Advertisement

ಮಂಗಳೂರು : “ಚಾರಣ ಹಾದಿ’ರಚಿಸಲು ಜಿಲ್ಲಾಡಳಿತ ಮುಂದು

09:16 AM Oct 11, 2022 | Team Udayavani |

ಮಂಗಳೂರು : ಪಶ್ಚಿಮಘಟ್ಟಗಳ ವಿವಿಧ ಪರ್ವತ ಶ್ರೇಣಿಗಳು ಚಾರಣ ಪ್ರಿಯರ ಸ್ವರ್ಗ ಎನ್ನಬಹುದು. ಆದರೆ ಚಾರಣದ ನೆಪದಲ್ಲಿ ಅರಣ್ಯವನ್ನು ಪ್ಲಾಸ್ಟಿಕ್‌ ತ್ಯಾಜ್ಯದಿಂದ ಕಲುಷಿತಗೊಳಿಸುವುದು, ಕಾಡಿನಲ್ಲಿ ದಾರಿ ತಪ್ಪಿ ಎಲ್ಲೆಲ್ಲೋ ಹೋಗಿ ದುರಂತಕ್ಕೆ ಕಾರಣವಾಗುವುದು ಇತ್ಯಾದಿಗಳನ್ನು ತಡೆಯುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಚಾರಣಕ್ಕಾಗಿಯೇ ಕೆಲವು ದಾರಿಗಳನ್ನು ರಚಿಸಲು ಚಿಂತನೆ ನಡೆಸಿದೆ.

Advertisement

ಸ್ಥಳೀಯ ಗ್ರಾಮ ಪಂಚಾಯತ್‌, ಗ್ರಾಮ ಅರಣ್ಯ ಸಮಿತಿಗಳು, ಸಂಘ-ಸಂಸ್ಥೆಗಳ ನೆರವಿನಿಂದ ಹಾದಿ ರಚಿಸುವುದು, ವಿಶ್ರಾಂತಿ ತಾಣಗಳನ್ನು ನಿರ್ಮಿಸುವುದೂ ಇದರಲ್ಲಿ ಸೇರಿದೆ. ಬಳಿಕ ಸ್ಥಳೀಯರಿಗೆ ಅರಣ್ಯ ಇಲಾಖೆಯಿಂದ ತರಬೇತಿ ನೀಡಿ ಮಾರ್ಗದರ್ಶಕರಾಗಿ ನೇಮಿಸಲಾಗುತ್ತದೆ. ಇದರಿಂದ ಸ್ಥಳಿಯವಾಗಿ ಉದ್ಯೋಗವೂ ಸೃಷ್ಟಿಯಾದಂತಾಗುತ್ತದೆ. ಸುಬ್ರಹ್ಮಣ್ಯದಲ್ಲಿ ಕೊಲ್ಲಮೊಗ್ರು, ಪಂಜದ ಬಂಟಮಲೆ, ಬಂಟ್ವಾಳದ ವೀರಕಂಬ, ಬೆಳ್ತಂಗಡಿಯ ಗಡಾಯಿಕಲ್ಲು ಮೊದಲಾದೆಡೆ ಆರಂಭಿಕ ಹಂತದಲ್ಲಿ ಚಾರಣ ಹಾದಿ ರಚಿಸಲು ಆರಣ್ಯ ಇಲಾಖೆ ಉದ್ದೇಶಿಸಿದೆ.

ಅನಧಿಕೃತ ಚಾರಣಕ್ಕಿಲ್ಲ ಅವಕಾಶ
ಇಲ್ಲಿ ಹಾದಿ ಎಂದರೆ ರಸ್ತೆಯಲ್ಲ; ನಡೆದು ಹೋಗಲು ಅನುಕೂಲವಾಗುವಂತೆ ಪೊದೆಗಳನ್ನು ತೆರವುಗೊಳಿಸಿ ಕಾಲು ಹಾದಿಗಳನ್ನು ರಚಿಸುವುದು. ಟ್ರೆಕ್ಕಿಂಗ್‌ ಬೇಸ್‌ನಲ್ಲಿ ಚಾರಣ ಮಾಡುವವರ ವಿವರ ಪಡೆಯುವುದು, ನಿರ್ದಿಷ್ಟ ದರ ವಿಧಿಸಿ ಅರಣ್ಯದೊಳಗೆ ಕರೆದುಕೊಂಡು ಹೋಗಿ ಸಂಜೆ ವಾಪಸು ಬರುವುದು. ಆ ಮೂಲಕ ಅನಧಿಕೃತವಾಗಿ ತೆರಳುವುದನ್ನು ಅಧಿಕೃತಗೊಳಿಸಿ, ನಿಗದಿತ ಸ್ಥಳಗಳಿಗೆ ಮಾತ್ರ ಟ್ರೆಕ್ಕಿಂಗ್‌ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ.

