ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಸಾಹಸದಿಂದ ಕೂಟದಲ್ಲಿ ಆರ್ ಸಿಬಿ ಮತ್ತೊಂದು ವಿಜಯ ಸಾಧಿಸಿದೆ.
ಈ ಬಾರಿಯ ಕೂಟದಲ್ಲಿ ಅದ್ಭುತ ಫಾರ್ಮ್ ನಲ್ಲಿರುವ ದಿನೇಶ್ ಕಾರ್ತಿಕ್ ಶನಿವಾರ ಮತ್ತೊಂದು ನಿರ್ಣಾಯಕ ಇನ್ನಿಂಗ್ ಆಡಿದರು. ಕೇವಲ 34 ಎಸೆತ ಎದುರಿಸಿದ ಕಾರ್ತಿಕ್ ಅಜೇಯ 66 ರನ್ ಗಳಿಸಿದರು. ಅದರಲ್ಲೂ ಮುಸ್ತಿಫಿಜುರ್ ರಹಮಾನ್ ಓವರ್ ನಲ್ಲಿ 28 ರನ್ ಚಚ್ಚಿದ ಡಿಕೆ ತಂಡ ಉತ್ತಮ ಮೊತ್ತ ಪೇರಿಸುವಲ್ಲಿ ಸಹಕಾರಿಯಾದರು. ನಿರೀಕ್ಷೆಯಂತೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡಾ ಕಾರ್ತಿಕ್ ಗೆ ಒಲಿಯಿತು.
ನಂತರ ಮಾತನಾಡಿದ ದಿನೇಶ್ ಕಾರ್ತಿಕ್, “ನನಗೆ ದೊಡ್ಡ ಗುರಿ ಇದೆ ಎಂದು ಒಪ್ಪಿಕೊಳ್ಳಬೇಕು. ನಾನು ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ. ದೇಶಕ್ಕಾಗಿ ಏನಾದರೂ ವಿಶೇಷವಾದದ್ದನ್ನು ಮಾಡಬೇಕೆಂಬುದು ನನ್ನ ಗುರಿಯಾಗಿದೆ. ನಾನು ಭಾರತ ತಂಡದ ಭಾಗವಾಗಲು ಎಲ್ಲವನ್ನೂ ಪ್ರಯತ್ನಿಸುತ್ತಿದ್ದೇನೆ” ಎಂದರು.
ಇದನ್ನೂ ಓದಿ:1.19 ಕೋಟಿ ರೂ. “ಇ-ಕಾರು’ ಕೊಂಡ ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್ ಮಹೇಶ್ ಬಾಬು
2004ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿರುವ ದಿನೇಶ್ ಕಾರ್ತಿಕ್ ಸದ್ಯ ಟೀಂ ಇಂಡಿಯಾದ ಖಾಯಂ ಸದಸ್ಯನಾಗಿಲ್ಲ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಲ್ಲಿ ಆಡಲು ದಿನೇಶ್ ಕಾರ್ತಿಕ್ ಬಯಸುತ್ತಿದ್ದಾರೆ
ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಐದು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಏಳು ವಿಕೆಟ್ ಕಳೆದುಕೊಂಡು 173 ರನ್ ಮಾತ್ರ ಗಳಿಸಿತು. ಇದರಿಂದ ಆರ್ ಸಿಬಿ 16 ರನ್ ಅಂತರದಿಂದ ಜಯ ಸಾಧಿಸಿತು.