ಜಾಗತಿಕ ಸೂಪರ್ ಪವರ್, ಜಗತ್ತಿನ ದೊಡ್ಡಣ್ಣ ಎಂದೆಲ್ಲ ಕರೆಸಿಕೊಳ್ಳುವ ಅಮೆರಿಕ ಕಳೆದ ಕೆಲವು ವರ್ಷಗಳಿಂದ ಕೆಟ್ಟ ಕಾರಣಗಳಿಂದಾಗಿಯೇ ಸುದ್ದಿಯಲ್ಲಿದೆ. ಅತ್ಯಂತ ಪ್ರಗತಿಪರ ಪ್ರಜಾಪ್ರಭುತ್ವ ರಾಷ್ಟ್ರ ತನ್ನದು ಎಂದು ಹೇಳಿಕೊಳ್ಳುವ ಅಮೆರಿಕದ ರಾಜಕೀಯವಂತೂ ಚುನಾವಣ ಸಮಯದಲ್ಲಿ ಜಗತ್ತಿನೆದುರು ನಗೆಪಾಟಲಿಗೀಡಾಗುತ್ತಾ ಬಂದಿತ್ತು, ಆದರೆ ಬುಧವಾರ ಅಮೆರಿಕದ ಸಂಸತ್ ಭವನದಲ್ಲಿ ನಡೆದ ಘಟನೆ ನಿಜಕ್ಕೂ ಹೇವರಿಕೆಗೆ ಹಾಗೂ ಕಳವಳಕ್ಕೆ ಕಾರಣವಾಗುವಂತೆ ಇತ್ತು.
ಎಲೆಕ್ಟೋರಲ್ ಕಾಲೇಜಿನ ಮತ ಗಳಿಕೆಯನ್ನು ಅಧಿಕೃತವಾಗಿ ಘೋಷಿಸಿಲು ಅಮೆರಿಕ ಕಾಂಗ್ರೆಸ್ ಜಂಟಿ ಅಧಿವೇಶನ ನಡೆದಿರುವಾಗಲೇ ಸಾವಿರಾರು ಸಂಖ್ಯೆಯಲ್ಲಿ ಟ್ರಂಪ್ ಬೆಂಬಲಿಗರು ಸಂಸತ್ ಭವನಕ್ಕೆ ಮುತ್ತಿಗೆ ಹಾಕಿದ್ದು, ಅವರನ್ನು ತಡೆಯುವುದಕ್ಕಾಗಿ ನಡೆದ ಪ್ರಯತ್ನ, ಪರಿಣಾಮವಾಗಿ ನಾಲ್ವರು ಟ್ರಂಪ್ ಬೆಂಬಲಿಗರು ಭದ್ರತಾ ಪಡೆಯ ಗುಂಡಿಗೆ ಬಲಿಯಾದ ಘಟನೆ ನಡೆದಿದೆ.
ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಅವರ ಗೆಲುವನ್ನು ಅಮೆರಿಕ ಕಾಂಗ್ರೆಸ್ ಅಧಿಕೃತವಾಗಿ ಪ್ರಮಾಣೀಕರಿಸಿದ್ದು, ಜನವರಿ 20ರಂದು ಅಧ್ಯಕ್ಷರಾಗಿ ಜೋ ಬೈಡೆನ್, ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಪ್ರಮಾಣ ಸ್ವೀಕರಿಸಲಿರುವರಾದರೂ, ಬುಧವಾರದ ಕೋಲಾಹಲ, ಹಿಂಸಾಚಾರವೇ ಪ್ರಮುಖ ಸುದ್ದಿಯಾಗುವಂತಾಯಿತು.
