೀ, ಎಫ್ಐಆರ್‌ನಲ್ಲಾಗಲೀ ಬಂದಿಲ್ಲ ಎಂದು ಪ್ರಶ್ನಿಸಿದರು. ಇದರಿಂದ ಅಸಮಾಧಾನಗೊಂಡ ಸಿಎಂ, ನಿಗಮದ ಅಧಿಕಾರಿಗಳಾದ ಜೆ.ಜಿ. ಪದ್ಮನಾಭ, ಪರಶುರಾಮ್‌ ದುರ್ಗಣ್ಣವರ್‌ ಹಾಗೂ ಬ್ಯಾಂಕ್‌ ಅಧಿಕಾರಿ ಶುಚಿಸ್ಮಿತಾ ರೌಲ್‌ ಹೆಸರಿದೆಯೇ ವಿನಾ ಸಚಿವರ ಹೆಸರು ಬರೆದಿಲ್ಲ ಎಂದರು.

ಸದನದಲ್ಲಿ ಏನೇನಾಯಿತು?
-ವಾಲ್ಮೀಕಿ ಹಗರಣ ಚರ್ಚೆ ವೇಳೆ ಸಿಎಂ ವಿರುದ್ಧ ಏಕವಚನದಲ್ಲಿ ಮಾತನಾಡಿದ ಬಿಜೆಪಿ ನಾಯಕ ಅಶ್ವತ್ಥನಾರಾಯಣ
-ವಿಪಕ್ಷಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ರೋಷಾವೇಶ
-ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಉತ್ತರ
-ವಿಪಕ್ಷಗಳಿಂದ ಸಿಎಂ ಭಾಷಣಕ್ಕೆ ಅಡ್ಡಿ, ಕಲಾಪದ ವೇಳೆ ಧರಣಿ
-ವಿಧಾನಸಭಾ ಕಲಾಪ ಶುಕ್ರವಾರಕ್ಕೆ ಮುಂದೂಡಿಕೆ

Advertisement

Udayavani is now on Telegram. Click here to join our channel and stay updated with the latest news.

Next