Advertisement
‘ಆಫ್ರಿಕಾದ ಅಮೆಝಾನ್ ನದಿಯಲ್ಲಿ ಪತ್ತೆಯಾಗಿದ್ದ 134 ಅಡಿ ಉದ್ದ ಮತ್ತು ಬರೋಬ್ಬರಿ 2067 ಕಿಲೋ ತೂಗುತ್ತಿದ್ದ ಅನಕೊಂಡಾ ಹಾವೊಂದು 250 ಜನರನ್ನು ಹಾಗೂ 2300 ಪ್ರಾಣಿಗಳನ್ನು ತಿಂದು ತೇಗಿತ್ತು. ಹಾಗಾಗಿ ಈ ದೈತ್ಯ ಹಾವನ್ನು ಬೇಟೆಯಾಡಲು ಹೊರಟ ಆಫ್ರಿಕಾದ ರಾಯಲ್ ಬ್ರಿಟಿಷ್ ಕಮಾಂಡೋ ಪಡೆಯ ಯೋಧರು ಸತತ 37 ದಿನಗಳ ಸುದೀರ್ಘ ಹೋರಾಟದ ಬಳಿಕ ಕೊನೆಗೂ ಇದನ್ನು ಬೇಟೆಯಾಡಿ ಕೊಲ್ಲುವಲ್ಲಿ ಯಶಸ್ವಿಯಾಗಿದ್ದಾರೆ’ ಎಂಬ ಬರಹವಿದ್ದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮತ್ತು ಈ ಬರಹದ ಜೊತೆಗೆ ಈ ತಥಾಕಥಿತ ದೈತ್ಯ ಹಾವಿನ ಮೃತದೇಹದ ಸುತ್ತ ಜನರು ನಿಂತಿರುವ ಫೊಟೋವನ್ನು ಸಹ ಪೋಸ್ಟ್ ಮಾಡಲಾಗಿದೆ.ವಿಶೇಷವೆಂದರೆ 2015ನೇ ಇಸವಿಯಲ್ಲಿ ಅಪ್ಲೋಡ್ ಆಗಿರುವ ಈ ಪೋಸ್ಟ್ ಈಗಲೂ ಸಹ ಫೇಸ್ಬುಕ್ ನಲ್ಲಿ ಆಗಾಗ ನಮ್ಮ ಕಣ್ಣಿಗೆ ಬೀಳುತ್ತಿದೆ. ಮತ್ತು ಈಗಲೂ ಈ ಪೋಸ್ಟ್ ನೋಡಿದವರು ಒಮ್ಮೆ ಇದನ್ನು ಓದಿ, ‘ಅಬ್ಬಾ..’ ಎಂದು ಉದ್ಘರಿಸಿ ‘ಶೇರ್’ ಬಟನ್ ಒತ್ತುತ್ತಿದ್ದಾರೆ!
ಆದರೆ ಈ ಪೋಸ್ಟ್ ನ ಸತ್ಯಾಸತ್ಯತೆಯ ಬೆನ್ನು ಹಿಡಿದು ಹೊರಟ ರಾಷ್ಟ್ರಮಟ್ಟದ ಖಾಸಗಿ ವೆಬ್ ಸೈಟ್ ಒಂದು ಈ ಪೋಸ್ಟ್ ನ ಅಸಲಿಯತ್ತನ್ನು ಬಯಲುಗೊಳಿಸಿದೆ. ಈ ವೆಬ್ ಸೈಟ್ ನಡೆಸಿರುವ ಫ್ಯಾಕ್ಟ್ ಚೆಕ್ ಪ್ರಕಾರ ಇದೊಂದು ಫೊಟೋ ಶಾಪ್ ಮಾಡಿರುವ ಚಿತ್ರವಾಗಿದ್ದು, ನಿಜವಾಗಿಯೂ ಇಷ್ಟು ದೈತ್ಯ ಗಾತ್ರದ ಅನಕೊಂಡ ಹಾವು ಇದುವರೆಗೂ ಪತ್ತೆಯಾಗಿಲ್ಲ. ಮತ್ತು ಈ ಪೋಸ್ಟ್ ನಲ್ಲಿರುವ ಅಷ್ಟೂ ಮಾಹಿತಿಗಳು ತಪ್ಪು ಎಂದು ಸಾಬೀತುಗೊಂಡಿದೆ.
– ಅಮೆಝಾನ್ ನದಿ ಹರಿಯುವುದು ದಕ್ಷಿಣ ಅಮೆರಿಕಾದಲ್ಲೇ ಹೊರತು ಆಫ್ರಿಕಾ ಖಂಡದಲ್ಲಿ ಅಲ್ಲ. – ಇಷ್ಟೊಂದು ಮನುಷ್ಯರನ್ನು ಹಾಗೂ ಪ್ರಾಣಿಗಳನ್ನು ದೈತ್ಯ ಹಾವೊಂದು ಕೊಂದು ತಿಂದಿದೆ ಎಂಬ ವಿಷಯ ಇದುವರೆಗೂ ಒಂದೇ ಒಂದು ಮಾಧ್ಯಮಗಳಲ್ಲಿ ವರದಿಯಾಗಿಲ್ಲ.
