Advertisement
ಅಮೆರಿಕದ ಕಂದಾಯ ಇಲಾಖೆಯ ಬಹುತೇಕ ಅಧಿಕಾರಿಗಳು ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಟ್ರಂಪ್ ಹೆಸರು ಮುದ್ರಿಸುವ ನಿರ್ಧಾರದಿಂದ ಪರಿಹಾರ ವಿತರಣೆ ವಿಳಂಬವಾಗುವುದು ಖಚಿತ ಎಂದು ವಿರೋಧ ಪಕ್ಷದವರೂ ಹೇಳುತ್ತಿದ್ದಾರೆ. ಇದರ ಮಧ್ಯೆ ಇಂಥದೊಂದು ಪ್ರಚಾರ ಪಡೆಯುವ ತಂತ್ರ ಈ ಹೊತ್ತಿನಲ್ಲಿ ಅಗತ್ಯವಿತ್ತೇ? ಸೂಕ್ತವಾದುದೇ ಎಂಬ ಟೀಕೆಯೂ ಕೇಳಿಬರುತ್ತಿದೆ. ಹಾಗೆಂದು ಟ್ರಂಪ್ ಹೆಸರು ಮುದ್ರಿಸುವ ನಿರ್ಧಾರವನ್ನು ಸರಕಾರ ಬದಲಿಸಿಲ್ಲ.
ಕೋವಿಡ್ ಪರಿಹಾರಕ್ಕಾಗಿ ಅಮೆರಿಕ ಸರಕಾರ 2.3 ಲಕ್ಷ ಕೋಟಿ ಡಾಲರ್‌ನ ಪರಿಹಾರ ಪ್ಯಾಕೇಜ್ ಘೋಷಿಸಿದೆ. ಇದರಂಗವಾಗಿ ಲಕ್ಷಗಟ್ಟಲೆ ಸಂತ್ರಸ್ತರಿಗೆ 1,200 ಡಾಲರ್‌ನ ಪರಿಹಾರ ಚೆಕ್ ಕಳುಹಿಸಲಾಗುವುದು. ಆದರೆ ಈ ಚೆಕ್‌ಗಳಲ್ಲಿ ತನ್ನ ಹೆಸರನ್ನು ಮುದ್ರಿಸಿಕೊಳ್ಳುವ ಮೂಲಕ ಟ್ರಂಪ್ ನವಂಬರ್‌ನಲ್ಲಿರುವ ಚುನಾವಣೆಗೆ ತಯಾರಿ ಮಾಡುತ್ತಿದ್ದಾರೆಂಬ ಟೀಕೆಗಳು ಕೇಳಿ ಬಂದಿವೆ ಎಂಬುದಾಗಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ನೆಲಕಚ್ಚಿರುವ ಆರ್ಥಿಕತೆಯನ್ನು ಉತ್ತೇಜಿಸುವ ಸಲುವಾಗಿ ಸರಕಾರ ಈ ಉತ್ತೇಜನಾ ಪರಿಹಾರವನ್ನು ನೀಡಿದೆ. ಚೆಕ್ ಮೆಮೊ ಲೈನ್‌ನಲ್ಲಿ ಟ್ರಂಪ್ ಹೆಸರು ಮುದ್ರಿಸಲಾಗುವುದು. ಇದನ್ನು ಎಕಾನಾಮಿಕ್ ಇಂಪ್ಯಾಕ್ಟ್ ಪೇಮೆಂಟ್ ಎಂದು ಹೆಸರಿಸಲಾಗಿದೆ.