Advertisement

Special Food ಮನೆಯಲ್ಲೊಮ್ಮೆ ಈ ರೆಸಿಪಿ ಟ್ರೈ ಮಾಡಿ ನೋಡಿ… ಟೇಸ್ಟ್ ಹೇಗಿದೆ ಹೇಳಿ

06:31 PM Sep 13, 2024 | ಶ್ರೀರಾಮ್ ನಾಯಕ್ |

ಜೋಳ(Corn) ಎಂದಾಕ್ಷಣ ನೆನಪಿಗೆ ಬರುವುದೇ ಉತ್ತರ ಕರ್ನಾಟಕ (Uttara Karnataka) ಯಾಕೆಂದರೆ ಅಲ್ಲಿನ ಜನರು ಜೋಳವನ್ನು ಬೆಳೆಸಿ, ನಿತ್ಯದ ಆಹಾರದಲ್ಲಿ ಉಪಯೋಗಿಸುತ್ತಾರೆ. ಆದರೆ ಈಗ ಉತ್ತರ ಕರ್ನಾಟಕ ಮಾತ್ರವಲ್ಲ ಬೇರೆ ಕಡೆಯಲ್ಲೂ ಬೆಳೆಸುವುದರಿಂದ ಅಡುಗೆ ಮನೆಗೂ ಇದು ಲಗ್ಗೆ ಇಟ್ಟಿದೆ. ಹೌದು ಯಾಕೆಂದರೆ ಆರೋಗ್ಯದ ದೃಷ್ಟಿಯಲ್ಲಿ ಜೋಳ ಉತ್ತಮ ಸಿರಿಧಾನ್ಯವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಅಡುಗೆಯಲ್ಲೂ ತನ್ನ ಛಾಪೂ ಮೂಡಿಸಿದೆ.

Advertisement

ಜೋಳದಿಂದಲೂ ವಿಭಿನ್ನ ರೀತಿಯ ಖಾದ್ಯಗಳನ್ನು ತಯಾರಿಸಬಹುದು ಅಲ್ಲದೆ ಶುಭ ಸಮಾರಂಭಗಳಲ್ಲೂ ಇದನ್ನು ಬಳಸುತ್ತಾರೆ. ಹಾಗೆಯೇ ನಾವಿಂದು ಜೋಳದಿಂದ ತಯಾರಿಸಲಾಗುವ ಎರಡು ಖಾದ್ಯಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ ನೀವೂ ಮನೆಯಲ್ಲಿ ಇದನ್ನು ಟ್ರೈ ಮಾಡಬಹುದು, ಬನ್ನಿ ಹಾಗಾದರೆ ಜೋಳದಿಂದ ತಯಾರಿಸಬಹುದಾದ ಸಲಾಡ್ ಮತ್ತು ಉಸ್ಲಿ ಹೇಗೆ ತಯಾರಿಸುವುದೆಂದು ತಿಳಿದುಕೊಂಡು ಬರೋಣ…

