ಬೆಂಗಳೂರು: ಅಖೀಲ ಭಾರತ ವೀರಶೈವ ಮಹಾಸಭೆಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ಐಪಿಎಸ್ ಹೆಸರು ಕೇಳಿ ಬರುತ್ತಿದೆ. ಹಾಲಿ ರಾಜ್ಯಾಧ್ಯಕ್ಷರಾಗಿರುವ ಎನ್.ತಿಪ್ಪಣ್ಣ ಅವರ ಬದಲು ಶಂಕರ ಬಿದರಿಯವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕೆಂದು ವೀರಶೈವ ಲಿಂಗಾಯತ ಸಮುದಾಯದ ಯುವ ಘಕಟದ ಮುಖಂಡರು ಪ್ರಯತ್ನ ನಡೆಸಿದ್ದಾರೆ. ಯುವಕರ ಈ ಪ್ರಯತ್ನ ಎರಡೂ ಬಣಗಳ ನಡುವೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಈಗಾಗಲೇ ವೀರಶೈವ ಮಹಾಸಭೆಯ ತಾಲೂಕು, ಜಿಲ್ಲಾ ಹಾಗೂ ಮಹಾನಗರ ಪಾಲಿಕೆಗಳ ಮೊದಲ ಹಂತದ ಚುನಾವಣೆ ನಡೆದಿದ್ದು, ಫೆ 15 ರಿಂದ ರಾಜ್ಯಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದ್ದು, ಮಾ. 3ಕ್ಕೆ ರಾಜ್ಯಾಧ್ಯಕ್ಷರ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ಯುವ ಮುಖಂಡರು ಶಂಕರ ಬಿದರಿ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಸಮಾಜದ ಒಗ್ಗಟ್ಟು ಕಾಯ್ದುಕೊಳ್ಳಲು ಹಾಗೂ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಮಹಾಸಭೆಯ ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಒಗ್ಗೂಡಿಸುವ ಕಸರತ್ತು: ವೀರಶೈವ ಲಿಂಗಾಯತ ಸಮುದಾಯ ಪ್ರತ್ಯೇಕ ಧರ್ಮಕ್ಕಾಗಿ ಇಬ್ಭಾಗವಾಗಿರುವುದರಿಂದ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಸಮುದಾಯದ ನಾಯಕರಿಗೆ ಗೌರವ ಸಿಗದಂತಾಗಿದೆ.
ಅಲ್ಲದೇ ಸರ್ಕಾರದ ಮಟ್ಟದಲ್ಲಿ ರಾಜ್ಯಕೀಯ ಪ್ರಾತಿನಿಧ್ಯಕ್ಕೆ ಹಿನ್ನಡೆಯಾಗುತ್ತಿದೆ. ಹೀಗಾಗಿ ಎರಡೂ ಬಣಗಳನ್ನು ಒಗ್ಗೂಡಿಸಲು ಬಿದರಿ ಅವರಿಂದ ಸಾಧ್ಯವಾಗುತ್ತದೆ ಎನ್ನುವ ಕಾರಣಕ್ಕೆ ಅವರನ್ನು ಮಹಾಸಭೆಯ ಜವಾಬ್ದಾರಿ ವಹಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಗೃಹ ಸಚಿವ ಎಂ.ಬಿ.ಪಾಟೀಲ್ ಹಾಗೂ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರೊಂದಿಗೂ ಶಂಕರ ಬಿದರಿ ಉತ್ತಮ ಸಂಬಂಧ ಹೊಂದಿದ್ದು, ಅವರ ಮೂಲಕ ಎರಡೂ ಬಣಗಳನ್ನು ಒಗ್ಗೂಡಿಸುವ ಯತ್ನಕ್ಕೆ ಕೈ ಹಾಕಲಾಗಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಹಾಲಿ ರಾಜ್ಯಾಧ್ಯಕ್ಷ ಎನ್. ತಿಪ್ಪಣ್ಣ ಹಾಗೂ ರಾಷ್ಟ್ರೀಯ ಅಧ್ಯಕ್ಷರಾಗಿ ಶಾಮನೂರು ಶಿವಶಂಕರಪ್ಪ ಅವರನ್ನು ಮುಂದುವರೆಸಲು ಮಹಾಸಭೆಯ ಒಂದು ಬಣ ತೀರ್ಮಾನಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಶಂಕರ ಬಿದರಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಪ್ಪುವುದು ಅನುಮಾನ ಎನ್ನಲಾಗಿದೆ.
ಶಾಮನೂರು ಮನವೊಲಿಸಲು ಯತ್ನ
ಅಖೀಲ ಭಾರತ ಮಹಾಸಭೆಗೆ ಚೈತನ್ಯ ತುಂಬಲು ಶಂಕರ ಬಿದರಿಯವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂದು ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೂ ಮನವಿ ಸಲ್ಲಿಸಲು ಯುವ ಘಟಕದ ರಾಜ್ಯಾಧ್ಯಕ್ಷ ಉಮೇಶ್ ಪಾಟೀಲ್ ನೇತೃತ್ವದ ಯುವಕರ ತಂಡ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಶಾಮನೂರು ಅವರು, ಬಿದರಿ ಪ್ರವೇಶಕ್ಕೆ ಅವಕಾಶ ನೀಡುತ್ತಾರಾ ಎನ್ನುವುದು ವೀರಶೈವ ಲಿಂಗಾಯತ ಸಮುದಾಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.