ಬೆಂಗಳೂರು: ತೆಲಂಗಾಣದಿಂದ ರಾಜ್ಯದ ಒಳನಾಡು ಪ್ರದೇಶದವರೆಗೆ ಕಡಿಮೆ ಒತ್ತಡದ ತಗ್ಗು (ಟ್ರಫ್) ಉಂಟಾಗಿದೆ. ಇದರಿಂದ ಕಳೆದೆರಡು ದಿನಗಳಿಂದ ಉತ್ತಮ ಮಳೆ ಯಾಗುತ್ತಿದ್ದು, ಇನ್ನೂ ಎರಡು-ಮೂರು ದಿನ ಮುಂದು ವರಿಯುವ ಸಾಧ್ಯತೆ ಇದೆ. ಒಳನಾಡಿನಲ್ಲಿ ಹಾದುಹೋ ಗಿರುವ “ಟ್ರಫ್’ ಇದೇ ರೀತಿ ಮುಂದುವರಿದರೆ, ದಕ್ಷಿಣ ಮತ್ತು ಉತ್ತರದಲ್ಲಿ ಉತ್ತಮ ಮಳೆಯಾಗಲಿದೆ. ಆದರೆ, ಇದು ಕರಾವಳಿಗೆ ನಿರೀಕ್ಷಿತ ಮಟ್ಟದಲ್ಲಿ ಮಳೆ ತರುವ ಸಂಭವ ತುಂಬಾ ಕಡಿಮೆ ಎಂದು ಹವಾಮಾನ ಇಲಾಖೆ ಬೆಂಗಳೂರು ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರಲ್ಲಿ ಗರಿಷ್ಠ ಮಳೆ: ನಗರ ಸೇರಿದಂತೆ ದಕ್ಷಿಣ ಒಳನಾಡಿ ನಲ್ಲಿ ಕಳೆದ 3 ದಿನಗಳಿಂದ ಉತ್ತಮ ಮಳೆಯಾಗಿದೆ.
ಮೈಸೂರಿನ ಟಿ. ನರಸೀಪುರ, ತುಮಕೂರಿನ ಕುಣಿಗಲ್, ರಾಮನಗರದ ಮಾಗಡಿ, ಕೋಲಾರದ ರಾಯಲಪಾಡು, ಚಾಮರಾಜನಗರದ ಯಳಂದೂರು, ಬೆಂಗಳೂರಿನ ಹೆಸರಘಟ್ಟ, ಹೆಬ್ಟಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಯಲಹಂಕ, ಕನಕಪುರ, ಚನ್ನಪಟ್ಟಣ, ಮತ್ತಿತರ ಕಡೆಗಳಲ್ಲಿ ಗುರುವಾರ ಬೆಳಗ್ಗೆ ಗರಿಷ್ಠ 120 ಮಿ.ಮೀ., ಕನಿಷ್ಠ 50 ಮಿ.ಮೀ. ಮಳೆ ದಾಖಲಾಗಿದೆ. ಸಂಜೆ ಕೂಡ ದಕ್ಷಿಣ ಒಳನಾಡಿನ ಕೆಲವೆಡೆ ಉತ್ತಮ ಮಳೆಯಾಗಿದ್ದು, ಜಲಾಶಯ ಗಳ ಒಳಹರಿವು ಕೊಂಚ ಏರಿಕೆಯಾಗಿದೆ. ಉತ್ತರ ಒಳನಾಡಿನ ಬೀದರ್, ಕೊಪ್ಪಳ, ಕಲಬುರಗಿ, ರಾಯಚೂರು, ಯಾದಗಿರಿ ಯಲ್ಲಿ ಮುಂದಿನ 2 ದಿನ ಮಳೆಯಾಗುವ ನಿರೀಕ್ಷೆ ಇದೆ.