ಕಲಬುರಗಿ: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ನಿಟ್ಟಿನಲ್ಲಿ ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದಿಂದ ಸಕಲ ಮೂಲಸೌಕರ್ಯವುಳ್ಳ ಸುಸಜ್ಜಿತ ಟ್ರಕ್ ಟರ್ಮಿನಲ್ ನಿರ್ಮಿಸುವ ಗುರಿ ಹೊಂದಲಾಗಿದ್ದು, ಜಿಲ್ಲೆಯಲ್ಲಿ 40ರಿಂದ 50 ಕೋಟಿ ರೂ. ವೆಚ್ಚದ ಟ್ರಕ್ ಟರ್ಮಿನಲ್ ನಿರ್ಮಿಸುವ ಉದ್ದೇಶವಿದೆ ಎಂದು ನಿಗಮದ ಅಧ್ಯಕ್ಷ ಡಿ.ಎಸ್. ವೀರಯ್ಯ ತಿಳಿಸಿದರು.
ಟ್ರಕ್ ಟರ್ಮಿನಲ್ ನಿರ್ಮಾಣ ಕುರಿತಂತೆ ಶನಿವಾರ ಅಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮದಲ್ಲಿ ಹೆಚ್ಚಿನ ಅನುದಾನ ಮೀಸಲಿಲ್ಲ. ಆದ್ದರಿಂದ ಟ್ರಕ್ ಟರ್ಮಿನಲ್ ನಿರ್ಮಾಣವನ್ನು ಸಾರ್ವಜನಿಕ ಜಂಟಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ಚಿಂತಿಸಲಾಗುತ್ತಿದೆ. ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡಿದಲ್ಲಿ ನಿಗಮದಿಂದಲೇ ನಿರ್ಮಿಸಲಾಗುವುದು ಎಂದರು.
ಈಗಾಗಲೇ ಬೆಂಗಳೂರಿನ ಯಶವಂತಪುರ, ಧಾರವಾಡ ಹಾಗೂ ಮೈಸೂರಿನಲ್ಲಿ ಟರ್ಮಿನಲ್‌ಗಳು ಕಾರ್ಯ ನಿರ್ವಹಿಸುತ್ತಿವೆ. ನನ್ನ ಅವಧಿಯಲ್ಲಿ ಐದಾರು ಟರ್ಮಿನಲ್‌ಗಳ ನಿರ್ಮಾಣ ಮಾಡಬೇಕೆಂಬ ಉದ್ದೇಶವಿದೆ. ಬೆಂಗಳೂರಿನ ದಾಸನಪುರದಲ್ಲಿ 46 ಎಕರೆ, ಹುಬ್ಬಳ್ಳಿಯಲ್ಲಿ 56 ಎಕರೆ, ಹೊಸಪೇಟೆಯಲ್ಲಿ 48 ಎಕರೆ ಜಮೀನು ನಿರ್ಮಾಣಕ್ಕೆ ಲಭ್ಯವಿದೆ. ಮಂಗಳೂರು ಮತ್ತು ಶಿವಮೊಗ್ಗದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಜಮೀನು ಮೀಸಲಿಡಲಾಗಿದ್ದು, ಕಲಬುರಗಿಯಲ್ಲಿ ಸ್ಥಳ ಗುರುತಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಲಾರಿಗಳ ಸಂಚಾರ ದಟ್ಟಣೆ ಹೆಚ್ಚಿದ್ದು, ಟ್ರಕ್-ಲಾರಿಗಳ ನಿಲುಗಡೆಗೆ ಟರ್ಮಿನಲ್ ನಿರ್ಮಾಣ ಅತ್ಯಗತ್ಯವಾಗಿದೆ. ಹೀಗಾಗಿ 40ರಿಂದ 50 ಎಕರೆ ಪ್ರದೇಶದಲ್ಲಿ ಸಕಲ ವ್ಯವಸ್ಥೆಯುಳ್ಳ ಮಾದರಿ ಟ್ರಕ್ ಟರ್ಮಿನಲ್ ನಿರ್ಮಿಸುವ ಉದ್ದೇಶಿಸಿದೆ. ಇದಕ್ಕೆ ಪೂರಕವಾಗಿ ಅಧಿ ಕಾರಿಗಳ ಸಭೆ ನಡೆಸಿ ಸೂಕ್ತ ಜಮೀನು ಗುರುತಿಸಲು ನಿರ್ದೇಶನ ನೀಡಿದ್ದೇನೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕಮಲಾಪುರದ ಬಳಿ 10 ಎಕರೆ ಹಾಗೂ ಕಲಬುರಗಿ-ಶಹಾಬಾದ ರಸ್ತೆಯ ನಂದೂರ (ಕೆ) ಬಳಿ 10 ಎಕರೆ ಜಮೀನು ಕೆಐಡಿಬಿ ಜಮೀನು ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೇ, ಸೂಕ್ತ ಸ್ಥಳದ ಹುಡುಕಾಟ ನಡೆಸಲಾಗುವುದು. ಕೆಐಡಿಬಿ ಜಮೀನು ಮತ್ತು ಹೊಸದಾಗಿ ಭೂ ಸ್ವಾಧೀನದಿಂದ ಹೆಚ್ಚಿನ ಆರ್ಥಿಕ ಹೊರೆಯಾಗಲಿದೆ. ಆದ್ದರಿಂದ ಸರ್ಕಾರಿ ಗೈರಾಣಿ ಭೂಮಿ ಲಭ್ಯತೆ ಇರುವ ಬಗ್ಗೆ ಜಿಲ್ಲಾಡಳಿತ ಮಾಹಿತಿ ಪಡೆಯುತ್ತಿದ್ದೇನೆ ಎಂದರು.
ಟ್ರಕ್ ಟರ್ಮಿನಲ್ ಜಿಲ್ಲೆಗೆ ಕಳಸ ಇದ್ದಂತೆ. ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇತ್ತೀಚೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಟರ್ಮಿನಲ್ ಸ್ಥಾಪನೆಗೆ ಸರ್ಕಾರದಿಂದ ಅಗತ್ಯ ಹಣಕಾಸು ನೆರವು ಪಡೆಯಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ| ಶಂಕರ ವಣಿಕ್ಯಾಳ, ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಜಿಲ್ಲಾಡಳಿತ ಎಲ್ಲ ರೀತಿಯ ಸಹಕಾರ ನೀಡುತ್ತದೆ ಎಂದು ಹೇಳಿದರು.
ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷಹಣಮಂತ ರೆಡ್ಡಿ, ಕಾರ್ಯದರ್ಶಿ ಜಗನ್ನಾಥ ಪಾಟೀಲ, ವಿವಿಧ ತಾಲೂಕಿನ ತಹಶೀಲ್ದಾರ್‌ಗಳಾದ ಪ್ರಕಾಶ ಕುದರಿ, ಅಂಜುಮ ತಬಸ್ಸುಮ್, ಗಂಗಾಧರ ಪಾಟೀಲ, ಕೆ.ಆನಂದಶೀಲ, ಕೆಐಎಡಿಬಿ ಸಹಾಯಕ ಅಭಿಯಂತರ ಸುಭಾಷ ನಾಯಕ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾ ಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.