ಇದಕ್ಕೆ ನಿಸ್ಸಂಶಯವಾಗಿಯೂ ಹೊರಹೋಗಲಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರಣ. ತಮ್ಮ ಬೆಂಬಲಿಗರು ಸಂಸತ್ ಭವನಕ್ಕೆ ಮುತ್ತಿಗೆ ಹಾಕಿದ ಸಮಯದಲ್ಲಿ ಬೆಚ್ಚಿಬಿದ್ದ ಅವರು “ಸುಗಮವಾಗಿ ಅಧಿಕಾರ ಹಸ್ತಾಂತರ ಮಾಡುವುದಾಗಿ’ ಹೇಳಿ ತಮ್ಮ ತಪ್ಪಿನಿಂದ ನುಣುಚಿಕೊಳ್ಳುವ ಪ್ರಯತ್ನ ನಡೆಸಿದರು. ಆದರೆ ಘಟನೆಗೂ ಮುನ್ನಾ ದಿನ ತಮ್ಮ ಬೆಂಬಲಿಗರಿಗೆ ಎಲ್ಲರೂ ಕ್ಯಾಪಿಟಲ್ ಹಿಲ್‌ಗೆ ಮುತ್ತಿಗೆ ಹಾಕಿ ಎಂದು ಪ್ರಚೋದನೆ ನೀಡಿದವರೂ ಅವರೇ. ಮೊದಲಿಂದಲೂ ಟ್ರಂಪ್ ತಮ್ಮ ಹಿಡಿತವಿಲ್ಲದ ನಾಲಗೆಯಿಂದ ಗುರುತಿಸಿಕೊಂಡಿದ್ದರಾದರೂ, ಎಲಕ್ಟೋರಲ್ ಕಾಲೇಜುಗಳ ಪ್ರಮಾಣೀಕರಣದಂಥ ಸಂದರ್ಭದ ಮಹತ್ವವನ್ನು ಅರಿಯದಷ್ಟು ಅಪ್ರಬುದ್ಧರಂತೆ ನಡೆದುಕೊಂಡದ್ದು, ಅಮೆರಿಕನ್ ರಾಜಕೀಯದ ಇತಿಹಾಸದಲ್ಲೇ ದೊಡ್ಡ ಕಪ್ಪುಚುಕ್ಕೆಯಾಗಿ ಉಳಿದುಹೋಗಲಿದೆ. ಟ್ರಂಪ್ ನವೆಂಬರ್ ತಿಂಗಳಿನಿಂದಲೂ ಚುನಾವಣ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ, ತಾವು ಸೋತಿಲ್ಲ ಎಂದೇ ವಾದಿಸುತ್ತಾ ಬಂದಿದ್ದರಾದರೂ, ಈ ಎರಡು ತಿಂಗಳಲ್ಲಿ ಚುನಾವಣ ಅಕ್ರಮವನ್ನು ರುಜುವಾತು ಮಾಡುವಲ್ಲಿ ಸಂಪೂರ್ಣ ವಿಫಲರಾದರು. ಆದಾಗ್ಯೂ ಡಿಸೆಂಬರ್ ತಿಂಗಳ ವೇಳೆಗಾಗಲೇ ಅಧಿಕಾರ ಹಸ್ತಾಂತರದ ಪೂರ್ವ ಪ್ರಕ್ರಿಯೆ ಆರಂಭವಾಗಿಬಿಟ್ಟಿತ್ತು.
ನಿಯೋಜಿತ ಅಧ್ಯಕ್ಷ ಬೈಡೆನ್‌ರ ತಂಡವು ಶ್ವೇತಭವನದಲ್ಲಿನ ಪ್ರಮುಖ ಕಾರ್ಯಾಲಯಗಳಲ್ಲಿ ತಮ್ಮ ನಾಮನಿರ್ದೇಶಿತ ಸಿಬಂದಿಯನ್ನು ನೇಮಿಸಲಾರಂಭಿಸಿತ್ತು ಹಾಗೂ ರಕ್ಷಣೆ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರ ಹೆಸರನ್ನೂ ಘೋಷಿಸಿತ್ತು. ಅಂದರೆ, ಅಧಿಕಾರ ಹಸ್ತಾಂತರವಾಗುವುದು, ಬೈಡೆನ್ ಅವರೇ ಅಧ್ಯಕ್ಷರಾಗುತ್ತಾರೆ ಎನ್ನುವುದು ಟ್ರಂಪ್‌ಗ್ೂ ಆಗಲೇ ಖಚಿತವಾಗಿತ್ತು. ಈ ಪ್ರಕ್ರಿಯೆಗೆ ರಿಪಬ್ಲಿಕನ್ ಪಕ್ಷದ ತಂಡವೂ ಸಹಕರಿಸಲಾರಂಭಿಸಿತ್ತು. ತಮ್ಮ ಬೆಂಬಲಿಗರನ್ನು ಪ್ರಚೋದಿಸುವುದರಿಂದ ಏನೂ ಪ್ರಯೋಜನವಾಗದು ಎನ್ನುವುದೂ ಟ್ರಂಪ್‌ಗೆ ಖಾತ್ರಿಯಾಗಿತ್ತು. ಹೀಗಿರುವಾಗ, ಅವರು ತಮ್ಮ ಬೆಂಬಲಿಗರನ್ನು ಹಾದಿತಪ್ಪಿಸುವಂತೆ, ಹಿಂಸೆಯತ್ತ ಹೊರಳುವಂತೆ ಮಾಡಿದ್ದು ಬಹುದೊಡ್ಡ ತಪ್ಪು. ಈಗಿನ ಅಹಿತಕರ ಘಟನೆಗೆ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಬೇಸರ ವ್ಯಕ್ತಪಡಿಸಿರುವುದು ಸರಿಯಾಗಿಯೇ ಇದೆ. ಒಂದೆಡೆ, ಅಮೆರಿಕದ ಎದುರಾಳಿ ಚೀನ, ಪ್ರಸಕ್ತ ವಿದ್ಯಮಾನವನ್ನು ನೋಡಿ ಅಪಹಾಸ್ಯ ಮಾಡುತ್ತಿದೆ. ಒಟ್ಟಲ್ಲಿ, ಜಾಗತಿಕ ನಾಯಕತ್ವದಲ್ಲಿನ ಸಮತೋಲನವನ್ನು, ಅಮೆರಿಕದ ವರ್ಚಸ್ಸನ್ನು ಈ ರೀತಿಯ ಘಟನೆಗಳು ಅಲುಗಿಸುವ ಸಾಧ್ಯತೆ ಅಧಿಕವಿರುತ್ತದೆ.