ಚಿತ್ರದುರ್ಗ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದೃಢ ಸರ್ಕಾರ ರಚನೆಗೆ ಎಲ್ಲಾ ಮತದಾರರು ಸಕ್ರಿಯವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ವಿ. ಜ್ಯೋತ್ಸ್ನಾ ಕರೆ ನೀಡಿದರು.
ನಗರದ ಜೋಗಿಮಟ್ಟಿ ರಸ್ತೆಯ ಕರುವಿನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾನುವಾರ ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯ ಅರ್ಜಿ ಸ್ವೀಕರಿಸಿ ಹೊಸ ಮತದಾರರಿಗೆ ಮತದಾರರ ಗುರುತಿನ ಚೀಟಿ ವಿತರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಹಿಂದಿನ ಚುನಾವಣೆಯಲ್ಲಿ ಸಾವಿರ ಪುರುಷ ಮತದಾರರಿಗೆ 954 ಮಹಿಳಾ ಮತದಾರರಿದ್ದಾರೆ. ಮಹಿಳೆಯರು ಕಡಿಮೆ ಮತ ಚಲಾಯಿಸಿರುವುದು ಕಂಡುಬಂದಿದೆ. ಅದನ್ನು ಮನಗಂಡು ಜಿಲ್ಲಾಡಳಿತ ಅರ್ಹ ಮಹಿಳಾ ಮತದಾರರ ನೋಂದಣಿಗೆ ಅಭಿಯಾನ ಕೈಗೊಂಡು 980 ಮಹಿಳಾ ಮತದಾರರನ್ನು ನೋಂದಾಯಿಸಿದೆ. ಇದುವರೆಗೆ ಶೇ. 80 ರಷ್ಟು ಪ್ರಗತಿ ಸಾ ಧಿಸಲಾಗಿದೆ ಎಂದರು.
18 ವರ್ಷ ತುಂಬಿದ ಎಲ್ಲ ಯುವಕ-ಯವತಿಯರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಇದೇ ತಿಂಗಳ 14 ರವರೆಗೆ ಕಾಲಾವಕಾಶವಿದೆ. ವಯಸ್ಸಿನ ದೃಢೀಕರಣ, ವಾಸಸ್ಥಳದ ದಾಖಲೆ, ಪಾಸ್‌ಫೋಟ್ ಅಳತೆಯ ಎರಡು ಭಾವಚಿತ್ರಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಕುಟುಂಬದ ಸದಸ್ಯರು, ನೆರೆಹೊರೆಯವರು, ಸ್ನೇಹಿತರ ಹೆಸರು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಹೆಸರು ನೋಂದಾಯಿಸಲು ತಿಳಿವಳಿಕೆ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಪಿ.ಎನ್ ರವೀಂದ್ರ ಮಾತನಾಡಿ, ಜಿಲ್ಲೆಯ ಎಲ್ಲ ಮತದಾನ ಕೇಂದ್ರಗಳಲ್ಲಿ ಮಿಂಚಿನ ನೋಂದಣಿ ಅಭಿಯಾನದಡಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು, ತಿದ್ದುಪಡಿಗೆ, ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಡಲು ಹಾಗೂ ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗಿದೆ.
ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ಮಿಂಚಿನ ನೋಂದಣಿ ಕಾರ್ಯಕ್ರಮದಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ನೀಡಬೇಕು. ಏ. 14 ರವರೆಗೆ ಆಯಾ ತಾಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಚುನಾವಣಾ ಶಾಖೆಗೆ ನೀಡುವಂತೆ ಸೂಚಿಸಿದರು.
ಮೇ 12 ರಂದು ಮತದಾನ ನಡೆಯಲಿದ್ದು ಎಲ್ಲರೂ ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು. “ನಾನು ವೋಟ್ ಮಾಡ್ತಿನಿ ನೀವೂ ವೋಟ್ ಮಾಡಿ’ ಎಂದು ಜಾಗೃತಿ ಮೂಡಿಸಬೇಕು ಎಂದರು. ಉಪವಿಭಾಗಾಧಿಕಾರಿ ಜವರೇಗೌಡ ಮಾತನಾಡಿದರು. ತಹಶೀಲ್ದಾರ್ ಮೋಹನ್‌ಕುಮಾರ್, ನಗರದಸಭೆ ಪೌರಾಯುಕ್ತ ನಲವಡಿ, ಜಿಲ್ಲಾ ವಾರ್ತಾಧಿಕಾರಿ ಬಿ. ಧನಂಜಯಪ್ಪ ಇದ್ದರು.