ದಾರಿ ತಪ್ಪದಂತೆ
ದ.ಕ. ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸಾಕಷ್ಟು ಚಾರಣ ತಾಣಗಳಿವೆ. ವಿವಿಧ ಜಿಲ್ಲೆ, ಹೊರ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯ ಜನರು ಬರುತ್ತಾರೆ. ಅವರಲ್ಲಿ ಶೇ. 50ರಷ್ಟು ಮಂದಿ ಮಾತ್ರ ಟ್ರೆಕ್ಕಿಂಗ್‌ ಬಗ್ಗೆ ಅರಿತವರು. ಸೂಕ್ತ ಮಾರ್ಗದರ್ಶನದೊಂದಿಗೆ, ಹಾದಿ ತಿಳಿದುಕೊಂಡು ಬರುತ್ತಾರೆ. ಉಳಿದವರು ಗೂಗಲ್‌ ಮ್ಯಾಪ್‌, ಬ್ಲಾಗ್‌/ಪತ್ರಿಕೆ/ ವೆಬ್‌ಸೈಟ್‌ಗಳಲ್ಲಿನ ಲೇಖನ, ಯೂಟ್ಯೂಬ್‌ ನೋಡಿ ಬರುತ್ತಾರೆ. ಇದರಿಂದ ದಾರಿತಪ್ಪುವ ಸಾಧ್ಯತೆಯೇ ಅಧಿಕವಾಗಿದೆ. ಪಶ್ಚಿಮ ಘಟ್ಟಗಳ ಅಡವಿಗಳಲ್ಲಿ ದಾರಿ ತಪ್ಪುವುದೆಂದರೆ ಅದು ಅಪಾಯವೇ ಸರಿ. ಇಂತಹ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲೇ ಟ್ರೆಕ್ಕಿಂಗ್‌ ರೂಟ್‌ಗಳನ್ನು ರಚಿಸಲಾಗುತ್ತಿದೆ.

ವ್ಯವಸ್ಥಿತ ದಾಖಲೀಕರಣ ಇಲ್ಲ
ಕರಾವಳಿಯ ವಿವಿಧ ಚಾರಣ ಕೇಂದ್ರಗಳಿಗೆ ಬರುವ ಎಲ್ಲ ಚಾರಣಿಗರ ದಾಖಲೀಕರಣಕ್ಕೆ ಸದ್ಯ ವ್ಯವಸ್ಥೆ ಇಲ್ಲ. ದ.ಕ. ಜಿಲ್ಲೆಯ ಕುಮಾರ ಪರ್ವತ, ಉಡುಪಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಮತ್ತು ಕೊಡಚಾದ್ರಿಗೆ ತೆರಳುವವರ ಕುರಿತಂತೆ ಮಾತ್ರ ಅರಣ್ಯ ಇಲಾಖೆಯಿಂದ ದಾಖಲೀಕರಣ ಮಾಡಲಾಗುತ್ತದೆ. ಇತರ ಚಾರಣ ಪಾಯಿಂಟ್‌ಗಳಿಗೆ ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ತೆರಳುವುದರಿಂದ ಅನಧಿಕೃತವೆಂದೇ ಹೇಳಬಹುದು. ಉಭಯ ಜಿಲ್ಲೆಗಳಲ್ಲಿ ಚಾರಣ ತಾಣಗಳಿಗೆ ವರ್ಷಕ್ಕೆ15-20 ಸಾವಿರದಷ್ಟು ಮಂದಿ ಬರುತ್ತಾರೆ. ಕುದುರೆಮುಖಕ್ಕೆ ಒಂದಕ್ಕೇ ವರ್ಷಕ್ಕೆ 4-5 ಸಾವಿರ ಮಂದಿ ತೆರಳುತ್ತಾರೆ. ಕೊಡಚಾದ್ರಿ, ಕುಮಾರ ಪರ್ವತಕ್ಕೂ ಇಷ್ಟೇ ಪ್ರಮಾಣದಲ್ಲಿ ಬರುತ್ತಾರೆ.

