ಬೆಂಗಳೂರು: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಮಾಡಿ ವೈರಲ್ ಮಾಡಿದ ಪ್ರಮುಖ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಂಧನದ ಬಳಿಕ ನಟಿ ರಶ್ಮಿಕಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಆಂಧ್ರ ಪ್ರದೇಶದ ಗುಂಟೂರು ಮೂಲದ ನವೀನ್ ಈಮಾನಿ(24) ಬಂಧಿತ ಆರೋಪಿಯಾಗಿದ್ದು, ಈತ ವೃತ್ತಿಯಲ್ಲಿ ಡಿಜಿಟಲ್ ಮಾರ್ಕೆಟರ್ ಆಗಿ ಕೆಲಸ ಮಾಡುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಅವರ ಫ್ಯಾನ್ ಪೇಜ್ ನ್ನು ನಿರ್ವಹಿಸುತ್ತಿದ್ದ.
ಆಂಧ್ರ ಪ್ರದೇಶದಲ್ಲಿ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಆರೋಪಿ ಬಂಧನದ ಬಳಿಕ ನಟಿ ರಶ್ಮಿಕಾ ದೆಹಲಿ ಪೊಲೀಸರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು,“ದೆಹಲಿ ಪೊಲೀಸರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತಿದ್ದೇನೆ. ಕೃತ್ಯದ ಜವಾಬ್ದಾರರನ್ನು ಬಂಧಿಸಿದ್ದಕ್ಕಾಗಿ ಧನ್ಯವಾದಗಳು. ನನ್ನನ್ನು ಪ್ರೀತಿಯಿಂದ, ಬೆಂಬಲದಿಂದ ಮತ್ತು ನನ್ನನ್ನು ರಕ್ಷಿಸುವ ಸಮುದಾಯಕ್ಕೆ ನಿಜವಾಗಿಯೂ ಕೃತಜ್ಞರಾಗಿರುತ್ತೇನೆ” ಎಂದಿದ್ದಾರೆ.
“ಹುಡುಗಿಯರೇ ಮತ್ತು ಹುಡುಗರೇ – ನಿಮ್ಮ ಒಪ್ಪಿಗೆಯಿಲ್ಲದೆ ನಿಮ್ಮ ಚಿತ್ರವನ್ನು ಎಲ್ಲಿಯಾದರೂ ಬಳಸಿದರೆ ಅಥವಾ ಮಾರ್ಫ್ ಮಾಡಿದ್ದರೆ. ಅದು ತಪ್ಪು! ನಿಮ್ಮನ್ನು ಬೆಂಬಲಿಸುವ ಜನರಿಂದ ನೀವು ಸುತ್ತುವರೆದಿರುವಿರಿ ಮತ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎನ್ನುವುದನ್ನು ಇದು ನೆನಪಿಸುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
2023 ರ ನವೆಂಬರ್ ನಲ್ಲಿ ಬ್ರಿಟೀಷ್ – ಇಂಡಿಯನ್ ಇನ್ ಫ್ಲುಯನ್ಸರ್ ಝಾರಾ ಪಟೇಲ್ ಅವರು ಲಿಫ್ಟ್ ಒಳಗೆ ಬರುವ ವಿಡಿಯೋವನ್ನು ಡೀಪ್ ಫೇಕ್ ತಂತ್ರಜ್ಞಾನ ಬಳಸಿ ಅವರ ಮುಖಕ್ಕೆ ರಶ್ಮಿಕಾ ಅವರ ಮುಖವನ್ನು ಮಾರ್ಫ್ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿತ್ತು.