ಜೋಳದ ಸಲಾಡ್‌(ಕೋಸಂಬರಿ)(Corn Salad/Kosambari)
ಬೇಕಾಗುವ ಸಾಮಗ್ರಿಗಳು
ಜೋಳ-1ಕಪ್‌, ಟೊಮ್ಯಾಟೋ-1, ಕ್ಯಾಪ್ಸಿಕಂ(ಸಣ್ಣದು)-1, ಮುಳ್ಳುಸೌತೆ(ಸಣ್ಣಗೆ ಹೆಚ್ಚಿದ್ದು)-4ಚಮಚ, ಈರುಳ್ಳಿ(ಸಣ್ಣಗೆ ಹೆಚ್ಚಿದ್ದು)-2,  ಕ್ಯಾರೆಟ್‌(ತುರಿದ)-1, ಖಾರದ ಪುಡಿ(ಮೆಣಸಿನ ಪುಡಿ)-2ಚಮಚ, ಪೆಪ್ಪರ್‌ ಪುಡಿ-ಅರ್ಧ ಟೀಸ್ಪೂನ್‌, ಜೀರಿಗೆ ಪುಡಿ-ಚಾಟ್‌ ಮಸಾಲ-ಅರ್ಧ ಟೀಸ್ಪೂನ್‌, ಲಿಂಬೆರಸ-1ಚಮಚ, ಕೊತ್ತಂಬರಿ ಸೊಪ್ಪು-ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಮೊದಲಿಗೆ ಜೋಳವನ್ನು ಮೃದುವಾಗುವವರೆಗೆ ಚೆನ್ನಾಗಿ ಬೇಯಿಸಿಕೊಳ್ಳಿ. ಬಳಿಕ ನೀರನ್ನು ಸೋಸಿ ಅದನ್ನು ತಣ್ಣಗಾಗಲು ಬಿಡಿ. ನಂತರ ಬೇಯಿಸಿದ ಜೋಳವನ್ನು ಒಂದು ಬೌಲ್‌ ಗೆ ಹಾಕಿ ಅದಕ್ಕೆ ಸಣ್ಣಗೆ ಹೆಚ್ಚಿದ ಟೊಮ್ಯಾಟೋ, ಕ್ಯಾಪ್ಸಿಕಂ, ಮುಳ್ಳುಸೌತೆ, ಈರುಳ್ಳಿ ಮತ್ತು ತುರಿದಿಟ್ಟ ಕ್ಯಾರೆಟ್‌ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ತದನಂತರ ಮೆಣಸಿನ ಪುಡಿ, ಪೆಪ್ಪರ್‌, ಜೀರಿಗೆ ಪುಡಿ, ಚಾಟ್‌ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಲಿಂಬೆರಸವನ್ನು ಹಾಕಿ ಪುನಃ ಮಿಶ್ರಣ ಮಾಡಿ ಕೊನೆಗೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿದರೆ ಆರೋಗ್ಯಕರವಾದ ಜೋಳದ ಸಲಾಡ್‌ ಸವಿಯಲು ಸಿದ್ಧ.

ಜೋಳದ ಉಸ್ಲಿ(Sweet Corn usli)
ಬೇಕಾಗುವ ಸಾಮಗ್ರಿಗಳು
ಜೋಳ-2ಕಪ್‌(ಬೇಯಿಸಿದ್ದು), ಈರುಳ್ಳಿ-(ಸಣ್ಣಗೆ ಹೆಚ್ಚಿದ್ದು)-2, ಒಣಮೆಣಸು-3, ಹಸಿಮೆಣಸು-2, ಸಾಸಿವೆ-1ಚಮಚ, ತೆಂಗಿನೆಣ್ಣೆ -3ಚಮಚ, ಅರಿಶಿನ ಪುಡಿ-ಅರ್ಧ ಟೀಸ್ಪೂನ್‌, ತೆಂಗಿನ ತುರಿ-4ಚಮಚ, ಗರಂ ಮಸಾಲ-1ಚಮಚ, ಲಿಂಬೆರಸ-1ಚಮಚ, ಕೊತ್ತಂಬರಿ ಸೊಪ್ಪು-ಸ್ವಲ್ಪ, ಕರಿಬೇವಿನ ಎಲೆ-ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.

Advertisement

ತಯಾರಿಸುವ ವಿಧಾನ
ಮೊದಲಿಗೆ ಒಂದು ಬಾಣಲೆಗೆ 3 ಚಮಚದಷ್ಟು ತೆಂಗಿನೆಣ್ಣೆಯನ್ನು ಹಾಕಿ ಕಾದಮೇಲೆ ಸಾಸಿವೆ ಸೇರಿಸಿ ಅದು ಸಿಡಿದ ನಂತರ ಕರಿಬೇವಿನ ಎಲೆ, ಹಸಿಮೆಣಸು, ಒಣಮೆಣಸು ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ ನಂತರ ಬೇಯಿಸಿದ ಜೋಳವನ್ನು ಸೇರಿಸಿ ಅದಕ್ಕೆ ತೆಂಗಿನ ತುರಿ, ಗರಂ ಮಸಾಲ,ಅರಿಶಿನ ಪುಡಿ, ಲಿಂಬೆರಸ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರ ಹಾಗೂ ಆರೋಗ್ಯಕರವಾದ ಜೋಳದ ಉಸ್ಲಿ ಸವಿಯಲು ಸಿದ್ಧ.

-ಶ್ರೀರಾಮ್ ಜಿ .ನಾಯಕ್

Advertisement

Udayavani is now on Telegram. Click here to join our channel and stay updated with the latest news.

Next