Advertisement

ಜಿಲ್ಲೆಗೆ ಬೃಹತ್‌ ಉದ್ಯಮ ತರಲು ಯತ್ನ

11:15 AM Oct 20, 2019 | Suhan S |

ಹುಬ್ಬಳ್ಳಿ: ಜಿಲ್ಲೆಗೆ ದೊಡ್ಡ ಉದ್ಯಮಗಳನ್ನು ತರುವ ದಿಸೆಯಲ್ಲಿ ಪ್ರಯತ್ನ ನಡೆದಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ಗೋಕುಲ ರಸ್ತೆಯ ಕೈಗಾರಿಕಾ ವಸಾಹತಿನಲ್ಲಿ ಮೂಲಸೌಕರ್ಯಗಳ ಉನ್ನತೀಕರಣ ಹಾಗೂ ಡಾಂಬರೀಕರಣ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅವಳಿ ನಗರದಲ್ಲಿ ದೊಡ್ಡ ಉದ್ಯಮಗಳು ಆರಂಭಗೊಳ್ಳುವುದು ಅವಶ್ಯಕವಾಗಿದೆ. ಇದರಿಂದ ಉದ್ಯೋಗಾವಕಾಶಗಳ ಸಂಖ್ಯೆ ವೃದ್ಧಿಸಲಿದೆ. ಅಲ್ಲದೇ ದೊಡ್ಡ ಉದ್ಯಮಗಳನ್ನು ಅವಲಂಬಿಸಿ ಸಣ್ಣ ಉದ್ಯಮಗಳಿಗೆ ಕೆಲಸ ಸಿಗುತ್ತದೆ ಎಂದರು.

ಪ್ರಸ್ತುತ ಕೈಗಾರಿಕಾ ವಸಾಹತಿನಲ್ಲಿ ವಿವಿಧ ಯೋಜನೆಗಳಡಿ 40 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಬಹಳ ದಿನಗಳ ಬೇಡಿಕೆ ಈಗ ಈಡೇರುತ್ತಿದೆ. ಉಕ ಸಣ್ಣ ಕೈಗಾರಿಕೆಗಳ ಸಂಘದ ಕಟ್ಟಡದಲ್ಲಿ ಕ್ರೀಡಾ ಸಂಕೀರ್ಣಕ್ಕೆ ಅಗತ್ಯ ಅನುದಾನ ನೀಡಲಾಗುವುದು. ಯಾವುದೇ ಕಾರಣಕ್ಕೂ ಸಿದ್ಧಗೊಂಡ ರಸ್ತೆಗಳನ್ನು ಕಡಿಯಬಾರದು. ಕೇಬಲ್‌, ಒಳಚರಂಡಿಗಾಗಿ ಪ್ರತ್ಯೇಕ ಡೆಕ್‌ ಮಾಡಿಕೊಳ್ಳಬೇಕು ಎಂದು ಹೇಳಿದರು. ದೇಶದ ಜಿಡಿಪಿಯಲ್ಲಿ ಶೇ.29 ಸಣ್ಣ ಕೈಗಾರಿಕೆಗಳ ಕೊಡುಗೆ ಇದ್ದು, ಇದನ್ನು ಶೇ.50ಕ್ಕೆ ಹೆಚ್ಚಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯಾಗಿದೆ. ಈ ದಿಸೆಯಲ್ಲಿ ಕೇಂದ್ರ ಸರಕಾರ ಕಾರ್ಯೋನ್ಮುಖವಾಗಿದೆ. ಕಾರ್ಪೊರೇಟ್‌ ತೆರಿಗೆ ಕಡಿಮೆ ಮಾಡಲಾಗಿದ್ದು, ಪ್ರಸ್ತುತ ನಮ್ಮ ದೇಶದ ಕಾರ್ಪೊರೇಟ್‌ ತೆರಿಗೆ ವಿಶ್ವದಲ್ಲಿಯೇ ಕನಿಷ್ಟ ತೆರಿಗೆಯಾಗಿದೆ ಎಂದರು.

ಸಮಸ್ಯೆ ಪರಿಹಾರಕ್ಕೆ ಯತ್ನ: ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಮಾತನಾಡಿ, ಸಣ್ಣ ಕೈಗಾರಿಕೆಗಳು ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ. ಕೃಷಿ ನಂತರ ಅತ್ಯಧಿಕ ಉದ್ಯೋಗ ನೀಡುವ ಕ್ಷೇತ್ರವೆಂದರೆ ಉದ್ಯಮ ಕ್ಷೇತ್ರ. ಹಂತ ಹಂತವಾಗಿ ಕೈಗಾರಿಕಾ ವಸಾಹತುಗಳ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು. ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಮಾತನಾಡಿ, ವಿಶ್ವದ ಅನೇಕ ದೇಶಗಳಲ್ಲಿ ಆರ್ಥಿಕ ಕುಸಿತ ಕಂಡುಬರುತ್ತಿದೆ. ಚೀನಾದ ಜಿಡಿಪಿ ಕಳೆದ 27 ವರ್ಷಗಳಲ್ಲಿಯೇ ಕನಿಷ್ಟ ಹಂತಕ್ಕೆ ತಲುಪಿದೆ. ರೋಬೊಟಿಕ್ಸ್‌ ಹಾಗೂ ಆಟೋಮೇಶನ್‌ ನಿಂದಾಗಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ. ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿದರೆ ಉದ್ಯೋಗಾವಕಾಶಗಳು ಹೆಚ್ಚುವುದರಲ್ಲಿ ಸಂದೇಹವಿಲ್ಲ ಎಂದು ಅಭಿಪ್ರಾಯಪಟ್ಟರು.

ಎಂ.ಟಿ.ಸಾಗರ ಕೈಗಾರಿಕಾ ವಸಾಹತಿನ ಮಳಿಗೆ ನಿವೇಶನಗಳ 72 ಉದ್ಯಮಿಗಳಿಗೆ ಕ್ರಯಪತ್ರಗಳನ್ನು ವಿತರಿಸಲಾಯಿತು. ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ನೆರೆಪೀಡಿತರಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಸಲು 2,24,002 ರೂ. ಚೆಕ್‌ನ್ನು ಸಚಿವ ಶೆಟ್ಟರಗೆ ನೀಡಲಾಯಿತು.

Advertisement

ಶಾಸಕರಾದ ಅರವಿಂದ ಬೆಲ್ಲದ, ಕುಸುಮಾವತಿ ಶಿವಳ್ಳಿ, ಸಣ್ಣ ಕೈಗಾರಿಕೆ ಸಂಘದ ನಿಂಗಣ್ಣ ಬಿರಾದಾರ, ಆರ್‌. ರಾಜು, ನಾಗರಾಜ ದಿವಟೆ, ಪದ್ಮನಾಭ, ಹನುಮಂತೇಗೌಡ, ಮಹೇಂದ್ರ ಲದ್ದಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next