ಕೋವಿಡ್ 19 ವೈರಸ್ ವ್ಯಾಪಿಸುತ್ತಿರುವಷ್ಟೇ ವೇಗದಲ್ಲಿ ಅದರ ಕುರಿತಾದ ಸುಳ್ಳು ಸುದ್ದಿಗಳೂ ವ್ಯಾಪಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿರುವ ಸುದ್ದಿಗಳ ಸತ್ಯ ದರ್ಶನ ಇಲ್ಲಿದೆ.
ವಿಶ್ವವನ್ನೇ ತಲ್ಲಣಗೊಳಿಸುತ್ತಿರುವ
ಕೋವಿಡ್ 19 ವೈರಸ್ ಅನ್ನು ಸೃಷ್ಟಿಸಿ, ಚೀನಗೆ ಮಾರಾಟ ಮಾಡಿದ್ದರು ಎಂಬ ಆರೋಪದ ಮೇರೆಗೆ
ಹಾರ್ವರ್ಡ್ ವಿವಿ ಪ್ರೊಫೆಸರ್ ಪ್ರೊ. ಚಾರ್ಲ್ಸ್ ಲೀಬರ್ ಎಂಬುವರನ್ನು ಅಮೆರಿಕದ ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ಸುದ್ದಿಯೊಂದು ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ವೈರಲ್ ಆಗುತ್ತಿದೆ. ಆದರೆ, ಇದೊಂದು ಸುಳ್ಳು ಸುದ್ದಿ ಎಂಬುದನ್ನು ಪತ್ತೆ ಹಚ್ಚಲಾಗಿದೆ.
ಪ್ರೊ. ಚಾರ್ಲ್ಸ್ ರನ್ನು ಅಮೆರಿಕದ ಪೊಲೀಸರು ಬಂಧಿಸಿದ್ದು 2020ರ ಜನವರಿ ತಿಂಗಳಲ್ಲಿ. ಚೀನದಿಂದ ಅವರು ಹಣಕಾಸು ನೆರವು ಪಡೆದಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿ ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು.
ಆದರೆ, ಅವರ ವಿರುದ್ಧ ಬೇಹುಗಾರಿಕೆಯಾಗಲೀ ಅಥವಾ ಚೀನಗೆ ಸೂಕ್ಷ್ಮಮಾಹಿತಿ ರವಾನಿಸಿದ ಆರೋಪವಾಗಲೀ ಇಲ್ಲ. ಅಷ್ಟೇ ಅಲ್ಲ, ಆ ಪ್ರೊಫೆಸರ್‌ಗೆ ಕೋವಿಡ್ 19 ವೈರಸ್ ಗೂ ಯಾವುದೇ ಸಂಬಂಧವೂ ಇಲ್ಲ.
ಚೀನದಿಂದ ಹಣ ಪಡೆದಿರುವ ವಿಚಾರವನ್ನು ಮುಚ್ಚಿಟ್ಟಿರುವುದು ಮಾತ್ರವೇ ಅವರ ವಿರುದ್ಧ ಇರುವ ಆರೋಪವಾಗಿದೆಯೇ ಹೊರತು, ಕೋವಿಡ್ 19ಗೂ ಅವರಿಗೂ ಲಿಂಕ್ ಇಲ್ಲ ಎಂದು ಸ್ವತಃ ಅಮೆರಿಕದ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ.