ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊನೆಗೂ ಆಮದಿತ ಉಕ್ಕು ಮತ್ತು ಅಲ್ಯುಮಿನಿಯಂ ಮೇಲೆ ಭಾರೀ ಸುಂಕವನ್ನು ಹೇರಿದ್ದಾರೆ.
ಟ್ರಂಪ್ ಅವರ ಈ ವಿವಾದಿತ ಕ್ರಮವು ಈಗಿನ್ನು ಜಾಗತಿಕ ವಾಣಿಜ್ಯ ಸಮರಕ್ಕೆ ನಾಂದಿಯಾಗುವ ಭೀತಿ. ಟ್ರಂಪ್ ಅವರ ಈ ಕ್ರಮ ರಶ್ಯ ಮತ್ತು ಚೀನಕ್ಕೆ ಭಾರೀ ದೊಡ್ಡ ವಾಣಿಜ್ಯ ಪ್ರಹಾರವಾಗಿ ಪರಿಣಮಿಸಲಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಆದರೆ ಈ ಭಾರೀ ಅಮದು ಸುಂಕ ಹೇರಿಕೆಯಿಂದ ಅಮೆರಿಕದ ಕೈಗಾರಿಕೆಗಳಿಗೆ ಅಗತ್ಯವಿರುವ ಉತ್ತೇಜನ ದೊರಕಲಿದೆ ಎಂದಿರುವ ಡೊನಾಲ್ಡ್ ಟ್ರಂಪ್, ಈಗ ಚಾಲ್ತಿಯಲ್ಲಿರುವ ಅನುಚಿತ ವಾಣಿಜ್ಯ ಕ್ರಮದಿಂದಾಗಿ ಅಮೆರಿಕದ ಕೈಗಾರಿಕೆಗಳು ತೀವ್ರವಾಗಿ ನಲುಗಿ ಹೋಗಿವೆ ಎಂದು ಹೇಳಿದ್ದಾರೆ.
ಕೆನಡ ಮತ್ತು ಮೆಕ್ಸಿಕೋ ಹೊರತುಪಡಿಸಿ ಇತರ ಎಲ್ಲ ದೇಶಗಳಿಂದ ಆಮದಾಗುವ ಉಕ್ಕಿನ ಮೇಲೆ ಶೇ.25 ಮತ್ತು ಅಲ್ಯುಮಿನಿಯಂ ಮೇಲೆ ಶೇ.10ರ ಸುಂಕವನ್ನು ಹೇರುವ ಎರಡು ಅಧಿಕೃತ ಘೋಷಣೆಗಳಿಗೆ ಟ್ರಂಪ್ ಸಹಿ ಹಾಕಿದರು.
ಆಮದು ಸುಂಕದಿಂದ ವಿನಾಯಿತಿ ಪಡೆಯ ಬಯಸುವ ಇತರ ದೇಶಗಳು ಅದಕ್ಕಾಗಿ ಈಗಿನ್ನು ಅಮೆರಿಕ ವಾಣಿಜ್ಯ ಪ್ರತಿನಿಧಿಗಳೊಂದಿಗೆ ಚೌಕಾಶಿ ಮಾತುಕತೆ ನಡೆಸಬೇಕಾಗುವುದು. ಟ್ರಂಪ್ ಹೇರಿರುವ ಆಮದು ಸುಂಕಗಳು ಮುಂದಿನ 15 ದಿನಗಳ ಒಳಗಾಗಿ ಜಾರಿಗೆ ಬರಲಿವೆ.
ಅಮೆರಿಕ ಹೇರಿರುವ ಈ ಆಮದು ಸುಂಕವನ್ನು ಚೀನ ಬಲವಾಗಿ ಖಂಡಿಸಿದೆ. ಇದರಿಂದ ಉಭಯ ದೇಶಗಳ ನಡುವಿನ ವ್ಯಾಪಾರ ವಾಣಿಜ್ಯ ತೀವ್ರವಾಗಿ ಬಾಧಿತವಾಗಲಿದೆ ಎಂದು ಅದು ಹೇಳಿದೆ.