ವಾಷಿಂಗ್ಟನ್: ಮೆಕ್ಸಿಕೋ ಗಡಿ ಗುಂಟ 40 ಸಾವಿರ ಕೋಟಿ ರೂ. (5.7 ಬಿಲಿಯನ್ ಡಾಲರ್) ವೆಚ್ಚದಲ್ಲಿ ಗೋಡೆ ನಿರ್ಮಾಣ ಮಾಡಿಯೇ ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ. ಅಮೆರಿಕದ ಸಂಸತ್ ಅನ್ನು ಉದ್ದೇಶಿಸಿ ಮಾತನಾಡಿದ ಅವರು ಅಕ್ರಮ ವಲಸಿಗರೇ ದೇಶದ ಭದ್ರತೆ, ಸಮಗ್ರತೆಗೆ ಸವಾಲು ಎಂದಿದ್ದಾರೆ. ಗೋಡೆ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಆಂಶಿಕ ಆರ್ಥಿಕ ಬಿಕ್ಕಟ್ಟು ಉಂಟಾಗಿತ್ತು. ಅದಕ್ಕೆ ಪೂರಕವಾಗಿ ಮಾತನಾಡಿದ ಅಧ್ಯಕ್ಷ ಟ್ರಂಪ್ ವಿದೇಶಿಯರ ಪ್ರವೇಶಕ್ಕೆ ವಿರೋಧವಿಲ್ಲ. ಆದರೆ ಪ್ರತಿಭಾವಂತರು ಕಾನೂನುಬದ್ಧ ಮಾರ್ಗಗಳ ಮೂಲಕ ಪ್ರವೇಶಿಸಲಿ ಎಂದು ಹೇಳಿದ್ದಾರೆ. ಎಚ್-1ಬಿ ವೀಸಾ, ಮೆಕ್ಸಿಕೋ ಗಡಿ ಮೂಲಕ ಅಕ್ರಮ ವಲಸಿಗರ ಪ್ರವೇಶದ ಹಿನ್ನೆಲೆ¿ಲ್ಲಿ ಅವರು ಈ ಮಾತುಗಳನ್ನಾ ಡಿದ್ದಾರೆ. ಚೀನದ ವಿರುದ್ಧ ಹರಿಹಾಯ್ದ ಅವರು ದೇಶದ ಉದ್ಯೋಗ ಮತ್ತು ಸಂಪತ್ತನ್ನು ಲೂಟಿ ಮಾಡಿದೆ. ಅದಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು ಎಂದು ಹೇಳಿದ್ದಾರೆ. ಇದರ ಜತೆಗೆ ಎಲ್ಲಾ ರೀತಿಯ ರಾಜಕೀಯ ತೊಡಕುಗಳಿಂದ ಹೊರತಾಗಿರುವ ಹೊಸ ಮಾದರಿಯ ಸಹಕಾರ ವೃದ್ಧಿಯಾಗಬೇಕು ಎಂದು ಸಲಹೆ ಮಾಡಿದ್ದಾರೆ.
ಉತ್ತರ ಕೊರಿಯಾ ಅಧ್ಯಕ್ಷ ಕಿಂ ಜಾಂಗ್ ಉನ್ ಜತೆಗೆ ವಿಯೆಟ್ನಾಂಲ್ಲಿ ಫೆ.27, 28ರಂದು 2ನೇ ಸುತ್ತಿನ ಮಾತುಕತೆ ನಡೆಸುವ ಬಗ್ಗೆಯೂ ಟ್ರಂಪ್ ಪ್ರಸ್ತಾಪ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಇನ್ನೂ ಹಲವು ಹಂತದ ಪ್ರಗತಿ ಸಾಧಿಸಬೇಕಾಗಿದೆ ಎಂದಿದ್ದಾರೆ.
ಕಾನೂನು ಬದ್ಧ ಕ್ರಮಗಳ ಮೂಲಕ ದೇಶಕ್ಕೆ ಎಲ್ಲರೂ ಬರಲಿ
ಚೀನ ವಿರುದ್ಧ ಮತ್ತೆ ಅಧ್ಯಕ್ಷರ ಕಠಿಣ ನುಡಿಗಳು
ಹೊಸ ಮಾದರಿಯ ವ್ಯವಸ್ಥೆ ಅಭಿವೃದ್ಧಿಪಡಿಸಲು ಟ್ರಂಪ್ ಸಲಹೆ