ಕ್ರಾಂತಿಕಾರಿ ಎನ್ನಬಹುದಾದ ಹೆಜ್ಜೆಯಿಡದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸದ್ಯಕ್ಕೆ ಅಲ್ಲಿಂದಲ್ಲಿಗೆ ಪರಿಸ್ಥಿತಿಯನ್ನು ಸಮತೋಲಿಸಲು ಪ್ರಯತ್ನಿಸಿದೆ.
ಹಣದುಬ್ಬರ ದಾಖಲೆ ಹಂತಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿದರವನ್ನು ಇಳಿಸಬಹುದು ಎಂಬ ನಿರೀಕ್ಷೆ ನಿಜವಾಗಿದೆ. ಬುಧವಾರ ಪ್ರಕಟಿಸಿದ ಆರ್‌ಬಿಐ ನೀತಿಯಲ್ಲಿ ಸಾಲಗಳ ಮೇಲಿನ ಬಡ್ಡಿದರವನ್ನು ಶೇ. 0.25 ಇಳಿಸಲಾಗಿದೆ. ಇದರೊಂದಿಗೆ ರಿವರ್ಸ್ ರೆಪೋ ದರ ಆರು ವರ್ಷಗಳ ಹಿಂದಿನ ಮಟ್ಟಕ್ಕೆ ಬಂದಂತಾಗಿದೆ. ಹಣದುಬ್ಬರ ಇಳಿಕೆಯಾಗಿರುವುದರ ಜತೆಗೆ ಮೇ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆಯಲ್ಲಿ ಶೇ. 1.7 ಕುಸಿತವಾಗಿರುವುದು ಮತ್ತು ಆಹಾರ ಹಣದುಬ್ಬರ ಇಳಿದಿರುವುದು ಆರ್‌ಬಿಐ ಬಡ್ಡಿ ದರ ಇಳಿಸಲು ಕಾರಣವಾಗಿರುವ ಇನ್ನೊಂದು ಮುಖ್ಯ ಅಂಶ. ಕಳೆದ ವರ್ಷ ಜುಲೈಯಲ್ಲಿ ಶೇ. 8.35 ಇದ್ದ ಆಹಾರ ಹಣದುಬ್ಬರ ಕಳೆದ ಜೂನ್‌ನಲ್ಲಿ -2.12ಕ್ಕಿಳಿದಿತ್ತು. ಹಣದುಬ್ಬರ ಇಳಿಕೆಯ ಲಾಭವನ್ನು ಜನರಿಗೆ ವರ್ಗಾಯಿಸಲು ಬಯಸಿದ್ದ ಸರಕಾರ ಆರ್‌ಬಿಐ ಮೇಲೆ ಭಾರೀ ಒತ್ತಡ ಹಾಕಿತ್ತು. ಹೀಗಾಗಿ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಮುಖ್ಯಸ್ಥರಾಗಿರುವ ಹಣಕಾಸು ನೀತಿ ಸಮಿತಿ ಅನಿವಾರ್ಯವಾಗಿ ಬಡ್ಡಿದರ ಕಡಿಮೆ ಮಾಡಿದೆ. ಇದರಿಂದಾಗಿ ಗೃಹ, ವಾಹನ, ಶಿಕ್ಷಣ ಮತ್ತು ಕಾರ್ಪೋರೇಟ್ ಸಾಲಗಳ ಮàಲಿನ ಬಡ್ಡಿದರ ಕಡಿಮೆಯಾಗಲಿದೆ.
ಕೇಂದ್ರ ಸರಕಾರ ನೇಮಿಸಿದ ಹಣಕಾಸು ನೀತಿ ಸಮಿತಿ ಅಸ್ತಿತ್ವಕ್ಕೆ ಬಂದ ಬಳಿಕ ಮತ್ತು ಸರಕು ಮತ್ತು ಸೇವಾ ತೆರಿಗೆ ಜಾರಿಯಾದ ಅನಂತರ ನಡೆದ ಆರ್‌ಬಿಐಯ ಮೊದಲ ತ್ತೈಮಾಸಿಕ ಸಭೆ ಎಂಬ ಕಾರಣಕ್ಕೂ ನಿನ್ನೆ ನಡೆದ ಸಭೆ ಮುಖ್ಯವಾಗಿತ್ತು. ಹೊಸ ಆರ್ಥಿಕತೆಯ ಹೊಸ್ತಿಲಲ್ಲಿರುವ ದೇಶದಲ್ಲಿ ಹಣಕಾಸು ನೀತಿಯ ಶಿಸ್ತನ್ನು ಪಾಲಿಸಲು ಆರ್‌ಬಿಐ ಯಾವ ಕ್ರಮ ಕೈಗೊಳ್ಳಲಿದೆ ಎಂಬ ಕುತೂಹಲವಿತ್ತು. ಆದರೆ ಈ ನಿಟ್ಟಿನಲ್ಲಿ ಕ್ರಾಂತಿಕಾರಿ ಎನ್ನಬಹುದಾದ ಹೆಜ್ಜೆಯಿಡದ ಆರ್‌ಬಿಐ ಸದ್ಯಕ್ಕೆ ಅಲ್ಲಿಂದಲ್ಲಿಗೆ ಪರಿಸ್ಥಿತಿಯನ್ನು ಸಮತೋಲಿಸಲು ಪ್ರಯತ್ನಿಸಿದೆ. ಕಳೆದ ತ್ತೈಮಾಸಿಕದಲ್ಲಿಯೇ ಬಡ್ಡಿ ದರ ಇಳಿಸಲು ಆರ್‌ಬಿಐ ಮೇಲೆ ಒತ್ತಡವಿತ್ತು. ಆದರೆ ಈ ನಡುವೆ ಜಿಎಸ್‌ಟಿ ಜಾರಿಯಾಗಲಿರುವುದರಿಂದ ಹಣದುಬ್ಬರದ ನೆಪಹೇಳಿ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿಡಲಾಗಿತ್ತು. ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಿದ್ದರೂ ಜಿಡಿಪಿ ಗುರಿ ಸಾಧನೆಗೆ ಯಾವುದೇ ಅಡ್ಡಿ ಎದುರಾಗುವುದಿಲ್ಲ. ಶೇ. 7.3ರ ಜಿಡಿಪಿ ಅಭಿವೃದ್ಧಿ ದರದ ಗುರಿಯನ್ನು ಇಟ್ಟುಕೊಂಡೇ ಬಡ್ಡಿಯ ಮೂಲದರವನ್ನು ತುಸು ಪರಿಷ್ಕರಿಸಲಾಗಿದೆ ಎಂದು ಊರ್ಜಿತ್ ಪಟೇಲ್ ಹೊಸ ನೀತಿಯ ಹಿಂದಿನ ತರ್ಕವನ್ನು ವಿವರಿಸಿದ್ದಾರೆ. ಹಾಗೆಂದು ಮುಂದಿನ ದಿನಗಳಲ್ಲಿ ಇದೇ ಮಾದರಿ ಇಳಿಕೆಯಾಗುವ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಆಹಾರ ವಸ್ತುಗಳ ಬೆಲೆ ಹೆಚ್ಚಿದರೆ, ಜಾಗತಿಕ ಹಣಕಾಸು ವ್ಯವಸ್ಥೆ ಇನ್ನಷ್ಟು ಬಿಗಿಯಾದರೆ ಮತ್ತು ಎನ್‌ಪಿಎ ಹೆಚ್ಚುತ್ತಾ ಹೋದರೆ ಮತ್ತೆ ಆರ್‌ಬಿಐ ಕಠಿಣ ನಿಲುವು ಅನುಸರಿಸುವ ಸಾಧ್ಯತೆಯೂ ಇದೆ ಎಂದು ಇದೇ ವೇಳೆ ಎಚ್ಚರಿಸಿರುವುದು ಗಮನಾರ್ಹ. ಮಳೆಯೂ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಅಂಶಗಳಲ್ಲಿ ಒಂದು.
ಈ ಸಲ ಉತ್ತರ ಭಾರತದಲ್ಲಿ ಅತಿವೃಷ್ಠಿಯಾಗಿದ್ದರೆ ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿ ಅನಾವೃಷ್ಟಿಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಕೃಷಿ ಇಳುವರಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಇದಕ್ಕೆ ಆರ್‌ಬಿಐ ಈಗಿಂದಲೇ ತಯಾರಿ ಮಾಡಿಕೊಳ್ಳುತ್ತಿದೆ. ಸಾಮಾನ್ಯವಾಗಿ ಆರ್‌ಬಿಐ ರಿವರ್ಸ್ ರೆಪೊ ದರ ಇಳಿಸಿದ ಕೂಡಲೇ ಬ್ಯಾಂಕ್‌ಗಳು ಬಡ್ಡಿದರ ಇಳಿಕೆ ಘೋಷಣೆ ಮಾಡುವುದು ವಾಡಿಕೆ. ಆದರೆ ಈ ಸಲ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳು ಅಂತಹ ಉತ್ಸಾಹವನ್ನು ತೋರಿಸಿಲ್ಲ. ಸಾಲಮನ್ನಾ ಮತ್ತು ಕೈಗಾರಿಕೋದ್ಯಮಗಳ ಸುಸ್ತಿ ಸಾಲದ ಹೊರೆಯಿಂದಾಗಿ ಹೆಚ್ಚುತ್ತಿರುವ ಎನ್‌ಪಿಎಯೇ ಬ್ಯಾಂಕ್‌ಗಳು ಬಡ್ಡಿದರ ಇಳಿಸಲು ನಿರುತ್ಸಾಹ ತೋರಿಸುತ್ತಿರುವುದಕ್ಕೆ ಕಾರಣ ಎನ್ನಲಾಗಿದೆ. ಆರ್ಥಿಕತೆಯ ಆರೋಗ್ಯದ ದೃಷ್ಟಿಯಿಂದ ಈ ಎರಡು ವಿಚಾರಗಳನ್ನು ನಿಭಾಯಿಸಲು ದೃಢ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ.
ಆದರೆ ಈ ನೆಪವೊಡ್ಡಿ ಜನ ಸಾಮಾನ್ಯರಿಗೆ ಸಿಗಬೇಕಾದ ಲಾಭವನ್ನು ತಡೆಯುವುದು ಸರಿಯಲ್ಲ. ಆರ್‌ಬಿಐ ನೀತಿಗನುಗುಣವಾಗಿ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿದರವನ್ನು ಇಳಿಸಬೇಕು.