ಸಿಂದಗಿ: ಬಾಲ್ಯವಿವಾಹ ತಡೆಗಟ್ಟಲು ನಾವೆಲ್ಲರೂ ಕಾರ್ಯ ಪ್ರವೃತ್ತರಾಗೋಣ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಿರ್ಮಲಾ ಸುರಪುರ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಮ್ಮಿಕೊಂಡಿದ್ದ ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಹಾಗೂ ಬಾಲ್ಯವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಅಧಿನಿಯಮ-2016 ಹಾಗೂ ಬಾಲ್ಯವಿವಾಹ ನಿಷೇಧ (ಕರ್ನಾಟಕ) ನಿಯಮಗಳು-2014ರ ಕುರಿತು ತಾಲೂಕು ಮಟ್ಟದ ಬಾಲ್ಯವಿವಾಹ ನಿಷೇಧಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಬಾಲ್ಯವಿವಾಹ ನೆರವೇರಿಸುವುದು, ನಡೆಸುವುದು, ನಿರ್ದೇಶಿಸುವ ಅಥವಾ ಪ್ರೇರೆಪಿಸುವುದು ಅಪರಾಧವಾಗಿದೆ. ಬಾಲ್ಯವಿವಾಹಕ್ಕೆ ಒಳಪಟ್ಟರೆ ಮಗುವಿನ ಹೊಣೆ ಹೊತ್ತಿರುವ ಯಾವುದೇ ವ್ಯಕ್ತಿ, ತಂದೆ-ತಾಯಿಯಾಗಲಿ, ಪೋಷಕರಾಗಲಿ ಅಥವಾ ಯಾವುದೇ ವ್ಯಕ್ತಿಯಾಗಲಿ, ಇತರ ಯಾವುದೇ ಸಾಮರ್ಥ್ಯದಲ್ಲಿ ಕಾನೂನು ಬದ್ಧವಾಗಿಯಾಗಲಿ, ಕಾನೂನಿಗೆ ವಿರುದ್ಧವಾಗಲಿ, ಮಗುವಿನ ಹೊಣೆ ಹೊಂದಿರುವ ಯಾವುದೇ ಸಂಸ್ಥೆಯಾಗಿರಲಿ ಅಥವಾ ಸಂಘಟನೆಯಾಗಿರಲಿ ಬಾಲ್ಯವಿವಾಹಕ್ಕೆ ಉತ್ತೇಜನ ನೀಡುವುದು ಅಪರಾಧ. ಬಾಲ್ಯವಿವಾಹದಲ್ಲಿ ಭಾಗವಹಿಸುವುದು ಒಳಗೊಂಡಂತೆ ನೆರವೇರುವುದನ್ನು ತಡೆಯಲು ನಿರ್ಲಕ್ಷ್ಯ ತೋರುವವರು ಅಪರಾಧಿಗಳಾಗುತ್ತಾರೆ. ಇಂಥ ಅಪರಾಗಳಿಗೆ 2 ವರ್ಷದವರೆಗೆ ವಿಸ್ತರಿಸಬಹುದಾದ ಕಠಿಣ ಕಾರಾಗೃಹ ಶಿಕ್ಷೆ ಅಥವಾ ಒಂದು ಲಕ್ಷ ರೂ.ವರೆಗೆ ಅಥವಾ ಎರಡನ್ನೂ ವಿಧಿಸಬಹುದಾಗಿದೆ ಎಂದು ಹೇಳಿದರು.
ಬಾಲ್ಯವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಅಧಿನಿಯಮ -2016ರ ಕಲಂ 15(ಎ) ಪ್ರಕಾರ ಪ್ರತಿಯೊಬ್ಬ ಪೊಲೀಸ್ ಅಧಿಕಾರಿ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಬಾಲ್ಯವಿವಾಹ ನಡೆದಲ್ಲಿ ಅಧಿನಿಯಮದಡಿ ತಾವಾಗಿಯೇ ಕ್ರಮ ತೆಗೆದುಕೊಳ್ಳಬೇಕು. ತಾಲೂಕು ಮಟ್ಟದ ಬಾಲ್ಯವಿವಾಹ ನಿಷೇಧಾಧಿಕಾರಿಗಳು ಸೇರಿದಂತೆ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಬಾಲ್ಯವಿವಾಹ ತಡೆಗಟ್ಟಲು ಕಂಕಣಬದ್ಧರಾಗಿ ನಿಲ್ಲಬೇಕಿದೆ ಎಂದರು.
ಮಕ್ಕಳ ಸಹಾಯವಾಣಿ ಜಿಲ್ಲಾ ಸಂಚಾಲಕಿ ಸುನಂದಾ ತೋಳಬಂದಿ, ತಹಶೀಲ್ದಾರ್ ಬಸವರಾಜ ಕಡಕಬಾವಿ, ಸಿಡಿಪಿಒ ಜಿ.ಎಸ್. ಗುಣಾರಿ, ಶಿಕ್ಷಣ ಸಂಯೋಜಕ ಆನಂದ ಮಾಡಗಿ ಅವರು ಬಾಲ್ಯವಿವಾಹ ತಡೆಗಟ್ಟುವ ಕುರಿತು ಮಾತನಾಡಿದರು. ತಾಲೂಕು ಮಟ್ಟದ ಬಾಲ್ಯವಿವಾಹ ನಿಷೇಧಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.