ರಾಯಚೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಾಗತ ಕಾರ್ಯಕ್ರಮಕ್ಕೆ ಸಾವಿರಾರು ಕೋಟಿ ಖರ್ಚಾಗಿದೆ ಎನ್ನುವುದು ಊಹಾಪೋಹ. ಕೇವಲ 100 ಕೋಟಿ ರೂ. ವೆಚ್ಚದಲ್ಲಿ ಅತ್ಯಂತ ಭವ್ಯವಾದ ಸ್ವಾಗತ ಕೋರಲಾಗಿದೆ. ಅಂತಹ ಕಾರ್ಯಕ್ರಮ ಆಯೋಜಿಸುವ ಸಾಮರ್ಥ್ಯ ಪ್ರಧಾನಿ ನರೇಂದ್ರ ಮೋದಿಗೆ ಬಿಟ್ಟರೆ ಮತ್ಯಾರಿಗೂ ಇಲ್ಲ ಎಂದು ಡಿಸಿಎಂ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ತಿಳಿಸಿದರು.
ರಾಯಚೂರು ನಗರ ಹೊರವಲಯದ ಯರಗೇರಾ ಪಿಜಿ ಸೆಂಟರ್ ಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಟ್ರಂಪ್ ಭಾರತ ಭೇಟಿಯಿಂದ ಅಮೆರಿಕ ಮಾತ್ರವಲ್ಲ ಇನ್ನಿತರ ದೇಶಗಳ ಜತೆಗೂ ಉತ್ತಮ ಬಾಂಧವ್ಯ ವೃದ್ಧಿಯಾಗುವ ಸಾಧ್ಯತೆ ಇದೆ. ಪ್ರತಿ ದೇಶಕ್ಕೂ ತನ್ನದೇ ಆದ ಸಮಸ್ಯೆಗಳಿವೆ. ಅಮೆರಿಕಾಗೆ ಹೋದರೂ ಅಲ್ಲಿಯೂ ಸಮಸ್ಯೆಗಳಿವೆ. ಹಾಗಂತ ನಮ್ಮ ಸಮಸ್ಯೆಗಳನ್ನು ಮುಚ್ಚಿಟ್ಟುಕೊಳ್ಳುವ ಪ್ರಶ್ನೆಯಿಲ್ಲ. ಅವುಗಳ ಇತ್ಯರ್ಥಕ್ಕೆ ಹಂತ ಹಂತವಾಗಿ ಒತ್ತು ನೀಡಲಾಗುವುದು. ಎಲ್ಲ ಸಮಸ್ಯೆಗೆ ಒಂದೇ ಬಾರಿಗೆ ಪರಿಹಾರ ಸಿಗುವುದಿಲ್ಲ ಎಂದರು.
ಪಾಕಿಸ್ತಾನವನ್ನು ಹೊರಗಿಟ್ಟರೆ ಅದು ಪೂರ್ಣ ಕೈತಪ್ಪುತ್ತದೆ ಎಂಬ ಕಾರಣಕ್ಕೆ ಅಮೇರಿಕಾ ಜತೆಯಲ್ಲಿ ಇಟ್ಟಕೊಂಡಿದೆ. ದೇಶದ ಹಿತಾಸಕ್ತಿ ಕಾಪಾಡಲು ನಮ್ಮ ನಾಯಕರಿದ್ದಾರೆ. ಆ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಿಎಂ ಇಬ್ರಾಹಿಂ ಅವರ 30 ಬಿಜೆಪಿ ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ಹೇಳಿಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಯಾರೂ ಕೂಡ ಪಕ್ಷ ಬಿಟ್ಟು ಹೋಗಲ್ಲ. ಕಾಂಗ್ರೆಸ್ ನವರು ತಮ್ಮವರನ್ನು ಭದ್ರವಾಗಿ ಇರಿಸಿಕೊಳ್ಳಲಿ ಎಂದರು.
ಎನ್ ಆರ್ ಸಿ, ಎನ್ ಆರ್ ಪಿ ಗಳನ್ನು ಜಾರಿಗೆ ತಂದಿದ್ದೆ ಕಾಂಗ್ರೆಸ್ ನಾಯಕರು. ಈಗ ಅವರೇ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಈ ಕಾಯ್ದೆಗಳಿಂದ ದೇಶದ ಜನರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದರು.
ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆ ವಿಚಾರ ಈಗ ಶುರುವಾಗಿದೆ. ಅನುದಾನ ನೀಡುವ ವಿಚಾರ ಮುಂದೆ ಮಾತನಾಡುತ್ತೇನೆ ಎಂದರು.