Advertisement

ಚಾರ್ಮಾಡಿ ಘಾಟಿಯ ಬಾಳೆಗುಡ್ಡ, ಜೇನುಕಲ್ಲು, ಕೊಡಕಲ್ಲು, ಮಿಂಚು ಕಲ್ಲು, ಶಿಶಿಲ ಭಾಗದಲ್ಲಿ ಎತ್ತಿನಭುಜ, ಕಲ್ಮಾರೆ, ಒಂತಿಬೆಟ್ಟ, ಶಿರಾಡಿಯ ಅರಮನೆ ಬೆಟ್ಟ, ಮುಗಿಲಗಿರಿ, ವೆಂಕಟಗಿರಿ, ಎಡಕುಮೇರಿ, ಉಡುಪಿಯಲ್ಲಿ ಕೊಡಚಾದ್ರಿ, ಕುದುರೆ ಮುಖದ ಸುತ್ತಲಿನ ವಿವಿಧ ಕೇಂದ್ರಗಳು ಹೆಚ್ಚು ಪ್ರಸಿದ್ಧ ತಾಣಗಳಾಗಿವೆ ಎನ್ನುತ್ತಾರೆ ಚಾರಣಿಗರಾದ ದಿನೇಶ್‌ ಹೊಳ್ಳ.

ಚಾರಣದ ನೆಪದಲ್ಲಿ ಪಶ್ಚಿಮ ಘಟ್ಟದ ವಿವಿಧ ಬೆಟ್ಟಗಳಿಗೆ ತೆರಳಿ ಪರಿಸರವನ್ನು ಹಾಳು ಮಾಡುವುದು, ಬೆಂಕಿ ಹಾಕುವುದು, ದಾರಿ ತಪ್ಪಿ ಇನ್ನೆಲ್ಲಿಗೋ ಹೋಗುವುದು, ಅನಧಿಕೃತವಾಗಿ ಅರಣ್ಯದೊಳಗೆ ಪ್ರವೇಶಿಸುವುದನ್ನು ತಡೆಯುವ ನಿಟ್ಟಿನಲ್ಲಿ ಟ್ರೆಕ್ಕಿಂಗ್‌ ರೂಟ್‌ಗಳನ್ನು ಅರಣ್ಯ ಇಲಾಖೆ ಸಹಯೋಗದಲ್ಲಿ ನಿರ್ಮಿಸಲು ಜಿಲ್ಲಾಡಳಿತ ಉದ್ದೇಶಿಸಿದೆ. ಶೀಘ್ರ ಈ ಹಾದಿಗಳನ್ನು ಅಂತಿಮಗೊಳಿಸಲಾಗುವುದು.
– ಮಾಣಿಕ್ಯ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ

ಇತ್ತೀಚಿನ ಪ್ರಕರಣ
– 2019ರ ಸೆ. 14ರಂದು ಕುಮಾರ ಪರ್ವತಕ್ಕೆ ತೆರಳಿದ್ದ ಬೆಂಗಳೂರು ಮೂಲದ ಟೆಕ್ಕಿಯೊಬ್ಬ ದಾರಿ ತಪ್ಪಿದ್ದು, ಕಾಡಿನಲ್ಲಿ ಅಲೆದಾಡಿ ಮೂರು ದಿನಗಳ ಬಳಿಕ ಟ್ರೆಕ್ಕಿಂಗ್‌ ಬೇಸ್‌ಗೆ ಮರಳಿದ್ದ.
– ಮೂರು ವರ್ಷದ ಹಿಂದೆ ಬಲ್ಲಾಳರಾಯನ ದುರ್ಗದಲ್ಲಿ ಹೃದಯಾಘಾತದಿಂದ ಚಾರಣಿಗರೊಬ್ಬರು ಮೃತಪಟ್ಟಿದ್ದರು.

ಇದನ್ನೂ ಓದಿ : ಕಾಂಗ್ರೆಸ್ ನ ‘ಪೇಸಿಎಂ’ ಪೋಸ್ಟರ್ ಗೆ ಬಿಜೆಪಿಯಿಂದ ‘ಪಿಎಫ್ಐ ಭಾಗ್ಯ’ದ ಪೋಸ್ಟರ್ ಅಭಿಯಾನ

– ಭರತ್ ಶೆಟ್ಟಿಗಾರ್ 

 

Advertisement

Udayavani is now on Telegram. Click here to join our channel and stay updated with the latest news.

Next