Related Articles
Advertisement
– ಇನ್ನು 37 ದಿನಗಳ ಸುದೀರ್ಘ ಹೋರಾಟದಲ್ಲಿ ಈ ಹಾವನ್ನು ಹೊಡೆದಿರುವುದೇ ನಿಜವಾಗಿದ್ದಲ್ಲಿ, ಅಷ್ಟೊಂದು ಸುದೀರ್ಘ ಹೋರಾಟದ ಅವಧಿಯಲ್ಲಿ ಫೊಟೋದಲ್ಲಿರುವ ಹಾವಿನ ಶರೀರದ ಮೇಲೆ ಒಂದಾದರೂ ಗಾಯಗಳಿರಬೇಕಿತ್ತಲ್ಲ ಎಂದು ನೋಡಿದರೆ, ಫೊಟೋದಲ್ಲಿ ಸತ್ತು ಬಿದ್ದಿರುವ ಈ ದೈತ್ಯ ಹಾವಿನ ಮೈಮೇಲೆ ಯಾವುದೇ ರೀತಿಯ ಗಾಯಗಳಿಲ್ಲ.
– ಇನ್ನು ನ್ಯಾಷನಲ್ ಜಿಯೋಗ್ರಫಿ ಚಾನೆಲ್ ಪ್ರಕಾರ ಅಮೆಝಾನ್ ಅರಣ್ಯ ಪ್ರದೇಶದಲ್ಲಿ ಇದುವರೆಗೆ ಸಿಕ್ಕಿರುವ ಅನಕೊಂಡ ಹಾವುಗಳ ಪೈಕಿ ಅತೀ ಉದ್ದದ ಹಾವೆಂದರೆ ಅದು 30 ಅಡಿಗಳ ಗ್ರೀನ್ ಅನಕೊಂಡ. ಹಾಗಾಗಿ 134 ಅಡಿಯ ಅನಕೊಂಡ ಇದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.
– ಇನ್ನು ಫೊಟೋಶಾಪ್ ಕೈಚಳಕದಲ್ಲೂ ಹಲವಾರು ತಪ್ಪುಗಳನ್ನು ಈ ಫೊಟೋ ಒಳಗೊಂಡಿದೆ. ಈ ಚಿತ್ರದಲ್ಲಿ ದೈತ್ಯ ಅನಕೊಂಡ ಹಾವಿನ ಮೂತಿ ಭಾಗ ಅಸ್ಪಷ್ಟವಾಗಿ ಗೋಚರಿಸುತ್ತದೆ.
ವಿಶ್ವದ ಈ ದೈತ್ಯ ಹಾವಿನ ಕುರಿತಾದ ಹಲವು ವಿಡಿಯೋಗಳು ಇಂಟರ್ನೆಟ್ ನಲ್ಲಿ ಈಗಲೂ ಹರಿದಾಡುತ್ತಿದೆ. ಅಂತಾರಾಷ್ಟ್ರೀಯ ಫ್ಯಾಕ್ಟ್ ಚೆಕ್ ಸಂಸ್ಥೆ ಸ್ನೋಪ್ಸ್ ಸಹ ಈ ಸುದ್ದಿಯನ್ನು ಕಪೋಲಕಲ್ಪಿತ ಎಂದು ಈ ಹಿಂದೆಯೇ ವರದಿ ಮಾಡಿತ್ತು. ಒಟ್ಟಿನಲ್ಲಿ ಈ ಮಾಹಿತಿ ತಂತ್ರಜ್ಞಾನ ಯುಗದಲ್ಲೂ ಅಸಂಬದ್ಧ ಮಾಹಿತಿಯನ್ನು ಹೊಂದಿರುವ ಪೋಸ್ಟ್ ಒಂದು ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಮತ್ತು ಜನರು ಈಗಲೂ ಈ ಪೋಸ್ಟ್ ಅನ್ನು ಶೇರ್ ಮಾಡುತ್ತಿರುವುದು ಮಾತ್ರ ವಿಚಿತ್ರವೇ ಸರಿ.
ಇನ್ನು ಮುಂದೆ ನಿಮ್ಮ ವಾಲ್ ನಲ್ಲಿ ಈ ಪೋಸ್ಟ್ ಕಂಡುಬಂದರೆ ‘ಜಸ್ಟ್ ಇಗ್ನೋರ್ ಇಟ್!’