ಬೆಂಗಳೂರು: ಒಂಟಿ ಮಹಿಳೆಯನ್ನು ಗುರಿಯಾಗಿಸಿಕೊಂಡು ದರೋಡೆ ನಡೆಸುವ ಮತ್ತೂಂದು ಪ್ರಯತ್ನ ನಗರದಲ್ಲಿ ನಡೆದಿದ್ದು, ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಯಲ್ಲಿದ್ದ ವೃದ್ಧೆಯೊಬ್ಬರ ಚಿನ್ನದ ಸರ ಕಸಿದುಕೊಂಡ ಇಬ್ಬರು ಕಳ್ಳರು ಕುತ್ತಿಗೆಗೆ ಚಾಕು ಇರಿದು ಕೊಲೆಗೆ ಯತ್ನಿಸಿದ್ದಾರೆ.
ಪಟ್ಟೆಗಾರ ಪಾಳ್ಯದ ಉದ್ಭವ ಗಣಪತಿ ದೇವಾಲಯದ ಬಳಿ ಸೋಮವಾರ ಮಧ್ಯಾಹ್ನ ಘಟನೆ ನಡೆದಿದ್ದು, ಗಾಯಾಳು ಲಕ್ಷ್ಮೀದೇವಮ್ಮ (62) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಧ್ಯಾಹ್ನ ಹೆಲ್ಮೆಟ್ ಧರಿಸಿ ಮನೆಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ಷ್ಮೀದೇವಮ್ಮ ಅವರು ಪಟ್ಟೆಗಾರ ಪಾಳ್ಯದ ಉದ್ಭವ ಗಣಪತಿ ದೇವಾಲಯದ ಬಳಿ ಸ್ವಂತ ಕಟ್ಟಡ ಹೊಂದಿದ್ದು, ನೆಲ ಮಹಡಿಯಲ್ಲಿ ಆರು ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ನೀಡಿದ್ದಾರೆ. ಪತಿ ಎಂಟು ತಿಂಗಳ ಹಿಂದೆ ನಿಧನರಾಗಿದ್ದು, ಮೊಮ್ಮಗ ವಿನಯ್ ಜತೆ ಮೊದಲ ಮಹಡಿಯಲ್ಲಿರುವ ಮನೆಯಲ್ಲಿ ವಾಸವಿದ್ದಾರೆ.
ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೆಲ್ಮೆಟ್ ಧರಿಸಿಕೊಂಡು ಮನೆಗೆ ನುಗ್ಗಿದ ದುಷ್ಕರ್ಮಿಗಳು, ಪರಿಚಿತರಂತೆ ಮಾತನಾಡಿಸಿ ಬಾಗಿಲು ತೆಗೆಯುವಂತೆ ಲಕ್ಷ್ಮೀದೇವಮ್ಮ ಅವರನ್ನು ಕೋರಿದ್ದಾರೆ. ಅದರಂತೆ ಅವರು ಬಾಗಿಲು ತೆಗೆದಾಗ ಒಳನುಗ್ಗಿ, ಕತ್ತಿನಲ್ಲಿದ್ದ ಚಿನ್ನದ ಸರ ಕಸಿದುಕೊಳ್ಳಲು ಯತ್ನಿಸಿದ್ದು, ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಲಕ್ಷ್ಮೀದೇವಮ್ಮ ಅವರ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದು ಕೆಳಗೆ ತಳ್ಳಿ ಸರದೊಂದಿಗೆ ಪರಾರಿಯಾಗಿದ್ದಾರೆ.
ಘಟನೆ ವೇಳೆ ಮೊಮ್ಮಗ ವಿನಯ್ ಕಾಲೇಜಿಗೆ ಹೋಗಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳು ಬಂದ ರಸ್ತೆಗಳಲ್ಲಿರುವ ಎಲ್ಲ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದೆ. ಪರಿಚಯಸ್ಥರೇ ಕೃತ್ಯವೆಸಗಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.