ಉಡುಪಿ: ದೇವರು ಮತ್ತು ಗುರುಗಳ ಮೇಲೆ ನಂಬಿಕೆ ಇರಬೇಕು. ಭಕ್ತರಲ್ಲಿ ರುವ ದೃಢವಾದ ನಂಬಿಕೆಯಿಂದ ಭಗವಂತನ ಅನುಗ್ರಹ ದೊರೆತು ಬದುಕಿನಲ್ಲಿ ಎದುರಾಗುವ ಎಲ್ಲ ದುರಿತಗಳು ದೂರವಾಗುತ್ತವೆ. ಭಕ್ತರ ಭಗವಂತ ಮತ್ತು ಗುರುವಿನ ಮೇಲಿನ ನಂಬಿಕೆ ಎಂದೂ ವ್ಯರ್ಥವಾಗದು ಎಂದು ಶ್ರೀ ಶಾರದಾ ಪೀಠ ಶೃಂಗೇರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಜಿ ಹೇಳಿದರು.
ಜಿಲ್ಲಾ ಮರಾಠಿ ಸೇವಾ ಸಂಘದ ಕುಂಜಿಬೆಟ್ಟು ಶ್ರೀ ತುಳಜಾ ಭವಾನಿ ಮರಾಠಿ ಸಮುದಾಯ ಭವನಕ್ಕೆ ಗುರುವಾರ ಭೇಟಿ ನೀಡಿದ ಸ್ವಾಮೀಜಿ ಆಶೀರ್ವಚನ ನೀಡಿದರು. ಮರಾಠಿ ಸಮಾಜ, ಶೃಂಗೇರಿ ಪೀಠದ ನಡುವೆ ಗುರು ಶಿಷ್ಯರ ಸಂಬಂಧವಿದೆ. ಗುರುಗಳ ಮೇಲೆ ಶಿಷ್ಯರಿಗೆ ಅಪಾರ ಭಕ್ತಿ ಇರುತ್ತದೆ. ಅದರಂತೆ ಗುರುಗಳಿಗೆ ತಮ್ಮ ಶಿಷ್ಯರ ಶ್ರೇಯಸ್ಸು ಮುಖ್ಯವಾಗುತ್ತದೆ. ಹೀಗೆ ಗುರು-ಶಿಷ್ಯ ಸಂಬಂಧ ಉತ್ತಮವಾಗಿದ್ದಾಗ ಸುಭಿಕ್ಷೆ ಯಿಂದಿರಲು ಸಾಧ್ಯ ಎಂದರು.
ಜಿಲ್ಲಾ ಮರಾಠಿ ಸಂಘದ ಅಧ್ಯಕ್ಷ ಎಸ್. ಅನಂತ ನಾಯ್ಕ ಪ್ರಸ್ತಾವನೆಗೈದು ಸ್ವಾಗತಿಸಿದರು. ಗುರುಗಳಿಗೆ ಮರಾಠಿ ಸಂಘದ ಪರವಾಗಿ ಗುರು ಕಾಣಿಕೆ ಸಮರ್ಪಿಸಲಾಯಿತು. ಕೂಡುವಳಿಕೆಯ ಗುರಿಕಾರರು ಹಾಗೂ ಸಂಘ ಸಂಸ್ಥೆಗಳ ಮುಖ್ಯಸ್ಥರು ಫಲ, ಪುಷ್ಪ, ಗುರು ಕಾಣಿಕೆ ನೀಡಿದರು. ಸ್ವಾಮೀಜಿ ಫಲ ಮಂತ್ರಾಕ್ಷತೆ ನೀಡಿ ಹರಸಿದರು. ಸಂಘದ ವತಿಯಿಂದ ಶೃಂಗೇರಿ ಮಠದ ಸಿಇಒ ಗೌರಿಶಂಕರ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಸಂಘದ ಕಾರ್ಯದರ್ಶಿ ಕೆ.ಟಿ ನಾಯ್ಕ,, ಪ್ರಮುಖರಾದ ಕೆ.ಕೆ ನಾಯ್ಕ,, ಡಾ| ಆನಂದ ನಾಯ್ಕ, ಉಮೇಶ್ ನಾಯ್ಕ, ಕೃಷ್ಣ ನಾಯ್ಕ ಅತ್ರಾಡಿ, ನರಸಿಂಹ ನಾಯ್ಕ, ಮೊದಲಾದವರು ಉಪಸ್ಥಿತರಿದ್ದರು.
ಭಗವಂತನಿಂದ ಕಷ್ಟದ ಶಿಕ್ಷೆ
ಒಳ್ಳೆಯವರು ಅಂದುಕೊಳ್ಳಬೇಕಾದರೆ ದೇವರು ಕೊಟ್ಟ ಎಲ್ಲ ಕಷ್ಟಗಳ ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ. ಎಲ್ಲ ಪರೀಕ್ಷೆ ನಡೆದ ಬಳಿಕ ಕೊನೆಗೆ ಭಗವಂತ ಕಷ್ಟ ನಿವಾರಿಸಿ ಬೇಡಿದ್ದನ್ನು ಕೊಟ್ಟು ಹರಸುತ್ತಾನೆ. ಹಾಗಾಗಿ ಯಾರೂ ಕೂಡ ಕಷ್ಟಗಳಿಗೆ ಎದೆಗುಂದಬೇಕಿಲ್ಲ. ಎಲ್ಲದಕ್ಕೂ ಪರಿಹಾರ ಇದ್ದೆ ಇರುತ್ತದೆ. ಅದನ್ನು ಎದುರಿಸಿ ಅದರಲ್ಲಿ ಪಾಸಾಗವೇಕು ಎಂದು ಸ್ವಾಮೀಜಿ ಹೇಳಿದರು.